ಸೋಮವಾರಪೇಟೆ, ಜು.31: ತಾಲೂಕು ಕಚೇರಿಯಲ್ಲಿ ಸಂತೆ ದಿನವಾದ ಸೋಮವಾರದಂದು ಆರ್‍ಟಿಸಿ ವಿತರಣೆ ಸ್ಥಗಿತಗೊಂಡ ಹಿನ್ನೆಲೆ ಪಹಣಿ ಪತ್ರಕ್ಕಾಗಿ ಗ್ರಾಮೀಣ ಭಾಗದಿಂದ ಆಗಮಿಸಿದ ಸಾರ್ವಜನಿಕರು ಕಚೇರಿ ಎದುರು ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದ ಘಟನೆ ಜರುಗಿತು.ಆರ್‍ಟಿಸಿ ಕೇಂದ್ರದ ಯುಪಿಎಸ್ ಸುಟ್ಟು ಹೋಗಿರುವದರಿಂದ ಸಾರ್ವಜನಿಕರಿಗೆ ಆರ್‍ಟಿಸಿ ನೀಡಲು ಸಾಧ್ಯವಾಗಲಿಲ್ಲ. ಈ ಬಗ್ಗೆ ಕಚೇರಿ ಎದುರು ಸೂಚನಾ ಫಲಕವನ್ನೂ ಅಳವಡಿಸಿರಲಿಲ್ಲ. ಈ ಹಿನ್ನೆಲೆ ಸಾರ್ವಜನಿಕರು ಕಚೇರಿ ಎದುರು ಕಾದು ಕುಳಿತು ಸುಸ್ತಾದರು. ನಂತರ ಜೆಡಿಎಸ್ ಕಾರ್ಯಕರ್ತರೊಂದಿಗೆ ತಹಶೀಲ್ದಾರ್ ಕಚೇರಿಗೆ ತೆರಳಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದರಲ್ಲದೇ, ಅಧಿಕಾರಿಯೊಂದಿಗೆ ಮಾತಿನ ಚಕಮಕಿ ನಡೆಸಿದರು.

ಕಳೆದ ಎರಡು ವರ್ಷದ ಹಿಂದೆ ಜಿಲ್ಲಾ ಉಸ್ತುವಾರಿ ಸಚಿವರು ಇಲ್ಲಿನ ತಾಲೂಕು ಕಚೇರಿಗೆ ಭೇಟಿ ನೀಡಿದ ಸಂದರ್ಭ ಸಾರ್ವಜನಿಕರ ಒತ್ತಾಯದ ಮೇರೆಗೆ ಹೆಚ್ಚುವರಿ ಕೌಂಟರನ್ನು ತೆರೆಯುವಂತೆ ಜಿಲ್ಲಾಧಿಕಾರಿ ಮತ್ತು ತಾಲೂಕು ಆಡಳಿತಕ್ಕೆ ಸೂಚನೆ ನೀಡಿದ್ದರು. ಆದರೆ ಇದುವರೆಗೂ ಹೆಚ್ಚುವರಿ ಕೌಂಟರ್ ತೆರೆಯಲು ಅಧಿಕಾರಿಗಳು ಮುಂದಾಗಿಲ್ಲ. ಪ್ರತಿ ಸೋಮವಾರ ಇಲ್ಲಸಲ್ಲದ ಸಬೂಬು ಹೇಳಿ ಸಾರ್ವಜನಿಕರಿಗೆ ಆರ್‍ಟಿಸಿ ನೀಡುತ್ತಿಲ್ಲ ಎಂದು ಶಾಂತಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ, ಜೆಡಿಎಸ್ ಮುಖಂಡ ಬಿ.ಪಿ.ಅನಿಲ್‍ಕುಮಾರ್ ಆರೋಪಿಸಿದರು.

ವಾರದ ಮೂರು ದಿನ ತಾಂತ್ರಿಕ ತೊಂದರೆ ನೆಪ ಹೇಳಿ ಆರ್‍ಟಿಸಿ ನೀಡುತ್ತಿಲ್ಲವೆಂದು ಸಾರ್ವಜನಿಕರು ಆರೋಪಿಸಿದರು. ಆಯಾ ಹೋಬಳಿ ಕೇಂದ್ರದಲ್ಲಿ ಆರ್‍ಟಿಸಿ ವಿತರಿಸಲಾಗುತ್ತಿದೆ. ಗ್ರಾಮ ಪಂಚಾಯಿತಿಗಳಲ್ಲೂ ನೀಡಲಾಗುತ್ತಿದೆ. ಸಾರ್ವಜನಿಕರು ತಾಲೂಕು ಕಚೇರಿಗೆ ಆಗಮಿಸುವ ಅವಶ್ಯಕತೆ ಇಲ್ಲ ಎಂದು ತಹಶೀಲ್ದಾರ್ ಮಹೇಶ್ ಸಮಜಾಯಿಷಿಕೆ ನೀಡುವ ಪ್ರಯತ್ನ ನಡೆಸಿದರು.

ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಸಾರ್ವಜನಿಕರು, ನಗರ ವ್ಯಾಪ್ತಿಯಲ್ಲೇ ಸರ್ಕಾರಿ ಇಲಾಖೆಗಳ ಕಚೇರಿಗಳಿದ್ದು, ಸಾರ್ವಜನಿಕರಿಗೆ ಸಮರ್ಪಕ ಸೇವೆ ಒದಗಿಸಿ. ಇದನ್ನು ಬಿಟ್ಟು ಇಲ್ಲಸಲ್ಲದ ಸಬೂಬು ನೀಡಬೇಡಿ ಎಂದು ಆಕ್ರೋಶ ಹೊರಹಾಕಿದರು. ತಕ್ಷಣವೇ ಆರ್‍ಟಿಸಿ ವಿತರಿಸಲು ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕು. ಹೆಚ್ಚುವರಿ ಕೌಂಟರ್ ತೆರೆಯಲು ಸಾಧ್ಯವಿಲ್ಲದಿದ್ದರೆ ಖಾಸಗಿಯವರಿಗೆ ವಹಿಸಿ ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

ಈ ಸಂದರ್ಭ ಜೆಡಿಎಸ್ ಪಕ್ಷದ ವಕ್ತಾರ ಕೃಷ್ಣಪ್ಪ, ಜಿಲ್ಲಾ ಯುವ ಘಟಕದ ಅಧ್ಯಕ್ಷ ಎನ್.ಆರ್.ಅಜೀಶ್‍ಕುಮಾರ್, ಮುಖಂಡರಾದ ಶಿವಪ್ಪ, ಕೆ.ಕೆ.ಜಾನಕಿ, ಆರ್‍ಎಂಸಿ ಸದಸ್ಯ ಸಿ.ಎಸ್.ನಾಗರಾಜು, ಹೆಚ್.ಕೆ.ಪ್ರಸಿ ಸೇರಿದಂತೆ ಇತರರು ಉಪಸ್ಥಿತರಿದ್ದರು. ಈ ಸಂಬಂಧಿತ ಮನವಿಯನ್ನು ಜಿಲ್ಲಾ ಉಪವಿಭಾಗಾಧಿಕಾರಿ ನಂಜುಂಡೇಗೌಡ ಅವರಿಗೆ ಸಲ್ಲಿಸಲಾಯಿತು.