ಮಡಿಕೇರಿ, ಜು. 29: ದೇಶದಲ್ಲಿ ಕಾಫಿ ಬೆಳೆಯನ್ನು ಹೆಚ್ಚಾಗಿ ನೆರಳಿನಲ್ಲಿ ಬೆಳೆಯುತ್ತಾರೆ. ಮಳೆಗಾಲದಲ್ಲಿ ಅದರಲ್ಲೂ ಅಧಿಕ ಮಳೆ ಬೀಳುವ ಪ್ರದೇಶಗಳಲ್ಲಿ, ಹೆಚ್ಚು ನೆರಳಿರುವ ತೋಟಗಳಲ್ಲಿ ಕೊಳೆರೋಗ ಸಾಮಾನ್ಯವಾಗಿ ಕಂಡುಬರುತ್ತದೆ. ಕಾಫಿ ತೋಟಗಳಲ್ಲಿ ಕಾಣುವ ರೋಗಗಳಲ್ಲಿ ಈ ರೋಗ ಎರಡನೆಯ ಪ್ರಮುಖ ರೋಗವಾಗಿದ್ದು, ಶೇ. 20 ರಿಂದ 30 ಬೆಳೆ ಹಾನಿಯಾದ ವರದಿಗಳಾಗಿವೆ.

ಬಿಡುವಿಲ್ಲದ ಮುಂಗಾರು ಮಳೆ, ಶೇ. 95-100 ರಷ್ಟು ವಾತಾವರಣದಲ್ಲಿನ ತೇವಾಂಶ, ತೋಟದಲ್ಲಿನ ದಟ್ಟವಾದ ನೆರಳು, ಗಾಳಿಯ ಹೊಡೆತಕ್ಕೆ ಸಿಗುವ ಕೊಲ್ಲಿಯ ಅಕ್ಕಪಕ್ಕದ ತೋಟಗಳು, ಮಂಜು ಬೀಳುವ ಪ್ರದೇಶದಲ್ಲಿನ ತೋಟಗಳು, ಕೇವಲ ಸಿಲ್ವರ್ ಮರಗಳನ್ನು ನೆರಳಾಗಿ ಬೆಳೆಸಿರುವ ತೋಟಗಳಲ್ಲಿ ಕೊಳೆರೋಗ ಹೆಚ್ಚಾಗಿ ಕಂಡು ಬರುತ್ತದೆ.

ರೋಗದ ಲಕ್ಷಣಗಳು: ಈ ರೋಗ ಕೊಳೆರೋಗ ನಾಕ್ಷಿಯಾ ಎಂಬ ಶಿಲೀಂದ್ರದಿಂದ ಬರುತ್ತದೆ. ಮೊದಲಿಗೆ ಎಲೆಯ ತಳಭಾಗದಲ್ಲಿ ಬಿಳಿ ಪುಡಿಯಂತೆ ಆವರಿಸಿಕೊಂಡು, ಕ್ರಮೇಣ ಕಪ್ಪು ಬಣ್ಣಕ್ಕೆ ತಿರುಗಿ ಎಲೆಗಳು ಹಾಗೂ ಕೊಂಬೆಗಳು ಕೊಳೆಯಲು ಪ್ರಾರಂಭವಾಗುತ್ತದೆ.

ಕೊಳೆರೋಗದ ಹತೋಟಿ ಕ್ರಮಗಳು: ಸರಿಯಾದ ಗಿಡ ಕಸಿ ಕ್ರಮಗಳನ್ನು ಅನುಸರಿಸುವದು. ನಿಗದಿತ ಪ್ರಮಾಣದಲ್ಲಿ ನೆರಳನ್ನು ಉಳಿಸಿಕೊಳ್ಳುವದು. ಕಳೆಯನ್ನು ಹತೋಟಿಯಲ್ಲಿಡುವದು. ತೋಟದಲ್ಲಿ ತೊಟ್ಟಿಲು ಗುಂಡಿಗಳನ್ನು ತೆಗೆಯುವದು. ಕಾಫಿ ಗಿಡದ ಬುಡದಲ್ಲಿನ ತರಗನ್ನು ಬಿಡಿಸಿ, ಗಾಳಿಯಾಡುವಂತೆ ಮಾಡುವದು. ಕಾಫಿ ಗಿಡದ ಮೇಲೆ ಬಿದ್ದಂತಹ ಸಿಲ್ವರ್ ಮರಗಳ ಎಲೆ/ತರಗನ್ನು ತೆಗೆಸುವದು. ರೋಗ ಕಂಡು ಬಂದ ಎಲೆ/ಕಾಯಿಗಳನ್ನು ಕಿತ್ತು ನಾಶಪಡಿಸುವದು. ಮುಂಗಾರಿನ ಮೊದಲು ಶೇ.1 ರ ಬೋರ್ಡೋ ದ್ರಾವಣ ಸಿಂಪಡಿಸುವದು. ಆಗಸ್ಟ್‍ನಲ್ಲಿ ಬಾವಿಸ್ಟಿನ್ 120 ಗ್ರಾಂ. 200 ಲೀ. ನೀರಿನಲ್ಲಿ ಬೆರೆಸಿ ರೋಗ ಹೊಂದಿರುವ ಗಿಡಗಳಿಗೆ ಸಿಂಪಡಿಸುವದು. ಹೆಚ್ಚಿನ ಮಾಹಿತಿಗೆ ಸಮೀಪದ ಕಾಫಿ ಮಂಡಳಿ ಕಚೇರಿಯನ್ನು ಸಂಪರ್ಕಿಸಬಹುದು ಎಂದು ವೀರಾಜಪೇಟೆ ಕಾಫಿ ಮಂಡಳಿಯ ಉಪ ನಿರ್ದೇಶಕರು ತಿಳಿಸಿದ್ದಾರೆ.