ಸುಂಟಿಕೊಪ್ಪ, ಜು. 29: ರಸ್ತೆ ಅಪಘಾತಕ್ಕೆ ಒಳಗಾಗಿ ಕಳೆದ ಮೂರು ವರ್ಷಗಳಿಂದ ಹಾಸಿಗೆಯಲ್ಲಿ ನರಳುತ್ತಿರುವ ವ್ಯಕ್ತಿಯೋರ್ವ ಮುಂದಿನ ಚಿಕಿತ್ಸೆಗಾಗಿ ಪರಿತಪಿಸುತ್ತಿದ್ದಾರೆ. ಹಿಂದೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ಸ್‍ನಲ್ಲಿ ಚಾಲಕನಾಗಿದ್ದ ಕೆ.ಎಸ್. ಸುರೇಶ್ ಎಂಬಾತ ಬೈಲುಕೊಪ್ಪ ಬಳಿ ಬಸ್ಸನ್ನು ನಿಲ್ಲಿಸಿ ಹೆಡ್‍ಲೈಟ್ ಚೆಕ್ ಮಾಡುತ್ತಿದ್ದಾಗ ವೇಗವಾಗಿ ಬಂದ ದ್ವಿಚಕ್ರ ವಾಹನವೊಂದು ಡಿಕ್ಕಿಯಾಗಿ ಅವರ ತಲೆಯ ಒಂದು ಭಾಗಕ್ಕೆ ಗಂಭೀರ ಗಾಯವಾಗಿದೆ. ಜೀವನ್ಮರಣದ ನಡುವೆ ಹೋರಾಟ ನಡೆಸುತ್ತಿದ್ದರು. ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ಪಡೆದರೂ ಇಂದಿಗೂ ಗುಣ ಮುಖರಾಗದೆ ಹೆಚ್ಚಿನ ಚಿಕಿತ್ಸೆಗಾಗಿ ಹಾತೊರೆಯುತ್ತಿದ್ದಾರೆ.

ಒಂದೆಡೆ ಇಂದೊ ನಾಳೆಯೋ ಗಾಳಿ ಮಳೆಗೆ ಮುರಿದು ಬೀಳುವಂತಿರುವÀ ವಾಸದ ಮನೆ. ಆ ಮನೆಯ 1 ಕೋಣೆಯ ಮೂಲೆಯಲ್ಲಿ ಹಾಸಿಗೆಯಲ್ಲೇ ಸುರೇಶ್ ನರಳುತ್ತಿದ್ದಾರೆ. ಗಂಡನ ಆರೈಕೆಯೆ ತನ್ನ ಸರ್ವಸ್ವ ಎಂದು ನಂಬಿ 24 ಗಂಟೆ ಸೇವೆಯಲ್ಲಿ ತೊಡಗಿರುವ ಗೃಹಿಣಿ. ವಯೋವೃದ್ಧರಾದ ತಂದೆ ತಾಯಿಗೆ ಕುಟುಂಬದ ಜವಾಬ್ದಾರಿಯೊಂದಿಗೆ ಸುರೇಶ್ ಅವರ 3 ಮಕ್ಕಳ ವಿದ್ಯಾಭ್ಯಾಸದ ಹೊಣೆ. ಇದನ್ನೆಲ್ಲಾ ನೋಡುವಾಗ ಎಂಥವರಿಗೂ ಮನ ಕಲಕುತ್ತದೆ.

ಕೊಡಗರಹಳ್ಳಿ ಗ್ರಾಮ ಪಂಚಾಯಿತಿಗೆ ಸೇರಿದ ಕೊಡಗರಹಳ್ಳಿ ಮುಖ್ಯ ರಸ್ತೆ ಬಳಿಯ ನಿವಾಸಿ ನಿವೃತ್ತ ಅಂಚೆ ಇಲಾಖೆ ನೌಕರ ಕೆ.ವಿ. ಶಿವರಾಮ ಅವರ ಮಗ ಕೆ.ಎಸ್. ಸುರೇಶ್ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ಸ್‍ನಲ್ಲಿ ಚಾಲಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. 2014ರ ಮೇ ತಿಂಗಳಿನಲ್ಲಿ ಮಡಿಕೇರಿಯಿಂದ ಮೈಸೂರಿಗೆ ತೆರಳಿ ವಾಪಾಸ್ಸು ಮಡಿಕೇರಿ ಡಿಪ್ಪೊಗೆ ಬಸ್ಸನ್ನು ಚಾಲಿಸಿಕೊಂಡು ಬರುತ್ತಿದ್ದಾಗ ಬೈಲುಕೊಪ್ಪ ಬಳಿ ಬಸ್‍ನ ಹೆಡ್‍ಲೈಟ್ ಕೈಕೊಟ್ಟಿತ್ತು. ಅದನ್ನು ಸರಿಪಡಿಸಲು ಬಸ್ಸ್‍ನ್ನು ಚಾಲನಾ ಸ್ಥಿತಿಯಲ್ಲಿ ನಿಲ್ಲಿಸಿ ರಸ್ತೆ ಬದಿ ಇಳಿದು ಹೆಡ್‍ಲೈಟ್ ಸರಿಪಡಿಸುತ್ತಿದ್ದಾಗ ವೇಗವಾಗಿ ಬಂದ ದ್ವಿಚಕ್ರ ವಾಹನವೊಂದು ಸುರೇಶ್‍ಗೆ ಡಿಕ್ಕಿ ಹೊಡೆದು ಪರಾರಿಯಾಯಿತು. ಬಸ್ ಚಾಲನಾ ಸ್ಥಿತಿಯಲ್ಲಿದ್ದರಿಂದ ಈ ಘಟನೆ ಸಹ ಚಾಲಕನ ಗಮನಕ್ಕೆ ಬರಲಿಲ್ಲ ಎನ್ನಲಾಗಿದೆ.

ಅವಘಡದ ರಭಸಕ್ಕೆ ಅವರ ತಲೆಯ ಒಂದು ಭಾಗ ಕಿತ್ತುಹೋಗಿತ್ತು. ಪ್ರಜ್ಞಾಶೂನ್ಯರಾದ ಅವರನ್ನು ಬೆಂಗಳೂರು ನಿಮಾನ್ಸ್, ಮೈಸೂರು ಅಪೋಲೋ ಆಸ್ಪತ್ರೆಗಳಲ್ಲಿ ಚಿಕಿತ್ಸೆಗೆ ಒಳಪಡಿಸಿದ್ದು, ಕೆಎಸ್‍ಆರ್‍ಟಿಸಿಯಿಂದ ಲಭಿಸಿದ 6 ಲಕ್ಷ ರೂ ಹಣವನ್ನು ಚಿಕಿತ್ಸೆಗೆ ವ್ಯಯಿಸಲಾಯಿತು. ಒಂದೂವರೆ ವರ್ಷದ ನಂತರ ಪ್ರಜ್ಞೆ ಬಂದು ಅವರು ಮೆಲ್ಲನೆ ಕಣ್ಣುಬಿಟ್ಟು ಹೊರ ಪ್ರಪಂಚ ನೋಡುವಂತಾಯಿತು. ಆದರೆ ಮಾತನಾಡಲು ಆಗುತ್ತಿರಲಿಲ್ಲ ಕಿತ್ತುಹೋದ ತಲೆಯ ಒಂದು ಭಾಗಕ್ಕೆ ಪ್ಲಾಸ್ಟಿಕ್ ಸರ್ಜರಿ ಮಾಡಿ ವೈದÀ್ಯರು ಸುರೇಶ್‍ನನ್ನು ಉಳಿಸಿದರು.

ಹೆಂಡತಿ, ತಂದೆ, ತಾಯಿ, ಕುಟುಂಬದವರ ಆರೈಕೆ ಹಾಗೂ ಕೆಲವು ಸಂಘ ಸಂಸ್ಥೆ ಹಾಗೂ ರಾಜ್ಯ ಸಾರಿಗೆ ಸಂಸ್ಥೆಯ ಸಹಚಾಲಕರು ಕೊಂಚ ಸಹಾಯ ಹಸ್ತ ಚಾಚಿದ್ದರು. ಈಗ ಕೊಂಚ ಮಾತನಾಡಲು ತೊಡಗಿರುವ ಸುರೇಶ ಒಮ್ಮೊಮ್ಮೆ ಮಾನಸಿಕ ಸ್ಥಿಮಿತ ಕಳೆದುಕೊಂಡು ಚೀರಾಡುವದು, ಮಲಗಿದ್ದ ಬೆಡ್‍ಶೀಟ್ ಹರಿದು ಹಾಕುವದಲ್ಲದೆ ಎಲ್ಲೆಡೆ ಓಡಾಡಲು ಯತ್ನಿಸುತ್ತಿರುತ್ತಾರೆ. ಇದರಿಂದ ಅಕ್ಕ ಪಕ್ಕದ ನಿವಾಸಿಗಳಿಗೆ ಕೆಲವೊಮ್ಮೆ ಕಿರಿ ಕಿರಿ ಉಂಟಾಗುತ್ತಿರುತ್ತದೆ. ವೀಲ್ ಚೇರನ್ನು ಸಿಟ್ಟು ಬಂದಾಗ ಮುರಿದು ಹಾಕಿದ್ದೂ ಇದೆ ಪತ್ನಿ ಅಜಿತ ಗಂಡನ ಆರೈಕೆಯಲ್ಲಿ ಹಗಲು ರಾತ್ರಿ ತೊಡಗಿದ್ದಾರೆ.

ಕುಶಾಲನಗರದಲ್ಲಿ ತೃತೀಯ ವರ್ಷದ ಡಿಪ್ಲೊಮೊ ಓದುತ್ತಿರುವ ಮಗಳು, ಪ್ರಥಮ ವರ್ಷದ ಡಿಪ್ಲೊಮೊ ಕಲಿಯುತ್ತಿರುವ ಮಗ, ಇನ್ನೋರ್ವ ಪುತ್ರ 9ನೇ ತರಗತಿ ಓದುತ್ತಿದ್ದಾನೆ.

ಅವಘಡ ಸಂಭವಿಸಿದ ನಂತರ ಒಂದೂವರೆ ವರ್ಷ ಸುರೇಶ್‍ಗೆ ಕೆಎಸ್‍ಆರ್‍ಟಿಸಿ ಸಂಸ್ಥೆಯಿಂದ ಬರುತ್ತಿದ್ದ ಸಂಬಳ ಇದೀಗ ಇಲ್ಲವಾಗಿದೆ.

ಸುರೇಶ ಸಂಪೂರ್ಣ ಗುಣ ಮುಖರಾಗಲು ಹೆಚ್ಚಿನ ಚಿಕಿತ್ಸೆ ಮಾಡಬೇಕೆಂದು ವೈದ್ಯರು ಹೇಳಿದ್ದಾರೆ, ಮೈಸೂರು ಅಪೋಲೊ ಅಥವಾ ಬೆಂಗಳೂರು ನಿಮಾನ್ಸ್‍ನಲ್ಲಿ ಈ ಚಿಕಿತ್ಸೆ ಮಾಡಬಹುದಾಗಿದೆ, ಅಂದಾಜು 2ಲಕ್ಷ ರೂ ವೆಚ್ಚ ಈ ಚಿಕಿತ್ಸೆಗೆ ತಗುಲಲಿದ್ದು, ಜೀವನ ನಿರ್ವಹಣೆಯೇ ಕಷ್ಟಸಾಧ್ಯ ವಾಗುವಾಗ ಈ ವೆಚ್ಚ ಭರಿಸಲು ದಾರಿ ಕಾಣದೆ ಕುಟುಂಬ ಕಂಗಾಲಾಗಿದೆ.

ಮಾನವೀಯ ನೆಲೆಗÀಟ್ಟಿನಲ್ಲಿ ಸಹೃದಯ ಸಾರ್ವಜನಿಕ ಬಂಧುಗಳು ಸಂಘ ಸಂಸ್ಥೆಯವರು ಕೆಎಸ್‍ಆರ್‍ಟಿಸಿ ಸಿಬ್ಬಂದಿಗಳು ಹಾಗೂ ಜನಪ್ರತಿನಿಧಿಗಳು ಈ ಕುಟುಂಬಕ್ಕೆ ನೆರವು ನೀಡಲು ಮುಂದಾಗಬೇಕಾದ ಅನಿವಾರ್ಯತೆಯಿದೆ.ಸಹಾಯ ಮಾಡುವವರು ಮಡಿಕೇರಿ ಕೆನರಾ ಬ್ಯಾಂಕ್ ಖಾತೆ ಸಂಖ್ಯೆ 0517101034309ಗೆ ಹಣವನ್ನು ಕಳುಹಿಸಬಹುದು.

-ರಾಜು ರೈ