ಮಡಿಕೇರಿ, ಜು. 29: ಸರ್ಕಾರದಿಂದ ಎಲ್ಲಾ ವರ್ಗ ಜನಾಂಗದ ಬಡವರಿಗೂ ಒಂದಲ್ಲ ಒಂದು ರೀತಿಯ ಸೌಲಭ್ಯಗಳು ದೊರಕುತ್ತಿವೆ. ಆದರೆ ಈ ಸೌಲಭ್ಯವನ್ನು ಯಾವ ರೀತಿ ಬಳಸಿಕೊಂಡು ಅಭಿವೃದ್ಧಿ ಹೊಂದುತ್ತಿದ್ದಾರೆ ಎಂಬ ಬಗ್ಗೆ ಪರಿಶೀಲನೆ ಮಾಡುವಂತೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಡಾ. ರಿಚರ್ಡ್ ವಿನ್ಸೆಂಟ್ ಡಿಸೋಜ ನಿರ್ದೇಶನ ನೀಡಿದ್ದಾರೆ.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಕಾರ್ಯಕ್ರಮಗಳ ಅನುಷ್ಠಾನ ಸಂಬಂಧಿಸಿದಂತೆ ನಡೆದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಸಮಾಜ ಕಲ್ಯಾಣ, ಐಟಿಡಿಪಿ, ಪಶುಪಾಲನೆ, ಕೃಷಿ, ತೋಟಗಾರಿಕೆ, ಮೀನುಗಾರಿಕೆ ಹೀಗೆ ವಿವಿಧ ಇಲಾಖೆಗಳಿಂದ ಹಲವು ಸೌಲಭ್ಯ ಪಡೆಯುತ್ತಾರೆ. ಆದರೆ ಸೌಲಭ್ಯಗಳನ್ನು ಎಷ್ಟರ ಮಟ್ಟಿಗೆ ಬಳಸಿಕೊಂಡು ಆರ್ಥಿಕವಾಗಿ ಸಬಲರಾಗುತ್ತಿದ್ದಾರೆ ಎಂಬ ಬಗ್ಗೆ ಪರಿಶೀಲಿಸಿ ಮಾಹಿತಿ ಪಡೆಯಬೇಕಿದೆ ಎಂದು ಜಿಲ್ಲಾಧಿಕಾರಿ ನುಡಿದರು.

ಸರ್ಕಾರದ ಕಾರ್ಯಕ್ರಮಗಳನ್ನು ಜನರಿಗೆ ತಲಪಿಸುವ ನಿಟ್ಟಿನಲ್ಲಿ ಹಲವು ರೀತಿಯ ಪ್ರಯತ್ನಗಳು ನಡೆಯುತ್ತಲೇ ಬಂದಿವೆ. ಇದಕ್ಕಾಗಿ ಕೋಟ್ಯಾಂತರ ರೂಪಾಯಿ ಖರ್ಚು ಮಾಡಲಾಗುತ್ತದೆ. ಆದರೆ ಇವು ಎಷ್ಟರ ಮಟ್ಟಿಗೆ ತಲಪಿವೆ ಎಂಬ ಬಗ್ಗೆ ಮಾಹಿತಿ ಒದಗಿಸುವಂತೆ ಜಿಲ್ಲಾಧಿಕಾರಿ ನಿರ್ದೇಶನ ನೀಡಿದರು.

ಹುಣಸೆ ಪಾರೆ, ಸಜ್ಜಳ್ಳಿ, ಕೂಪಾಡಿ, ಮಾಲಂಬಿ, ಕೆ. ಪೆರಾಜೆ, ಮೊಣ್ಣಂಗೇರಿ, ಮಂಗಳಪಾರೆ, ಯವಕಪಾಡಿ, ಕಾಡುಹಾಡಿ, ಹಣ್ಣಿನ ತೋಟ, ಅಂಚೆತಿಟ್ಟು, ಕಂಬಿಯಾರ ಭದ್ರಗೋಳ, ಬೊಗ್ಗನಹಡ್ಲು, ಒಳಗುಂದ, ದುಬಾರೆ, ಬೊಮ್ಮಾಡು, ಆಡಿನಾಡೂರು, ಸಿ.ಬಿ. ಹಳ್ಳಿ, ದೊಡ್ಡರೇಷ್ಮೆ ಹಡ್ಲು, ಚೊಟ್ಟೆಪಾರೆ, ಗೇಟ್ ಹಾಡಿ, ಮಾವಿನಹಳ್ಳ, ಕಟ್ಟೆಹಾಡಿ, ಮಜ್ಜಿಗೆಹಳ್ಳ, ಗೂಡ್ಲೂರು, ದೇವಮಚ್ಚಿ, ಕಿಬ್ಬೆಟ್ಟ, ಆನೆಪಂದಿ, ಕಟ್ಟೆಪಾಡಿ, ಯಲಕನೂರು, ಚೆನ್ನಂಗಿ ಬಸವನಹಳ್ಳಿ, ಕಬ್ಬಿನಗದ್ದೆ, ಹೈಸೊಡ್ಲೂರು, ಹೆರೂರು, ಬರಡಿ, ದೊಡ್ಡಚೇರಿ, ತಣ್ಣಿಮಾನಿ, ತಲೈಮಾರು, ರಂಗನಹಾಡಿ, ಅಂಬುಕೋಟೆ, ಅವರೆಗುಂದ, ಆಲಂದೋಡು, ಹಳ್ಳಿಗಟ್ಟು, ಚಂದನಕೆರೆ, ದೊಡ್ಡಬೆಟ್ಟಗೇರಿ ಈ ಹಾಡಿಗಳಲ್ಲಿ ಕುಡಿಯುವ ನೀರು, ರಸ್ತೆ ಡಾಂಬರೀಕರಣ, ಸಮುದಾಯ ಭವನ, ಕಿರು ಸೇತುವೆ ನಿರ್ಮಾಣ ಮತ್ತಿತರ ಕಾಮಗಾರಿಗಳು ನಡೆಯಬೇಕಿದೆ ಎಂದರು.

ಜಿ.ಪಂ.ಯೋಜನಾ ನಿರ್ದೇಶಕ ಸಿದ್ಧಲಿಂಗಮೂರ್ತಿ, ಐಟಿಡಿಪಿ ಇಲಾಖೆ ಅಧಿಕಾರಿ ಪ್ರಕಾಶ್, ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ಮಯಾದೇವಿ ಗಲಗಲಿ, ಕೃಷಿ ಇಲಾಖೆ ಜಂಟಿ ನಿರ್ದೇಶಕ ಕೆ. ರಾಮಪ್ಪ, ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಬಿ.ಆರ್. ಗಿರೀಶ್, ಜಿ.ಪಂ. ಇಂಜಿನಿಯರ್ ರಾಜ್‍ಕುಮಾರ್ ರೆಡ್ಡಿ, ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕ ಸಚಿನ್ ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.