ಮಡಿಕೇರಿ, ಜು. 29: ಗೋಣಿಕೊಪ್ಪಲು ಐ.ಸಿ.ಎ.ಆರ್. ಕೃಷಿ ವಿಜ್ಞಾನ ಕೇಂದ್ರ, ವತಿಯಿಂದ ಕಾಳುಮೆಣಸಿನಲ್ಲಿ ಬರುವ ಶೀಘ್ರ ಸೊರಗು ರೋಗದ ಹತೋಟಿಯ ಬಗ್ಗೆ ವೀರಾಜಪೇಟೆ ತಾಲೂಕಿನ ಕುಂದಾ ಗ್ರಾಮದ ತೀತಮಾಡ ರಮೇಶ್ ಎಂಬವರ ಕಾಳುಮೆಣಸಿನ ತೋಟದಲ್ಲಿ ಮೂಂಚೂಣಿ ಪ್ರಾತ್ಯಕ್ಷಿಕೆಯ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ನೂತನವಾಗಿ ಬಿಡುಗಡೆಯಾಗಿರುವ ತಂತ್ರಜ್ಞಾನವನ್ನು ಜಿಲ್ಲೆಯ ಆಯ್ದ ರೈತರುಗಳ ತಾಲೂಕುಗಳಲ್ಲಿ ಅಳವಡಿಸಿದ ನೂತನ ತಂತ್ರಜ್ಞಾನದ ಪ್ರಯೋಜನವನ್ನು ರೈತರುಗಳಿಗೆ ತಿಳಿಯಪಡಿಸಲಾಯಿತು.

ಗೋಣಿಕೊಪ್ಪಲು ಕೃಷಿ ವಿಜ್ಞಾನ ಕೇಂದ್ರದ ಸಸ್ಯ ಸಂರಕ್ಷಣಾ ತಜ್ಞ ಕೆ.ವಿ. ವೀರೇಂದ್ರಕುಮಾರ್ ಕಾಳುಮೆಣಸಿನಲ್ಲಿ ಬರುವ ಶೀಘ್ರ ಸೊರಗು ರೋಗದ ನಿರ್ವಹಣೆಗಾಗಿ ತಂತ್ರಜ್ಞಾನ ಪರೀಕ್ಷೆಯ ಮುಖಾಂತರ ಕಂಡುಹಿಡಿದಿರುವ ನೂತನ ತಂತ್ರಜ್ಞಾನವಾದ ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆ, ಹೆಸರುಘಟ್ಟ, ಬೆಂಗಳೂರು ಇವರು ಅಭಿವೃದ್ಧಿ ಪಡಿಸಿದ ಅರ್ಕಾ ಸೂಕ್ಷ್ಮಾಣು ಜೀವಿಗಳ ಸಮೂಹದ (ಅರ್ಕಾ ಮೈಕ್ರೊಬಿಯಲ್ ಕನ್ಸರ್ಷಿಯಾ) ದ್ರಾವಣವನ್ನು ಬುಡಕ್ಕೆ ಸುರಿಯುವ ಮತ್ತು ಭಾರತೀಯಾ ಸಾಂಬಾರು ಬೆಳೆಗಳ ಸಂಶೋಧನಾ ಸಂಸ್ಥೆ, ಕ್ಯಾಲಿಕಟ್ ಇವರು ಶಿಫಾರಸ್ಸು ಮಾಡಿದ, ಪೊಟ್ಯಾಸಿಯಂ ಪಾಸ್‍ಪೋನೇಟ್ ದ್ರಾವಣವನ್ನು ಸಿಂಪಡಿಸುವ ಹಾಗೂ ಪ್ಲಾಸ್ಟಿಕ್ ಹಾಳೆಯಿಂದ ಬುಡವನ್ನು ಮುಚ್ಚುವ ಪ್ರಾತ್ಯಕ್ಷಿಕೆಯನ್ನು ನಡೆಸಿದರು.

ಇದರ ಜೊತೆಗೆ ಸಮಗ್ರ ಬೇಸಾಯ ಕ್ರಮಗಳಾದ ಗೊಬ್ಬರಗಳನ್ನು ನೀಡುವದು, ಕಾಲಕಾಲಕ್ಕೆ ಬೋರ್ಡೊ ದ್ರಾವಣವನ್ನು ಸಿಂಪಡಿಸುವದು ಮುಂತಾದವುಗಳ ಬಗ್ಗೆ ಮಾಹಿತಿಯನ್ನು ನೀಡಿದರು. ಪ್ರಗತಿಪರ ಕೃಷಿಕ ತೀತಮಾಡ ರಮೇಶ್ ಆಸಕ್ತಿಯಿಂದ ನೂತನವಾಗಿ ಬಿಡುಗಡೆಯಾಗಿರುವ ತಂತ್ರಜ್ಞಾನವನ್ನು ತಮ್ಮ ತೋಟದಲ್ಲಿ ಅಳವಡಿಸಿದ್ದು, ಇತರ ರೈತರಿಗೆ ಮಾದರಿಯಾಗಿದ್ದಾರೆ.

ಈ ಸಂದರ್ಭ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ. ಸಾಜೂ ಜಾರ್ಜ್ ಮತ್ತು ತೋಟಗಾರಿಕೆ ವಿಷಯ ತಜ್ಞ ಡಾ. ಪ್ರಭಾಕರ ಅರ್ಕಾ ಸೂಕ್ಷ್ಮಾಣು ಜೀವಿಗಳ ಸಮೂಹದ (ಅರ್ಕಾ ಮೈಕ್ರೊಬಿಯಲ್ ಕನ್ಸರ್ಷಿಯಾ) ದ್ರಾವಣವನ್ನು ಬುಡಕ್ಕೆ ಸುರಿಯುವ ಮತ್ತು ಭಾರತೀಯಾ ಸಾಂಬಾರು ಬೆಳೆಗಳ ಸಂಶೋಧನಾ ಸಂಸ್ಥೆ, ಕ್ಯಾಲಿಕಟ್ ಇವರು ಶಿಫಾರಸ್ಸು ಮಾಡಿದ, ಪೊಟ್ಯಾಸಿಯಂ ಪಾಸ್‍ಪೋನೇಟ್ ದ್ರಾವಣವನ್ನು ಸಿಂಪಡಿಸುವ ಪ್ರಾತ್ಯಕ್ಷಿಕೆಯಲ್ಲಿ ಭಾಗವಹಿಸಿದ್ದರು.