ಸೋಮವಾರಪೇಟೆ, ಜು. 29: ಕಳೆದೆರಡು ವಾರದಿಂದ ಜೋರಾಗಿ ಸುರಿಯುತ್ತಿದ್ದ ಮಳೆ ಇಂದು ಬಿಡುವು ನೀಡಿದ್ದು, ಕೆಸರು ಗದ್ದೆಯಲ್ಲಿ ಒಕ್ಕಲಿಗ ಜನಾಂಗಕ್ಕೆ ಸೇರಿದ ಮಕ್ಕಳು, ಪುರುಷರು ಮಹಿಳೆಯರಾದಿಯಾಗಿ ಎಲ್ಲಾ ವಯೋಮಾನದವರೂ ಮಿಂದೇಳುತ್ತಾ ಸಂಭ್ರಮಿಸಲು ಸಹಕಾರಿಯಾಗಿತ್ತು.ಉಳುಮೆ ಕಾರ್ಯ ಪೂರ್ಣಗೊಂಡು ನಾಟಿ ಕಾರ್ಯಕ್ಕೆ ಸಿದ್ಧವಾಗಿದ್ದ ಗದ್ದೆಯಲ್ಲಿ ಮಂಡಿಯವರೆಗೂ ಕೆಸರು. ಕೆಸರಿನ ಓಕುಳಿಯೊಂದಿಗೆ ತೆಳುವಾದ ಮಳೆ ಹನಿಗಳ ಸಿಂಚನ. ಮೈಯೆಲ್ಲಾ ಕೆಸರಾಗಿದ್ದರೂ ಕುಗ್ಗದ ಉತ್ಸಾಹದೊಂದಿಗೆ ಹಗ್ಗವನ್ನೆಳೆದ ಮಹಿಳೆಯರು-ಪುರುಷರು, ವಾಲಿಬಾಲ್ ಆಟ ಕೆಸರಿನಲ್ಲಿ ಮುಳುಗಿದ ಮಂದಿ ಕೆಸರು ಗದ್ದೆ ಕ್ರೀಡಾಕೂಟದ ನಿಜವಾದ ಸವಿ ಅನುಭವಿಸಿದರು.
ಒಕ್ಕಲಿಗರ ಯುವ ವೇದಿಕೆ ವತಿಯಿಂದ ಸಮೀಪದ ಗೌಡಳ್ಳಿ ಗ್ರಾಮದ ದಿ.ಪಾರ್ವತಮ್ಮ ಪುಟ್ಟಸ್ವಾಮಿ ಅವರ ಸೇರಿದ ಗದ್ದೆಯಲ್ಲಿ ಆಯೋಜಿಸಲಾಗಿದ್ದ 4ನೇ ವರ್ಷದ ಕ್ರೀಡಾಕೂಟದಲ್ಲಿ ಒಕ್ಕಲಿಗ ಬಾಂಧವರು ತಮ್ಮೆಲ್ಲಾ ಕೆಲಸ ಕಾರ್ಯಗಳನ್ನು ಬದಿಗೊತ್ತಿ ಕ್ರೀಡಾಸ್ಫೂರ್ತಿಯೊಂದಿಗೆ ಭಾಗವಹಿಸಿದ್ದರು.
ತಾಲೂಕಿನ ಗ್ರಾಮೀಣ ಭಾಗಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕೆಸರು ಗದ್ದೆಯಲ್ಲಿ ವಿವಿಧ ಕ್ರೀಡೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಪುರುಷರು, ಮಹಿಳೆಯರು, ಯುವಕರು, ಯುವತಿಯರೂ
(ಮೊದಲ ಪುಟದಿಂದ) ಸೇರಿದಂತೆ ಮಕ್ಕಳೂ ಸಹ ಕೆಸರಿನ ಸಿಂಚನದೊಂದಿಗೆ ಗದ್ದೆಯಲ್ಲಿ ಮಿಂದೆದ್ದರು.
ಕ್ರೀಡಾಕೂಟಕ್ಕೆ ಚಾಲನೆ ನೀಡಿದ ಬೆಂಗಳೂರಿನ ಉದ್ಯಮಿ ಹರಪ್ಪಳ್ಳಿ ರವೀಂದ್ರ ಮಾತನಾಡಿ, ಗ್ರಾಮೀಣ ಕ್ರೀಡೆಗಳು ಮರೆಯಾಗುತ್ತಿರುವ ಇಂದಿನ ದಿನಗಳಲ್ಲಿ ಒಕ್ಕಲಿಗರ ಯುವ ವೇದಿಕೆ ಕ್ರೀಡಾಕೂಟ ನಡೆಸುತ್ತಿರುವದು ಜನಾಂಗ ಬಾಂಧವರಲ್ಲಿ ಒಗ್ಗಟ್ಟು ಮೂಡುತ್ತದೆ. ಮುಂದಿನ ದಿನಗಳಲ್ಲಿ ಒಕ್ಕಲಿಗರು ಸಂಘಟಿತರಾಗಿ ರಾಜ್ಯ ಮಟ್ಟದ ಕ್ರೀಡಾಕೂಟವನ್ನು ನಡೆಸುವಂತಾಗಲೆಂದು ಹಾರೈಸಿದರು.
ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ವಿಧಾನ ಪರಿಷತ್ತಿನ ಮಾಜಿ ಸದಸ್ಯ ಎಸ್.ಜಿ. ಮೇದಪ್ಪ, ತಾಲೂಕಿನಲ್ಲಿ ಶೇ. 65 ರಷ್ಟು ಒಕ್ಕಲಿಗ ಜನಾಂಗದವರಿದ್ದು, ಎಲ್ಲರೂ ಒಗ್ಗಟ್ಟಿನಿಂದ ಬಾಳುವಂತಾಗಬೇಕು ಎಂದರು.
ಕಾರ್ಯಕ್ರಮದ ವೇದಿಕೆಯಲ್ಲಿ ದಾನಿಗಳಾದ ಅರುಣ್ ಕೊತ್ನಳ್ಳಿ, ಬೆಂಗಳೂರು ಒಕ್ಕಲಿಗರ ಯುವ ಬ್ರಿಗೇಡ್‍ನ ಅಧ್ಯಕ್ಷ ಗಿರೀಶ್ ಮಲ್ಲಪ್ಪ, ಯುವ ವೇದಿಕೆ ಅಧ್ಯಕ್ಷ ಬಿ.ಜೆ. ದೀಪಕ್, ಜಿ.ಪಂ. ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್, ಸದಸ್ಯರಾದ ಪೂರ್ಣಿಮಾ ಗೋಪಾಲ್, ಕೆ.ಪಿ. ಚಂದ್ರಕಲಾ, ತಾ.ಪಂ. ಸದಸ್ಯೆ ಕುಸುಮಾ ಅಶ್ವಥ್, ದೊಡ್ಡಮಳ್ತೆ ಗ್ರಾ.ಪಂ. ಅಧ್ಯಕ್ಷ ದಿವಾಕರ್, ಪ್ರಮುಖರಾದ ಮಂಜೂರು ತಮ್ಮಣ್ಣಿ, ಹೆಚ್.ಕೆ.ತಮ್ಮೇಗೌಡ, ಪುರುಷೋತ್ತಮ್, ನತೀಶ್ ಮಂದಣ್ಣ ಇದ್ದರು. ಜಿಮ್ಮಿ ಕಾರ್ಯಕ್ರಮ ನಿರ್ವಹಿಸಿದರು.
ಕ್ರೀಡಾಕೂಟದಲ್ಲಿ ಪುರುಷರಿಗೆ ಹಗ್ಗ ಜಗ್ಗಾಟ, ವಾಲಿಬಾಲ್ ಹಾಗೂ ಕೆಸರು ಗದ್ದೆ ಓಟದ ಸ್ಪರ್ಧೆ ನಡೆಯಿತು. ಮಹಿಳೆಯರಿಗೆ ಥ್ರೋಬಾಲ್, ಹಗ್ಗ ಜಗ್ಗಾಟ ಹಾಗೂ ಕೆಸರು ಗದ್ದೆ ಓಟದ ಸ್ಪರ್ಧೆಗಳು ನಡೆಯಿತು. ವಿವಿಧ ಮನೋರಂಜನಾ ಕ್ರೀಡೆಗಳು ಜರುಗಿದವು.