ಮಡಿಕೇರಿ, ಜು.29: ಐತಿಹಾಸಿಕ ನಾಡಹಬ್ಬ ಮಡಿಕೇರಿ ದಸರಾ ಉತ್ಸವವನ್ನು ಅಚ್ಚುಕಟ್ಟಾಗಿ, ಶಾಂತಿಯುತವಾಗಿ ಆಚರಿಸಲು ಬದ್ಧಳಾಗಿರುವದಾಗಿ ಮಡಿಕೇರಿ ದಸರಾ ಸಮಿತಿ ಅಧ್ಯಕ್ಷರು, ನಗರಸಭಾಧ್ಯಕ್ಷರೂ ಆಗಿರುವ ಕೂಡಕಂಡಿ ಕಾವೇರಮ್ಮ ಸೋಮಣ್ಣ ಹೇಳಿದರು.ಅಧ್ಯಕ್ಷರ ಕಚೇರಿಯಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯ ಜನತೆ ಮತ್ತು ಎಲ್ಲಾ ಧರ್ಮೀಯರ ಸಹಕಾರದಿಂದ ದಸರಾ ಆಚರಣೆ ಮಾಡಲಾಗುವದು. ಯಾವದೇ ಗೊಂದಲ ಆಗದಂತೆ ಹಿರಿಯರ ಸಹಕಾರ ಪಡೆದು ಚೆನ್ನಾಗಿ ನಡೆಸಬೇಕೆಂಬ ಆಸೆ ಇದೆ ಎಂದು ಹೇಳಿದರು.ದಸರಾ ಸಮಿತಿಯ ಬೈಲಾ ಹಲವಾರು ವರ್ಷಗಳಷ್ಟು ಹಳೆಯದಾಗಿದ್ದು, ಈ ಹಿನ್ನೆಲೆಯಲ್ಲಿ ಬೈಲಾ ಸಮಿತಿ ಮೂಲಕ ಹೊಸ ಬೈಲಾ ರಚಿಸಲು ತೀರ್ಮಾನಿಸಲಾಗಿತ್ತು. ಆದರೆ ಸಭೆಯಲ್ಲಿ ಕೆಲವರು ಅನಗತ್ಯ ಗದ್ದಲ, ಗೊಂದಲ ಉಂಟು ಮಾಡಿ ಬೈಲಾ ರೂಪಿಸುವ ಸದುದ್ದೇಶವನ್ನೇ ಹಾಳುಗೆಡಹಿದರು. ಹೀಗಾಗಿ ಮಡಿಕೇರಿ ಜನ ಬಯಸಿದಂತೆ ಹೊಸ ಬೈಲಾ ತಿದ್ದುಪಡಿ ಸಾಧ್ಯವಾಗಲಿಲ್ಲ. ಇದರಿಂದ ಜನರಿಗೆ ನಿರಾಶೆಯುಂಟಾಗಿದೆ ಎಂದು ಹೇಳಿದರು. ಬೈಲಾ ಸಮಿತಿ ಅಧ್ಯಕ್ಷರಾಗಿರುವ ಜಿ.ಚಿದ್ವಿಲಾಸ್ ಅವರು ಹಲವಾರು ವರ್ಷಗಳಿಂದ ದಸರಾಗೆ ಸಹಕಾರ ನೀಡುತ್ತಿದ್ದಾರೆ. ಅವರಿಗೂ ಬೇಸರವಾಗಿದೆ. ಅವರೊಂದಿಗೆ ಮಾತುಕತೆ ನಡೆಸಿ, ಮನವೊಲಿಸಲಾಗುವದೆಂದರು.

ದಸರಾ ಸಮಿತಿಯ ಕಾರ್ಯಾಧ್ಯಕ್ಷರಾಗುವವರು 4 ಕರಗ ಮಂಟಪದ ಸದಸ್ಯರು, ದಶ ಮಂಟಪದ ಸದಸ್ಯರು, ಸಾರ್ವಜನಿಕ ಕ್ಷೇತ್ರದವರಾಗಿರಬೇಕು ಎಂಬದೇ ತÀನ್ನ ಒತ್ತಾಸೆಯಾಗಿದೆ. ಅನೇಕ ಸಂಘ ಸಂಸ್ಥೆಗಳ ಪ್ರಮುಖರು ಕೂಡ ಇದೇ ಅಭಿಲಾಷೆ ವ್ಯಕ್ತಪಡಿಸಿದ್ದಾರೆ. ಪ್ರಸ್ತುತ ದಸರಾ ಸಮಿತಿಯಲ್ಲಿ ಅಧ್ಯಕ್ಷರಾಗಿ ನಗರಸಭಾಧ್ಯಕ್ಷರು, ನಗರಸಭಾ ಉಪಾಧ್ಯಕ್ಷರು, ಪ್ರಧಾನ ಕಾರ್ಯದರ್ಶಿಯಾಗಿ ನಗರಸಭಾ ಸದಸ್ಯರು, ಖಜಾಂಚಿಯಾಗಿಯೂ ನಗರಸಭೆಯ ಸದಸ್ಯರೇ ಕಾರ್ಯ ನಿರ್ವಹಿಸುತ್ತಾ ಬಂದಿದ್ದಾರೆ. ಹೀಗಿರುವಾಗ ದಸರಾ ಸಮಿತಿಯಲ್ಲಿ ಮತ್ತೆ ನಗರಸಭೆಯ ಸದಸ್ಯರಾದವರು

(ಮೊದಲ ಪುಟದಿಂದ) ಕಾರ್ಯಾಧ್ಯಕ್ಷರಾದರೆ ಇದು ದಸರಾ ಸಮಿತಿ ಆಗುವ ಬದಲಿಗೆ ಮಡಿಕೇರಿ ನಗರಸಭಾ ದಸರಾ ಸಮಿತಿಯಾಗಲಿದೆ. ಇದಕ್ಕೆ ಸಾರ್ವಜನಿಕರು ಮಾತ್ರವಲ್ಲದೇ ಸರ್ಕಾರದಿಂದಲೂ ಆಕ್ಷೇಪಗಳು ವ್ಯಕ್ತವಾಗಲಿದೆ. ಹೀಗಾಗಿ ಕಾರ್ಯಾಧ್ಯಕ್ಷರಾಗುವವರು ಸಾರ್ವಜನಿಕ ಕ್ಷೇತ್ರದಿಂದ ಆಯ್ಕೆಯಾಗಬೇಕೇ ವಿನಾ ನಗರಸಭೆಯ ಸದಸ್ಯರಿಗೆ ಮತ್ತೆ ಸಮಿತಿಯಲ್ಲಿ ಪದಾಧಿಕಾರಿ ಹುದ್ದೆ ಅನಗತ್ಯ ಎಂಬದು ತನ್ನ ಅಭಿಪ್ರಾಯವಾಗಿದೆ. ಹೀಗಾಗಿ ಕಾರ್ಯಾಧ್ಯಕ್ಷರನ್ನು ಸಾರ್ವಜನಿಕ ಕ್ಷೇತ್ರದಿಂದಲೇ ಆಯ್ಕೆ ಮಾಡಲಾಗುತ್ತದೆ. ಯಾವದೇ ಕಾರಣಕ್ಕೂ ನಗರಸಭಾ ಸದಸ್ಯರಿಗೆ ಕಾರ್ಯಾಧ್ಯಕ್ಷ ಸ್ಥಾನ ನೀಡಲು ಸಾರ್ವಜನಿಕರ ಅಭಿಪ್ರಾಯದಂತೆ ಸಮ್ಮತಿಯಿಲ್ಲ ಎಂದು ಹೇಳಿದರು.

ಸಾರ್ವಜನಿಕರು ಕೂಡ ಮಡಿಕೇರಿ ದಸರಾಕ್ಕೆ ಸಾಕಷ್ಟು ಆರ್ಥಿಕ ಸಹಕಾರ ನೀಡುತ್ತಿದ್ದಾರೆ. ಹೀಗಿರುವಾಗ ಸಾರ್ವಜನಿಕ ರಂಗಕ್ಕೆ ಕಾರ್ಯಾಧ್ಯಕ್ಷ ಹುದ್ದೆಯನ್ನು ಕೂಡ ನೀಡದೇ ಮತ್ತೆ ರಾಜಕಾರಣಿಗಳಿಗೆ ಇಂಥ ಪದಾಧಿಕಾರಿ ಹುದ್ದೆ ನೀಡಿದರೆ ಅದು ಖಂಡಿತಾ ಸೂಕ್ತವಾಗಲಾರದು.

ರಾಜ್ಯ ಸರ್ಕಾರ ಕೂಡ ಬೈಲಾಕ್ಕೆ ನಿಯಮಾನುಸಾರ ತಿದ್ದುಪಡಿ ಬಯಸುತ್ತದೆ. ಹಳೇ ಬೈಲಾವನ್ನೇ ಇಟ್ಟುಕೊಂಡು ಸರ್ಕಾರದ ಬಳಿ ಆರ್ಥಿಕ ನೆರವು ಪಡೆಯಲು ಅಸಾಧ್ಯವಾಗುತ್ತದೆ. ಹೀಗಿರುವಾಗ ಬೈಲಾ ತಿದ್ದುಪಡಿ ಅತ್ಯಂತ ಸೂಕ್ತವಾಗಿತ್ತು. ಆದರೆ ಆ ಸಭೆಯಲ್ಲಿ ಮಾತನಾಡುವ ಮುಕ್ತ ಅವಕಾಶವನ್ನೇ ನೀಡದೇ ಗಲಾಟೆ, ಗದ್ದಲಗಳಿಗೆ ಕಾರಣವಾಗಿ ಸಭೆ ನಡೆಯದಂಥ ವಾತಾವರಣ ಕಲ್ಪಿಸಲಾಗಿತ್ತು ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಕಾರ್ಯಾಧ್ಯಕ್ಷರ ನೇಮಕ

ಶೀಘ್ರದಲ್ಲಿಯೇ ದಸರಾ ಸಮಿತಿಗೆ ನಗರಸಭಾ ಸದಸ್ಯರನ್ನು ಹೊರತಾಗಿಸಿದ ಕಾರ್ಯಾಧ್ಯಕ್ಷರನ್ನು ದಸರಾ ದಶಮಂಟಪ ಸಮಿತಿ ಸಹಕಾರದೊಂದಿಗೆ ಆಯ್ಕೆ ಮಾಡಲಾಗುತ್ತದೆ. ನಗರಸಭಾ ಸದಸ್ಯರೇ ಕಾರ್ಯಾಧ್ಯಕ್ಷರಾಗುವ ಹುನ್ನಾರ ನಡೆಸಿ ಮತ್ತೆ ಗಲಾಟೆ, ಗದ್ದಲ ಕೈಗೊಂಡಲ್ಲಿ ಅದಕ್ಕೆ ನಾವು ಹೊಣೆಗಾರರಲ್ಲ. ಶಾಂತಿಯುತ, ಮತ್ತು ವ್ಯವಸ್ಥಿತ ನಾಡಹಬ್ಬ ನಡೆಯಬೇಕೆಂಬದು ನಮ್ಮ ಆಶಯವಾಗಿದೆ. ನಗರಸಭೆಯ ಸದಸ್ಯರು ಯಾರಾದರೂ ಕಾರ್ಯಾಧ್ಯಕ್ಷ ಸ್ಥಾನದ ಆಕಾಂಕ್ಷಿಗಳಾಗಿದ್ದಲ್ಲಿ ಖಂಡಿತಾ ಪ್ರಯತ್ನ ಕೈಬಿಟ್ಟು ಸಾರ್ವಜನಿಕರ ಅಭಿಪ್ರಾಯಕ್ಕೆ ಮನ್ನಣೆ ನೀಡಿ ರಾಜಕೀಯ ರಹಿತವಾಗಿ ಸಾರ್ವಜನಿಕ ಉತ್ಸವವಾದ ದಸರಾಕ್ಕೆ ಕಾರ್ಯಾಧ್ಯಕ್ಷರನ್ನು ಸಾರ್ವಜನಿಕ ಕ್ಷೇತ್ರದಿಂದಲೇ ಆಯ್ಕೆ ಮಾಡಲು ಅವಕಾಶ ನೀಡಬೇಕು. ಸ್ವಾರ್ಥ ಮನೋಭಾವಕ್ಕಿಂತ ಜನರ ಅಭಿಪ್ರಾಯಕ್ಕೆ ಮನ್ನಣೆ ನೀಡಬೇಕು ಎಂದು ಹೇಳಿದರು.

ರಾಜಕೀಯಕ್ಕಾಗಿ ದಸರಾ ಉತ್ಸವವನ್ನು ಯಾರೂ ಬಳಸಿ ಕೊಳ್ಳಬಾರದು. ದಶಮಂಟಪ ಸಮಿತಿಯವರ ಸಹಕಾರದಿಂದ ಈ ಬಾರಿಯೂ ದಸರಾವನ್ನು ಅತ್ಯುತ್ತಮವಾಗಿ ನಿರ್ವಹಿಸುವ ಭರವಸೆ ಇದೆ. ಸರ್ಕಾರದ ಅನುದಾನವನ್ನು ಸಾರ್ವಜನಿಕ ಕ್ಷೇತ್ರದಿಂದ ಆಯ್ಕೆಯಾಗುವ ಕಾರ್ಯಾಧ್ಯಕ್ಷರೊಂದಿಗೆ ತೆರಳಿ ಪಡೆಯಲಾಗುತ್ತದೆ. ರಾಜಕೀಯ ದ್ವೇಷಾಸೂಯೆಗಳಿಗೆ ದಸರಾ ವೇದಿಕೆ ಬಳಕೆಯಾಗದೇ ರಾಜಕೀಯ ರಹಿತ ನೆಲೆಯಲ್ಲಿ ಸಾರ್ವಜನಿಕ ರಂಗದ ಪ್ರಮುಖರ ಕಾರ್ಯಾಧ್ಯಕ್ಷತೆಯಲ್ಲಿಯೇ ದಸರಾ ನೆರವೇರಲಿ ಎಂಬದೇ ಆಶಯವಾಗಿದೆ ಎಂದರು.

ಜಿಲ್ಲೆಯ ಶಾಸಕರು, ವಿಧಾನಪರಿಷತ್ ಸದಸ್ಯರು, ಜಿಲ್ಲಾ ಪಂಚಾಯತ್ ಪ್ರಮುಖರು, ಜಿಲ್ಲಾಡಳಿತದ ಸಹಕಾರವನ್ನು ಈ ನೆಲೆಯಲ್ಲಿ ನಗರಸಭೆ ಮತ್ತು ದಸರಾ ಸಮಿತಿ ಅಧ್ಯಕ್ಷೆಯಾಗಿ ಕೋರಿದ್ದ ಅವರು, ಗದ್ದಲ, ಗೊಂದಲಗಳ ಉಪಶಮನಕ್ಕೆ ಜಿಲ್ಲೆಯ ಜನಪ್ರತಿನಿಧಿಗಳು ಪ್ರಯತ್ನಿಸುವಂತೆ ಮನವಿ ಮಾಡಿದರು.

‘ಜೆಡಿಎಸ್‍ನಿಂದ ಕಲಿಯಬೇಕಿಲ್ಲ’

ದಸರಾ ಬಗ್ಗೆ ಜೆಡಿಎಸ್ ವಕ್ತಾರ ಭರತ್ ಅವರು ಪತ್ರಿಕಾಗೋಷ್ಠಿಯಲ್ಲಿ ದಸರಾ ಯಾರ ಜಮ್ಮಾ ಆಸ್ತಿಯಲ್ಲವೆಂದು ಹೇಳಿಕೆ ನೀಡಿದ್ದಾರೆ. ಅವರು ಹೇಳಿರುವಂತೆ ನಾನು ಸಭೆಯಿಂದ ಓಡಿ ಹೋಗಿಲ್ಲ. ದಸರಾ ಹೇಗೆ ನಡೆಸಬೇಕೆಂಬದು ಗೊತ್ತಿದೆ. ಅದನ್ನು ಜೆಡಿಎಸ್ ವಕ್ತಾರರಿಂದ ಕಲಿಯಬೇಕಾಗಿಲ್ಲ ಎಂದು ಹೇಳಿದರು.

ಗೋಷ್ಠಿಯಲ್ಲಿದ್ದ ನಗರಸಭಾ ಸದಸ್ಯ ಹೆಚ್.ಎಂ. ನಂದಕುಮಾರ್, ಸಾರ್ವಜನಿಕ ವಲಯದಿಂದ ಕಾರ್ಯಾಧ್ಯಕ್ಷರ ನೇಮಕ ಮಾಡಬೇಕೆಂಬದು ನಮ್ಮೆಲ್ಲರ ಆಶಯವಾಗಿದೆ ಎಂದರು.