ಮಡಿಕೇರಿ, ಜು. 29: ಪ್ರಾಥಮಿಕ ಶಾಲಾ ಶಿಕ್ಷಕ ಸಮೂಹಕ್ಕೆ ಮಾರಕವಾಗಿರುವ ನೂತನ ಪಿಂಚಣಿ ಯೋಜನೆಯನ್ನು ರದ್ದುಗೊಳಿಸ ಬೇಕು ಮತ್ತು ಸರಕಾರಿ ಶಾಲೆಗಳ ಉಳಿವಿಗಾಗಿ ಆಂಗ್ಲ ಭಾಷಾ ಪÀÇರ್ವ ಪ್ರಾಥಮಿಕ ಶಾಲೆಗಳನ್ನು ಆರಂಭಿಸಬೇಕೆಂದು ಒತ್ತಾಯಿಸಿ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಕೊಡಗು ಜಿಲ್ಲಾ ಘಟಕ ಆ. 5 ರಂದು ಪ್ರತಿಭಟನೆ ನಡೆಸಲು ನಿರ್ಧರಿಸಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜಿಲ್ಲಾಧ್ಯಕ್ಷ ಹೆಚ್.ಎಸ್. ಚೇತನ್, ಕೊಡಗು ಜಿಲ್ಲಾ ವ್ಯಾಪ್ತಿಯಲ್ಲಿ ಕಾರ್ಯನಿರ್ವ ಹಿಸುತ್ತಿರುವ 1500 ಪ್ರಾಥಮಿಕ ಶಾಲಾ ಶಿಕ್ಷಕರಿಗೆ ನೂತನ ಪಿಂಚಣಿ ಯೋಜನೆಯನ್ನು ರದ್ದು ಪಡಿಸಿ ಹಿಂದಿನ ಪಿಂಚಣಿ ಯೋಜನೆ ಯನ್ನೇ ಮುಂದುವರಿಸಬೇಕು ಮತ್ತು ಏಳನೇ ವೇತನ ಆಯೋಗದಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಸೀಮಿತವಾಗಿ ವೇತನ ಶ್ರೇಣಿಯನ್ನು ನಿಗದಿಪಡಿಸಬೇಕೆಂದು ಆಗ್ರಹಿಸಿದರು.

ಈ ಎರಡು ಬೇಡಿಕೆಗಳೂ ಸೇರಿದಂತೆ ಪ್ರಮುಖ ಏಳು ಬೇಡಿಕೆಗಳ ಮನವಿ ಪತ್ರವನ್ನು ಜಿಲ್ಲಾಡಳಿತದ ಮೂಲಕ ಸರಕಾರಕ್ಕೆ ನೀಡಲಾಗುವದು ಎಂದರು.

ಪ್ರಾಥಮಿಕ ಶಾಲಾ ಶಿಕ್ಷಣಕ್ಕೆ ಸಂಬಂಧಿಸಿದಂತೆ ಪ್ರತ್ಯೇಕ ‘ಶಿಕ್ಷಣ ಮಂಡಳಿ’ಯನ್ನು ರಚಿಸಬೇಕೆಂದು ಆಗ್ರಹಿಸಿದ ಚೇತನ್, ಕೊಡಗು ಜಿಲ್ಲೆಯಲ್ಲಿ ‘ಗಿರಿಭತ್ಯೆ’ ಜಿಲ್ಲಾ ಕೇಂದ್ರ ಮಡಿಕೆÉೀರಿಗೆ ಮಾತ್ರ ಸೀಮಿತವಾಗಿದೆ. ಇದನ್ನು ಜಿಲ್ಲೆಯ ಎಲ್ಲಾ ಭಾಗಗಳಿಗೂ ವಿಸ್ತರಿಸಬೇಕು. ಈಗಾಗಲೇ ಈ ನಮ್ಮ ಬೇಡಿಕೆಗೆ ಸ್ಪಂದಿಸಿ ಎಂಎಲ್‍ಸಿ ವೀಣಾ ಅಚ್ಚಯ್ಯ ಅವರು ಗಿರಿಭತ್ಯೆಯನ್ನು ವಿಸ್ತರಿಸುವಂತೆ ಸರ್ಕಾರದ ಮೇಲೆ ಒತ್ತಡ ಹೇರಿದ್ದು, ಅವರನ್ನು ಅಭಿನಂದಿಸುವದಾಗಿ ತಿಳಿಸಿದರು.

ಖಾಸಗಿ ಶಾಲೆಗಳಿಗೆ ಸರಿ ಸಮಾನವಾಗಿ ಸರ್ಕಾರಿ ಶಾಲೆಗಳಲ್ಲಿ ಶಿಕ್ಷಣವನ್ನು ಒದಗಿಸಿ, ಮಕ್ಕಳನ್ನು ಸರಕಾರಿ ಶಾಲೆಗಳತ್ತ ಆಕರ್ಷಿಸಲು ಪೂರ್ವ ಪ್ರಾಥಮಿಕ ಎಲ್‍ಕೆಜಿ, ಯುಕೆಜಿಗಳನ್ನು ಆರಂಭಿಸುವದು ಸೂಕ್ತ ಎಂದು ಅಭಿಪ್ರಾಯಪಟ್ಟರು. ಪ್ರಸ್ತುತ ಸರ್ಕಾರಿ ಶಾಲೆಗಳಲ್ಲಿ 5 ವರ್ಷ 10 ತಿಂಗಳ ಬಳಿಕವೇ ಮಕ್ಕಳನ್ನು ಶಾಲೆಗೆ ಸೇರ್ಪಡೆ ಮಾಡ ಬೇಕೆನ್ನಲಾಗುತ್ತಿದೆ. ಹೀಗಿರುವಾಗ ಸರ್ಕಾರಿ ಶಾಲೆಗಳಿಗೆ ಮಕ್ಕಳು ಸೇರ್ಪಡೆಗೊಳ್ಳುವದಾದರೂ ಹೇಗೆ ಎಂದು ಪ್ರಶ್ನಿಸಿದರು.

ಸರ್ಕಾರಿ ಶಾಲೆಗಳ ಬಲವರ್ಧನೆಗೆ ಪೂರಕವಾಗಿ ಪ್ರತಿ ಶಾಲೆಗಳಲ್ಲಿ ಕನಿಷ್ಟ 30 ಮಕ್ಕಳಿಗೆ ಒಬ್ಬ ಶಿಕ್ಷಕರನ್ನು ನೇಮಕ ಮಾಡುವ ಪ್ರಯತ್ನ ಮಾಡಬೇಕೆಂದು ಚೇತನ್ ಒತ್ತಾಯಿಸಿದರು.

ಸೋಮವಾರಪೇಟೆ ತಾಲೂಕು ಅಧ್ಯಕ್ಷ ಹೆಚ್.ಎನ್. ಮಂಜುನಾಥ್ ಮಾತನಾಡಿ, ಶಾಲೆಯಲ್ಲಿ ಮಕ್ಕಳ ಸಂಖ್ಯೆ ಎಷ್ಟೇ ಇರಲಿ ಗುಣಾತ್ಮಕ ಶಿಕ್ಷಣವನ್ನು ಮಕ್ಕಳಿಗೆ ಒದಗಿಸಲು ಶಿಕ್ಷಕರು ಮತ್ತು ದೈಹಿಕ ಶಿಕ್ಷಕರ ನೇಮಕ ಮಾಡಬೇಕಾಗಿದೆ. ಪ್ರಸ್ತುತ ಶಾಲಾ ಶಿಕ್ಷಕರು ಕ್ಷೀರಭಾಗ್ಯ, ಸೈಕಲ್ ವಿತರಣೆ ಮೊದಲಾದ ಪಠ್ಯೇತರ ಕಾರ್ಯಕ್ರಮಗಳನ್ನು ಸಮರ್ಪ ಕವಾಗಿ ನಿಭಾಯಿಸುತ್ತಿರುವದಲ್ಲದೆ, ಇವುಗಳ ಲೆಕ್ಕಪತ್ರಗಳನ್ನು ನೋಡಿಕೊಳ್ಳುವ ಜವಾಬ್ದಾರಿ ಹೊಂದಿದ್ದಾರೆ.

ಶಿಕ್ಷಣದೊಂದಿಗೆ ಇತರ ಚಟುವಟಿಕೆಗಳನ್ನು ನಿರ್ವಹಿಸ ಬೇಕೆಂದರೆ ಗುಣಾತ್ಮಕ ಶಿಕ್ಷಣವನ್ನು ನೀಡುವದಾದರೂ ಹೇಗೆಂದು ಪ್ರಶ್ನಿಸಿದರು.

ಈ ಹಿನ್ನೆಲೆಯಲ್ಲಿ ಲೆಕ್ಕಪತ್ರಗಳನ್ನು ನಿರ್ವಹಿಸಲು ಗುಮಾಸ್ತರನ್ನು ಶಾಲೆಗಳಿಗೆ ನಿಯುಕ್ತಿ ಮಾಡಬೇಕೆಂದು ಒತ್ತಾಯಿಸಿದರು.

ಒಂದರಿಂದ 7ನೇ ತರಗತಿ ವರೆಗಿನ ಪ್ರಾಥಮಿಕ ಶಾಲೆಗಳಿಗೆ ಕನಿಷ್ಟ ಐವರು ಶಿಕ್ಷಕರನ್ನು ನಿಯುಕ್ತಿ ಗೊಳಿಸುವಂತೆ ಒತ್ತಾಯಿಸಿದ ಮಂಜುನಾಥ್, 200 ವಿದ್ಯಾರ್ಥಿ ಗಳಿರುವ ಶಾಲೆಗೆ ಮಾತ್ರ ದೈಹಿಕ ಶಿಕ್ಷಕರೆಂದಾದಲ್ಲಿ ಉಳಿದ ಶಾಲೆಗಳ ಮಕ್ಕಳು ದೈಹಿಕ ಶಿಕ್ಷಣದಿಂದ ವಂಚಿತರಾಗಬೇಕೆ? ಎಂದು ಪ್ರಶ್ನಿಸಿದರು.

ಸಂಘದ ಮಡಿಕೆÉೀರಿ ತಾಲೂಕು ಅಧ್ಯಕ್ಷ ಪಿ.ಎಸ್. ಜನಾರ್ಧನ ಮಾತನಾಡಿ, ರಾಜ್ಯ ಮತ್ತು ಕೇಂದ್ರ ಸರ್ಕಾರಿ ಉದ್ಯೋಗಿಗಳಿಗೆ ಏಕ ರೂಪದ ವೇತನವನ್ನು ಜಾರಿಗೊಳಿಸ ಬೇಕೆಂದು ಒತ್ತಾಯಿಸಿದರು.

ವೀರಾಜಪೇಟೆ ತಾಲೂಕು ಅಧ್ಯಕ್ಷ ಇ. ಸುರೇಂದ್ರ ಮಾತನಾಡಿ, ಆ. 5 ರಂದು ಬೆಳಿಗ್ಗೆ 10 ಗಂಟೆಯಿಂದ ಸಂಜೆಯವರೆಗೆ ಜಿಲ್ಲಾಧಿಕಾರಿಗಳ ಕಚೇರಿ ಎದುರು ಶಿಕ್ಷಕ ಸಮುದಾಯದಿಂದ ಪ್ರತಿಭಟನೆ ನಡೆಯಲಿದೆ ಎಂದು ತಿಳಿಸಿದರು.

ಗೋಷ್ಠಿಯಲ್ಲಿ ಸಂಘÀದ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಎ.ವಿ. ಮಂಜುನಾಥ್ ಹಾಗೂ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಟಿ.ಡಿ. ರಮಾನಂದ್ ಉಪಸ್ಥಿತರಿದ್ದರು.