ಆಲೂರುಸಿದ್ದಾಪುರ/ಒಡೆಯನಪುರ, ಜು29: ‘ಬಸವಣ್ಣನವರು 12ನೇ ಶತಮಾನದಲ್ಲಿ ಸಮಾಜದ ಮೌಢ್ಯವನ್ನು ಹೋಗಲಾಡಿಸಿದ ಮಹಾನ್ ಶರಣ ದಾರ್ಶನಿಕರಾಗಿದ್ದರು’ ಎಂದು ಗೆಜ್ಜೆಹಣಕೋಡು ಗ್ರಾಮದ ನಿವೃತ್ತ ಪ್ರಾಧ್ಯಾಪಕ ಪ್ರೊ. ಧರ್ಮಪ್ಪ ಅಭಿಪ್ರಾಯಪಟ್ಟರು. ಅವರು ಕೊಡ್ಲಿಪೇಟೆ ಕಲ್ಲುಮಠದ ಡಾ. ಶಿವಕುಮಾರಸ್ವಾಮೀಜಿ ವಿದ್ಯಾಸಂಸ್ಥೆಯ ಸಭಾಂಗಣದಲ್ಲಿ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕ ಮತ್ತು ಎಸ್‍ಎಸ್‍ಕೆ ವಿದ್ಯಾಸಂಸ್ಥೆಯ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಶಾರದಮ್ಮ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು. ಶರಣರು ಬಸವಣ್ಣ ಅವರ ಅನುಯಾಯಿಗಳು, 12ನೇ ಶತಮಾನದಲ್ಲಿ ಬಸವಣ್ಣ ಅವರು ಸಮಾಜ ಸುಧಾರಣೆಗಾಗಿ ಬುನಾದಿಯನ್ನು ಹಾಕಿಕೊಟ್ಟವರು, ಅದನ್ನು ಬಸವಣ್ಣನವರ ಅನುಯಾಯಿ ಶರಣರು ವಚನ ಸಾಹಿತ್ಯ ಮೂಲಕ ಜಗತ್ತಿಗೆ ಸಾರಿದರು, 12ನೇ ಶತಮಾನದಲ್ಲಿ ಸಮಾಜದಲ್ಲಿದ್ದ ಅಸಮಾನತೆ, ಜಾತಿ- ಜನಾಂಗ ತಾರತಮ್ಯ, ಮೌಢ್ಯಗಳು ಇನ್ನು ಮುಂತಾದ ಸಾಮಾಜಿಕ ಪಿಡುಗು ಗಳನ್ನು ಬಸವಣ್ಣ ಹೋಗಲಾಡಿಸಿದರು ಎಂದರು.

ಕಿರಿಕೊಡ್ಲಿ ಮಠದ ಸದಾಶಿವಸ್ವಾಮೀಜಿ ಮಾತನಾಡಿ, ಮಾನವೀಯತೆ ಧರ್ಮಕ್ಕಿಂತ ಮೀಗಿಲಾದದ್ದು, ಶರಣ ಸಾಹಿತ್ಯ ಧರ್ಮಕ್ಕಿಂತ ಹೆಚ್ಚಾಗಿ ಸಮಾಜದಲ್ಲಿ ಮಾನವೀಯ ಧರ್ಮ ದೊಡ್ಡದು ಎಂಬದನ್ನು ತೋರಿಸಿಕೊಟ್ಟಿದೆ ಎಂದರು.

ಕಲ್ಲುಮಠದ ಮಹಾಂತಸ್ವಾಮೀಜಿ ಮಾತನಾಡಿ, 12ನೇ ಶತಮಾನದಲ್ಲಿ ಬಸವಣ್ಣ ಮತ್ತು ಶರಣರು ಹಾಕಿಕೊಟ್ಟ ಸಾಮಾಜಿಕ ಬುನಾದಿಯನ್ನು ಇಂದಿನ ತಲೆಮಾರಿನವರು ಮರೆಯುತ್ತಿದ್ದಾರೆ, ಆಧುನಿಕತೆಯ ವ್ಯಾಮೋಹದಿಂದ ಮಾನವೀಯತೆಯನ್ನು ಮರೆಯುತ್ತಿ ದ್ದಾರೆ ಎಂದು ವಿಷಾದಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಸ್. ಮಹೇಶ್-ಶರಣ ಸಾಹಿತ್ಯ ಪರಿಷತ್ ಜಾತಿಯೊಂದಕ್ಕೆ ಮೀಸಲಾಗಿಲ್ಲ, ಸಮಾಜದಲ್ಲಿ ಸರ್ವ ಧರ್ಮ, ಜಾತಿ- ಜನಾಂಗದವರು ಒಂದಾಗಿ ಸಮಾಜದಲ್ಲಿ ಬೆರೆಯುವ ಉದ್ದೇಶದಿಂದ ಶರಣ ಸಾಹಿತ್ಯ ಪರಿಷತ್ ಪ್ರತಿಯೊಂದು ಹೋಬಳಿ ಮಟ್ಟದಲ್ಲಿ ದತ್ತಿ ಉಪನ್ಯಾಸ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು.

ಕಲ್ಲಳ್ಳಿ ಮಠದ ರುದ್ರಮುನಿ ಸ್ವಾಮೀಜಿ ಮಾತನಾಡಿದರು. ಕಾರ್ಯಕ್ರಮವನ್ನು ತಾ.ಪಂ. ಅಧ್ಯಕ್ಷೆ ಪುಷ್ಪರಾಜೇಶ್ ಉದ್ಘಾಟಿಸಿದರು. ಜಿ.ಪಂ. ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್, ತಾ.ಪಂ. ಮಾಜಿ ಅಧ್ಯಕ್ಷ ಎಸ್.ಎಂ. ಡಿಸಿಲ್ವ, ಸೋಮವಾರಪೇಟೆ ತಾಲೂಕು ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಮಹದೇವಪ್ಪ, ವೀರಾಜಪೇಟೆ ತಾಲೂಕು ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಸುರೇಶ್, ಶನಿವಾರಸಂತೆ ಕಸಾಪ ಅಧ್ಯಕ್ಷ ಸಿ.ಎಂ. ಪುಟ್ಟಸ್ವಾಮಿ, ಮಾಜಿ ತಾ.ಪಂ. ಸದಸ್ಯೆ ಮಮತ ಸತೀಶ್, ಪ್ರಮುಖರಾದ ನಂಜಪ್ಪ, ಜಿ.ಎಂ, ಕಾಂತರಾಜು, ಡಿ.ಬಿ. ಸೋಮಪ್ಪ, ನಾಗಣ್ಣ, ಶಿವಣ್ಣ, ಶೀಲ ಡಿಸೋಜ, ನಳಿನಿ ಗಣೇಶ್, ಲೀಲಾನಿರ್ವಾಣಿ, ಎಚ್.ಎಸ್. ಪ್ರೇಮ್‍ನಾಥ್, ನಿರ್ವಾಣಶೆಟ್ಟಿ, ಕಲ್ಲುಮಠ ಶಾಲಾ ಶಿಕ್ಷಕ ತಿಮ್ಮಯ್ಯ ಮುಂತಾದವರು ಇದ್ದರು.