ಕುಶಾಲನಗರ, ಜು. 31 : ಅರಣ್ಯ ಇಲಾಖೆಯ ಕೊಡಗು ಅರಣ್ಯ ವೃತ್ತದ ಮಡಿಕೇರಿ ವನ್ಯಜೀವಿ ವಿಭಾಗ ಹಾಗೂ ಪುಷ್ಪಗಿರಿ ವನ್ಯಜೀವಿ ವಲಯದ ಆಶ್ರಯದಲ್ಲಿ ಶಾಲಾ ಮಕ್ಕಳಲ್ಲಿ ಅರಣ್ಯ, ವನ್ಯಜೀವಿ ಸಂಕುಲಗಳ ರಕ್ಷಣೆ ಹಾಗೂ ಪರಿಸರ ಸಂರಕ್ಷಣೆ ಕುರಿತು ಜಾಗೃತಿ ಮೂಡಿಸುವ ಸಲುವಾಗಿ ಸೋಮವಾರಪೇಟೆ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ 9 ನೇ ತರಗತಿ ವಿದ್ಯಾರ್ಥಿಗಳಿಗೆ ಎರಡು ದಿನಗಳ ಕಾಲ ಚಿಣ್ಣರ ವನದರ್ಶನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ವನದರ್ಶನ ಕಾರ್ಯಕ್ರಮದಲ್ಲಿ ಕುಶಾಲನಗರ ಸಮೀಪದ ಕಾವೇರಿ ನಿಸರ್ಗಧಾಮಕ್ಕೆ ಭೇಟಿ ನೀಡಿದ್ದ ಶಾಲಾ ಮಕ್ಕಳಿಗೆ ಕಾಡು, ವನ್ಯಜೀವಿಗಳ ಸಂರಕ್ಷಣೆ ಹಾಗೂ ಪರಿಸರ ಜಾಗೃತಿ ಕುರಿತು ಪರಿಸರ ಪಾಠ ಹೇಳಿ ಕೊಡಲಾಯಿತು.
ಈ ಸಂದರ್ಭ ಮಾತನಾಡಿದ ಪುಷ್ಪಗಿರಿ ವನ್ಯಜೀವಿ ವಲಂiÀi ಅರಣ್ಯಾಧಿಕಾರಿ ಜೀವನ್ಕುಮಾರ್, ಶಾಲಾ ಮಕ್ಕಳಲ್ಲಿ ಅರಣ್ಯ ಮತ್ತು ವನ್ಯಜೀವಿ ಸಂಕುಲಗಳ ರಕ್ಷಣೆ ಹಾಗೂ ಪರಿಸರ ಸಂರಕ್ಷಣೆ ಕುರಿತು ಜಾಗೃತಿ ಮೂಡಿಸುವ ದಿಸೆಯಲ್ಲಿ ಅರಣ್ಯ ಇಲಾಖೆ ವತಿಯಿಂದ ವನದರ್ಶನ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದರು.
ಪ್ರತಿಯೊಬ್ಬರೂ ಪರಿಸರ ನಾಶ ಮತ್ತು ಮಾಲಿನ್ಯವನ್ನು ತಡೆಗಟ್ಟುವ ಮೂಲಕ ಕಾಡು ಮತ್ತು ವನ್ಯಜೀವಿಗಳ ಸಂರಕ್ಷಣೆ ಮಾಡುವ ಮೂಲಕ ಪರಿಸರ ಸಮತೋಲನ ಕಾಪಾಡಬೇಕು ಎಂದು ಜೀವನ್ಕುಮಾರ್ ಹೇಳಿದರು.
ನಮ್ಮ ಅರಣ್ಯಗಳು ಮತ್ತು ಜೀವ ವೈವಿಧ್ಯ ಸಂರಕ್ಷಣೆ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದ ಸಂಪನ್ಮೂಲ ವ್ಯಕ್ತಿ, ಶಿಕ್ಷಕ ಟಿ.ಜಿ. ಪ್ರೇಮಕುಮಾರ್, ಜೀವಿವೈವಿಧ್ಯ ನಮ್ಮ ಅಮೂಲ್ಯ ಸಂಪತ್ತು. ಅರಣ್ಯಗಳಿಲ್ಲದೇ ನಮ್ಮ ಬದುಕೇ ಅಸಾಧ್ಯ. ಕಾಡು, ಕೇವಲ ಮರಗಿಡಗಳ ಗುಂಪಲ್ಲ. ಅದು ಪ್ರಕೃತಿಯ ಸಂಕೀರ್ಣ ವ್ಯವಸ್ಥೆ . ಈ ದಿಸೆಯಲ್ಲಿ ನಾವು ಅರಣ್ಯ, ವನ್ಯಜೀವಿ ಹಾಗೂ ಜೀವಿ ವೈವಿಧ್ಯ ಸಂರಕ್ಷಣೆಯಲ್ಲಿ ತೊಡಗಬೇಕಿದೆ ಎಂದರು.
ಕೊಡಗಿನ ದೇವರಕಾಡುಗಳು ಮತ್ತು ಅರಣ್ಯ ಸಂರಕ್ಷಣೆ ಕುರಿತು ಮಾತನಾಡಿದ ಸಂಪನ್ಮೂಲ ವ್ಯಕ್ತಿ, ಚಿಂತನ ಫೌಂಡೇಶನ್ನ ಸಂಚಾಲಕ ಕೂಡಿಗೆ ಗೋವಿಂದರಾಜ್, ಪೂರ್ವಿಕರು ಮೊದಲಿನಿಂದಲೂ ಸಂರಕ್ಷಿಸಿಕೊಂಡು ಬಂದಿರುವ ದೇವರಕಾಡುಗಳು ನಾಶವಾಗದಂತೆ ನಾವು ಜಾಗ್ರತೆ ವಹಿಸಬೇಕು ಎಂದರು.
ಪುಷ್ಪಗಿರಿ ವನ್ಯಜೀವಿ ವಲಯದ ಉಪ ವಲಯಾರಣ್ಯಾಧಿಕಾರಿ ದುಶ್ಯಂತ್, ವಿದ್ಯಾರ್ಥಿಗಳಿಗೆ ಕಾವೇರಿ ನಿಸರ್ಗಧಾಮದಲ್ಲಿನ ಪರಿಸರ ಸ್ನೇಹಿ ಪ್ರವಾಸೋದ್ಯಮದ ಕುರಿತು ಪರಿಚಯಿಸಿದರು.
ಕಾಲೇಜಿನ ಉಪ ಪ್ರಾಂಶುಪಾಲ ಎಚ್.ಬಿ. ತಳವಾರ, ಶಿಕ್ಷಕ ಜಯಣ್ಣ ವಿದ್ಯಾರ್ಥಿಗಳಿಗೆ ಕಾಡಿನ ಗಿಡ-ಮರಗಳು ಹಾಗೂ ಸಸ್ಯಸಂಕುಲ ಕುರಿತು ಚರ್ಚಿಸಿದರು.
ಅರಣ್ಯ ರಕ್ಷಕ ಈರಣ್ಣ ಪೊದಾರ್, ಶಿಕ್ಷಕರಾದ ಮಮತ, ಧನ್ಯ, ಆಯಿಷ, ಸಿದ್ದಿಕ್ ಇದ್ದರು.
ಎರಡು ದಿನಗಳ ವನದರ್ಶನ ಕಾರ್ಯಕ್ರಮದಲ್ಲಿ ಕಾಡಿಗೆ ಭೇಟಿ ನೀಡಿದ್ದ ವಿದ್ಯಾರ್ಥಿಗಳಿಗೆ ಕಾಡನ್ನು ಪರಿಚಯಿಸಲಾಯಿತು. ನಂತರ ಮಕ್ಕಳಿಗೆ ಅರಣ್ಯ, ವನ್ಯಜೀವಿಗಳು ಹಾಗೂ ಪರಿಸರ ಸಂರಕ್ಷಣೆ ಕುರಿತು ಭಾಷಣ, ಪ್ರಬಂಧ ಹಾಗೂ ಚಿತ್ರಕಲಾ ಸ್ಪರ್ಧೆ ಏರ್ಪಡಿಸಲಾಗಿತ್ತು.