ಗೋಣಿಕೊಪ್ಪಲು, ಜು. 29: ಗೋಣಿಕೊಪ್ಪದಲ್ಲಿ ನಡೆದ ಜೆಡಿಎಸ್ ಮುಖಂಡರ ಸಭೆಯಲ್ಲಿ ವೀರಾಜಪೇಟೆ ವಿಧಾನ ಸಭಾ ಕ್ಷೇತ್ರಕ್ಕೆ ಅಭ್ಯರ್ಥಿ ಪ್ರಕಟಿಸುವಂತೆ ಕುಮಾರಸ್ವಾಮಿ ಅವರಿಗೆ ಮನವಿ ಸಲ್ಲಿಸಲು ತೀರ್ಮಾನಿಸಲಾಯಿತು.

ಸಭೆಯಲ್ಲಿ ಮಾತನಾಡಿದ ಕಾರ್ಯಾಧ್ಯಕ್ಷ ಕೆ.ಆರ್ ಸುರೇಶ್, ಈಗಾಗಲೇ ಪಕ್ಷ ಬಲಿಷ್ಟಗೊಳ್ಳುತ್ತಿದ್ದು ಎಲ್ಲೆಡೆ ಪಕ್ಷದ ಅಭ್ಯರ್ಥಿ ಬಗ್ಗೆ ಚರ್ಚೆಯಾಗುತ್ತಿದೆ. ಹಾಗಾಗಿ ರಾಜಾಧ್ಯಕ್ಷರು ಕೂಡಲೇ ಅಭ್ಯರ್ಥಿ ಪ್ರಕಟಿಸಿದರೆ ಪಕ್ಷ ಸಂಘಟನೆಗೆ ಬಲಬರಲಿದೆ ಎಂದರು. ವಿಶ್ವನಾಥ್ ಪಕ್ಷ ಸೇರಿರುವದರಿಂದ ಅವರ ಅಪಾರ ಬೆಂಬಲಿಗರು ಪಕ್ಷ ಸೇರಲಿದ್ದಾರೆ. ಹಾಗಾಗಿ ಅಭ್ಯರ್ಥಿ ಪ್ರಕಟಿಸಿದಲಿ, ಎಲ್ಲರೂ ಒಗ್ಗೂಡಿ ಪಕ್ಷ ಸಂಘಟಿಸಲು ಅನುಕೂಲವಾಗುತ್ತದೆ ಎಂದರು.

ದಯಾ ಚಂಗಪ್ಪ ಮಾತನಾಡಿ, ಕಳೆದ ಚುನಾವಣೆಯಲ್ಲಿ ಹಲವು ಮಂದಿ ಆಕಾಂಕ್ಷಿಗಳಿದ್ದರು. ಅವರುಗಳೊಂದಿಗೆ ಚರ್ಚಿಸಿ ಅವರ ಹೆಸರುಗಳನ್ನು ಕುಮಾರಸ್ವಾಮಿ ಅವರಿಗೆ ಸಲ್ಲಿಸಲು ಹೇಳಿದ್ದರು.

ಕಳೆದ ಬಾರಿ ಇಬ್ಬರು ಅಲ್ಪಸಂಖ್ಯಾತ ಅಭ್ಯರ್ಥಿಗಳು ಮತ್ತು ಇಬ್ಬರು ಕೊಡವ ಆಕಾಂಕ್ಷಿಗಳಿದ್ದರು. ಹಾಗಾಗಿ ಅವರುಗಳು ಈ ಬಾರಿಯು ಸ್ಪರ್ಧಿಸಲು ಉತ್ಸಾಹ ಹೊಂದಿದ್ದು, ಕೂಡಲೇ ಚರ್ಚಿಸಲು ತೀರ್ಮಾನಿಸಲಾಯಿತು.

ಅಧ್ಯಕ್ಷ ಮನೆಯಪಂಡ ಬೆಳ್ಳ್ಯಪ್ಪ ಮಾತನಾಡಿ, ಕಕ್ಕಡ ನಂತರ ಕಚೇರಿ ಉದ್ಘಾಟನೆ ಮಾಡಲಾಗುವದು. ತದನಂತರ ಪ್ರತಿ ಹೋಬಳಿ ಮಟ್ಟದಲ್ಲಿ ಸಭೆ ಕರೆಯಲಾಗುವದು. ಈಗಾಗಲೇ ಹಲವು ಹೋಬಳಿ ಅಧ್ಯಕ್ಷರನ್ನು ಆಯ್ಕೆ ಮಾಡಲಾಗಿದೆ. ಉಳಿದ ಹೋಬಳಿ ಅಧ್ಯಕ್ಷರುಗಳನ್ನು ಕೂಡಲೇ ಆಯ್ಕೆ ಮಾಡಲಾಗುವದು ಎಂದರು. ಹೋಬಳಿ ಅಧ್ಯಕ್ಷರುಗಳು ಕೂಡಲೇ ಬೂತ್ ಸಮಿತಿಯನ್ನು ರಚಿಸಿ ವರದಿಕೊಡುವಂತೆ ಹೇಳಿದರು.

ವೀರಾಜಪೇಟೆ ವಿಧಾನ ಸಭಾ ಕ್ಷೇತ್ರದ ಜೆಡಿಎಸ್ ಯುವ ಘಟಕದ ಅಧ್ಯಕ್ಷರಾಗಿ ಬೇಗೂರಿನ ಮತ್ರಂಡ ಎನ್. ಬೋಪ್ಪಣ್ಣ(ಸುಕು)ರವರನ್ನು ಪ್ರಧಾನ ಕಾರ್ಯದರ್ಶಿಯಾಗಿ ಮಲ್ಲೇಂಗಡ ವಿನೀಶ್ ಗಣಪತಿ ಅವರನ್ನು ನಿಟ್ಟೂರು ಸಭೆಯಲ್ಲಿ ಆಯ್ಕೆ ಮಾಡಲಾಯಿತು.

ಜೆಡಿಎಸ್ ಸೇರ್ಪಡೆ: ಸುಳುಗೊಡು ಗ್ರಾಮದ ಮಲ್ಲಂಡ ಬಿದ್ದಪ್ಪ ಬಿಜೆಪಿ ತೊರೆದು ಬೆಂಬಲಿಗರೊಂದಿಗೆ ಜೆಡಿಎಸ್ ಸೇರಿದ್ದರು. ಕೋತೂರಿನ ಮನ್ನಕ್ಕಮನೆ ವಾಸು ಕಾಂಗ್ರೆಸ್ ತೊರೆದು ಜೆಡಿಎಸ್ ಸೇರಿದರು.

ಪ್ರಧಾನ ಕಾರ್ಯದರ್ಶಿ ವಿ.ಪಿ. ಲೋಹಿತ್ ಗೌಡ ಮಾತನಾಡಿ, ರಾಜ್ಯ ಬೂತ್ ಸಮಿತಿ ಅಧ್ಯಕ್ಷ ರಮೇಶ್ ಬಾಬು ಹಲವು ಸಮಿತಿಗಳನ್ನು ರಚಿಸಿ ವರದಿ ಕೊಡುವಂತೆ ತಿಳಿಸಿದ್ದಾರೆ. ಈಗಾಗಲೇ ವಿಧಾನಸಭಾ ಕ್ಷೇತ್ರ ಸಮಿತಿ, ಯುವ ಘಟಕ ಸಮಿತಿ ಕಾನೂನು ಘಟಕ, ಅಲ್ಪಸಂಖ್ಯಾತರ ಸಮಿತಿಗಳನ್ನು ರಚಿಸಲಾಗಿದೆ. ಇನ್ನು ಉಳಿದ ಸಮಿತಿಗಳನ್ನು ಕೂಡಲೇ ರಚಿಸಿ ಪಟ್ಟಿ ಸಲ್ಲಿಸಲಾಗುವದು ಎಂದರು.

ಸಭೆಯಲ್ಲಿ ರಾಜ್ಯ ಸಮಿತಿ ಸದಸ್ಯ ವಿ.ಎಸ್. ಸುಬ್ರಮಣಿ, ವಕ್ತರರಾದ ಎಂ.ಟಿ. ಕಾರ್ಯಪ್ಪ, ಚಂದ್ರಶೇಖರ್ ಸೀಗೆತೋಡು, ಪಿ.ಎಸ್. ಮುತ್ತ, ವಕೀಲರುಗಳಾದ ವಿ.ಜಿ. ಮಂಜುನಾಥ್ ಮತ್ತು ಸುರೇಶ್, ಹೆಚ್.ಜಿ. ಗೋಪಾಲ್ ವಿ.ಎ. ಪ್ರಶಾಂತ್, ತನೇಶ್ ಮತ್ತಿತರರು ಹಾಜರಿದ್ದರು.