ಗೋಣಿಕೊಪ್ಪಲು, ಜು. 29: ರಾಜ್ಯ ಸರ್ಕಾರದ ಅನುದಾನವನ್ನು ಪಡೆದು ಸ್ಥಳೀಯ ಬಿಜೆಪಿ ಜನಪ್ರತಿನಿಧಿಗಳು ತಮ್ಮ ಅನುದಾನ ಎಂದು ಬಿಂಬಿಸಿಕೊಂಡು ಭೂಮಿಪೂಜೆ ಮಾಡುವ ಮೂಲಕ ಜನರ ಹಾದಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂದು ರಾಜ್ಯ ಅರಣ್ಯ ಅಭಿವೃದ್ಧಿ ನಿಗಮದ ಉಪಾಧ್ಯಕ್ಷೆ ಮಾಂಗೇರ ಪದ್ಮಿನಿ ಪೊನ್ನಪ್ಪ ಆರೋಪಿಸಿದರು.

ನಾಲ್ಕೇರಿ ಹಾಗೂ ಬಾಡಗ ವಲಯ ಕಾಂಗ್ರೆಸ್ ವತಿಯಿಂದ ನಡೆದ ಕಾರ್ಯಕರ್ತರ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು.

ರಾಜ್ಯ ಸರ್ಕಾರ ಜಿಲ್ಲೆಯ ಸರ್ವತೋಮುಖ ಅಭಿವೃದ್ಧಿಗೆ ಬೆಂಬಲ ನೀಡುತ್ತಿದೆ. ಇದರ ಲಾಭವನ್ನು ಇಲ್ಲಿನ ಬಿಜೆಪಿ ಪಕ್ಷದ ಜನಪ್ರತಿನಿಧಿಗಳು ಬಳಸಿಕೊಂಡು ಇದು ತಮ್ಮ ಅನುದಾನ ಎಂದು ಜನರ ಹಾದಿ ತಪ್ಪಿಸುತ್ತಿದ್ದಾರೆ ಎಂದು ಆರೋಪಿಸಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಜಿಲ್ಲೆಯ ಅಭಿವೃದ್ಧಿಗೆ ಕಳೆದ 3 ವರ್ಷಗಳಿಂದ ತಲಾ ರೂ. 50 ಕೋಟಿ ಬಿಡುಗಡೆಗೊಳಿಸುವ ಮೂಲಕ ಕೊಡಗಿನ ಬಗ್ಗೆ ಕಾಳಜಿ ವಹಿಸಿದ್ದಾರೆ. ಮತದಾರರು ಜಾಗೃತಗೊಂಡು ಉತ್ತಮ ಸಮಾಜ ನಿರ್ಮಾಣಕ್ಕೆ ತÀಮ್ಮ ಪರ ನಿಲ್ಲಬೇಕು ಎಂದು ಹೇಳಿದರು.

ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಅರುಣ್ ಮಾಚಯ್ಯ ಮಾತನಾಡಿ, ಬಡವರ ಏಳಿಗೆಗೆ ಶ್ರಮಿಸುತ್ತಿರುವ ರಾಜ್ಯ ಸರ್ಕಾರದ ಸಾಧನೆ ಬಗ್ಗೆ ಕಾರ್ಯಕರ್ತರು ಜನರಲ್ಲಿ ತಿಳಿಸಬೇಕು. ಎಲ್ಲಾ ವರ್ಗದ ಜನರಿಗೆ ಸಮಾನ ಅವಕಾಶ ನೀಡಿದೆ. ವಿವಿಧ ಭಾಗ್ಯಗಳು ಜನರ ಮನೆ ಬಾಗಿಲಿಗೆ ತಲುಪಿಸುವಲ್ಲಿ ಸರ್ಕಾರ ಯಶಸ್ವಿ ಯಾಗಿದೆ. ವಿದ್ಯಾಸಿರಿ ಕಾರ್ಯಕ್ರಮದ ಮೂಲಕ ಬಡ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವ ಕೆಲಸ ಮಾಡಿದೆ. ರೈತರ ಸಾಲ ಮನ್ನಾ ಮಾಡುವ ಮೂಲಕ ರೈತ ಪರ ನಿಲುವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರದರ್ಶಿಸಿದ್ದಾರೆ. ಕೌಶಲ್ಯ ಅಭಿವೃದ್ಧಿ ಯೋಜನೆಯ ಮೂಲಕ ನಿರುದ್ಯೋಗಿಗಳ ಆಶಾಕಿರಣವಾಗಿ ಸರ್ಕಾರ ಕೆಲಸ ಮಾಡುತ್ತಿದೆ. ಇದನ್ನು ಜನತೆ ಮನಗಾಣಬೇಕು. ಕಾರ್ಯ ಕರ್ತರು ಪ್ರಚಾರಪಡಿಸಿ ಸರ್ಕಾರದ ಸಾಧನೆ ತಿಳಿಸುವಂತಾಗಬೇಕೆಂದರು.

ಕಾಂಗ್ರೆಸ್ ಜಿಲ್ಲಾಧ್ಯಕ್ಷ ಮುಕ್ಕಾಟೀರ ಶಿವು ಮಾದಪ್ಪ ಮಾತನಾಡಿ, ಪಕ್ಷದ ಮುಖಂಡರುಗಳು ಒಂದಾಗಿ ಪಕ್ಷ ಕಟ್ಟುವತ್ತಾ ಶ್ರಮವಹಿಸಬೇಕು. ಮುಂದಿನ ವಿಧಾನಸಭಾ ಚುನಾವಣೆ ಗೆಲುವಿಗೆ ಶ್ರಮಿಸುವ ಮೂಲಕ ಪಕ್ಷವನ್ನು ಮತ್ತೊಮ್ಮೆ ಅಧಿಕಾರಕ್ಕೆ ತರುವಲ್ಲಿ ಪೂರ್ಣ ಪ್ರಯತ್ನ ಮಾಡಬೇಕು. ನಮ್ಮ ಸರ್ಕಾರ ಯೋಜನೆಯ ಲಾಭವನ್ನು ಇತರ ಪಕ್ಷಗಳು ಪಡೆದು ಪ್ರಚಾರ ಪಡೆದುಕೊಳ್ಳುತ್ತಿದ್ದಾರೆ ಎಂದು ಕುಟುಕಿದರು. ಪಕ್ಷವನ್ನು ತಳಮಟ್ಟದಲ್ಲಿ ಬಲಪಡಿಸುವ ನಿಟ್ಟಿನಲ್ಲಿ ಬೂತ್ ಮಟ್ಟದಲ್ಲಿ ಕಾರ್ಯಕರ್ತರ ಸಮಿತಿ ರಚನೆಗೊಳ್ಳುತ್ತಿದೆ. ಈ ಮೂಲಕ ಪಕ್ಷ ಕಟ್ಟುವಲ್ಲಿ ಕಾರ್ಯಕರ್ತರು ಶ್ರಮವಹಿಸಬೇಕು. ಮುಂದಿನ ಚುನಾವಣೆ ಗೆಲುವಿಗೆ ಬೆಂಬಲ ನೀಡಬೇಕೆಂದರು.

ವೇದಿಕೆಯಲ್ಲಿ ವಲಯಾಧ್ಯಕ್ಷ ಮಾಚಿಮಾಡ ವಿನು, ಜಿ.ಪಂ. ಸದಸ್ಯ ಬಾನಂಡ ಪೃಥ್ಯು, ನಾಲ್ಕೇರಿ ಗ್ರಾ.ಪಂ. ಅಧ್ಯಕ್ಷೆ ಎ.ಬಿ. ಮುತ್ತಪ್ಪ, ಬಾಡಗ ಗ್ರಾ.ಪಂ. ಅಧ್ಯಕ್ಷೆ ಉಷಾ, ತಾ.ಪಂ. ಸದಸ್ಯ ಪಲ್ವೀನ್ ಪೂಣಚ್ಚ, ಹಿಂದುಳಿದ ವರ್ಗಗಳ ಜಿಲ್ಲಾಧ್ಯಕ್ಷ ಸರಾ ಚಂಗಪ್ಪ, ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಯುವ ಕಾಂಗ್ರೆಸ್ ಅಧ್ಯಕ್ಷ ಜಮ್ಮಡ ಸೋಮಣ್ಣ, ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿ ಕಾಡ್ಯಮಾಡ ಚೇತನ್ ಹಾಗೂ ಎ.ಜೆ. ಬಾಬು ಪಾಲ್ಗೊಂಡಿದ್ದರು.