ವೀರಾಜಪೇಟೆ, ಜು. 30: ಕೊಡಗು ಕೇರಳ ಗಡಿ ಪ್ರದೇಶವಾದ ಪೆರುಂಬಾಡಿಯಲ್ಲಿ ಕಳೆದ ಎರಡೂವರೆ ದಶಕಗಳಿಗಿಂತಲೂ ಅಧಿಕ ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿದ್ದ ಮಾರಾಟ ತೆರಿಗೆ ತನಿಖಾ ಠಾಣೆಗೆ ರಾಜ್ಯ ಸರಕಾರ ಕೊಕ್ ನೀಡಿ ಬೀಗ ಜಡಿದಿದೆ.
ಕೇಂದ್ರ ಸರಕಾರವು ಜುಲೈ ಒಂದರಿಂದ ಜಿ.ಎಸ್.ಟಿ ತೆರಿಗೆ (ಸರಕು ಸೇವಾ ತೆರಿಗೆ)ಯನ್ನು ಜಾರಿಗೆ ತಂದಿದ್ದರಿಂದ ಪೆರುಂಬಾಡಿಯ ಮಾರಾಟ ತನಿಖಾ ಠಾಣೆಗೆ ಕೆಲಸವಿಲ್ಲದಂತಾಗಿದೆ. ಕೇಂದ್ರದ ಜಿ.ಎಸ್.ಟಿ. ಪ್ರಕಾರ ಸರಕು ಹೊರ ಬರುವ ಮೊದಲೇ ಮೂಲದಲ್ಲಿಯೇ ತೆರಿಗೆ ವಿಧಿಸುತ್ತಿರುವದರಿಂದ ತೆರಿಗೆಯ ತನಿಖಾ ಠಾಣೆಗಳು ಅಗತ್ಯವಿಲ್ಲದಂತಾಗಿದೆ. ಈ ತನಿಖಾ ಠಾಣೆಯಲ್ಲಿ ಒಬ್ಬ ಅಧಿಕಾರಿ ಸೇರಿದಂತೆ ಐದು ಮಂದಿ ಸಿಬ್ಬಂದಿ ರಾತ್ರಿ ಹಗಲೆನ್ನದೆ ಸೇವೆ ಸಲ್ಲಿಸುತ್ತಿದ್ದರು.
ಕಳೆದ ಮಾರ್ಚ್ 9 ರಂದು ಸಾರ್ವಜನಿಕವಾಗಿ ನೀಡಿದ ದೂರಿನ ಮೇರೆ ಮಡಿಕೇರಿ ಹಾಗೂ ಮೈಸೂರಿನ ಲೋಕಾಯುಕ್ತ ಅಧಿಕಾರಿಗಳು ಜಂಟಿಯಾಗಿ ಧಾಳಿ ನಡೆಸಿ ಅನಧಿಕೃತ ನಗದು ಹಣ ರೂ 39,700 ವಶ ಪಡಿಸಿಕೊಂಡು ದಲ್ಲಾಳಿ, ಅಧಿಕಾರಿ ಸೇರಿದಂತೆ ಐದು ಮಂದಿಯನ್ನು ಭ್ರಷ್ಟಾಚಾರದ ಆರೋಪದಡಿ ಬಂಧಿಸಿ ಪ್ರಕರಣ ದಾಖಲಿಸಿದ್ದನ್ನು ಇಲ್ಲಿ ಸ್ಮರಿಸಬಹುದು.
ಈಗ ಮಾರಾಟ ತೆರಿಗೆಯ ತಾಲೂಕಿನ ಪ್ರಧಾನ ಕಚೇರಿ ಮಾತ್ರ ವೀರಾಜಪೇಟೆಯಲ್ಲಿ ಕಾರ್ಯ ನಿರ್ವಹಿಸುತ್ತಿದೆ.
ಕೊಡಗಿನ ಮಾಕುಟ್ಟ ಬಳಿಯ ಕೇರಳದ ಕೂಟುಪೊಳೆಯ ಸಮೀಪದಲ್ಲಿದ್ದ ಮಾರಾಟ ತನಿಖಾ ಕಚೇರಿಯನ್ನು ಬಂದ್ ಮಾಡಲಾಗಿದೆ.