ವೀರಾಜಪೇಟೆ. ಜು. 31: ವೀರಾಜಪೇಟೆಯ ಬೆಟೋಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೆಗ್ಗಳದ ಬೂದಿಮಾಳ ಎಂಬಲ್ಲಿ ಜಾನ್ ಡಿಸೋಜ ಎಂಬುವರು ಬಾಡಿಗೆ ಮನೆಯ ಪಕ್ಕದಲ್ಲಿ ನಿರ್ಮಿಸಿರುವ ಕ್ರೈಸ್ತ ದೇವರ ಗುಡಿ ಅನಧಿಕೃತವಾಗಿದ್ದು, ಎರಡು ದಿನಗಳ ಅವಧಿಯಲ್ಲಿ ತೆರವುಗೊಳಿಸದಿದ್ದರೆ ತಾ. 2 ರಂದು ತಾಲೂಕು ತಹಶೀಲ್ದಾರ್ ಅವರ ಕಚೇರಿ ಎದುರು ಹೆಗ್ಗಳ ಗ್ರಾಮಸ್ಥರು ರಾಜಕೀಯ ರಹಿತವಾಗಿ ಧರಣಿ ಮುಷ್ಕರ ಹೂಡುವರೆಂದು ಎಂದು ಗ್ರಾಮಸ್ಥ್ತರ ಪರವಾಗಿ ಜಿಲ್ಲಾ ಪಂಚಾಯಿತಿ ಸದಸ್ಯ ಅಚ್ಚಪಂಡ ಮಹೇಶ್ ಗಣಪತಿ ತಿಳಿಸಿದರು.

ಪತ್ರಿಕಾ ಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು ಜಾನ್ ಡಿಸೋಜಾ ಅವರಿಗೆ ಬೂದಿಮಾಳದಲ್ಲಿ ಸ್ವಂತ ಜಾಗವಿಲ್ಲ. ಹೆಗ್ಗಳದಲ್ಲಿ ಈಗಾಗಲೇ ಚರ್ಚ್‍ಗಳು, ಮಸೀದಿಗಳು ದೇವಸ್ಥಾನಗಳು ಇವೆ. ಗ್ರಾಮಸ್ಥರು ಶಾಂತಿ ಸಹಬಾಳ್ವೆಯಿಂದ ಜೀವನ ನಡೆಸುತ್ತಿದ್ದಾರೆ. ರಸ್ತೆ ಬದಿಯಲ್ಲಿ ಕ್ರೈಸ್ತ ಗುಡಿ ನಿರ್ಮಿಸಿ ದೇವರುಗಳನ್ನಿಟ್ಟಿರುವದು ಗ್ರಾಮಸ್ಥರ ನಡುವೆ ಶಾಂತಿ ಕದಡುವ ಯತ್ನ ವಾಗಿದೆ ಎಂದು ಆರೋಪಿಸಿದರು.

ಬೆಟೋಳಿ ಗ್ರಾಮ ಪಂಚಾಯಿತಿ ಸದಸ್ಯ ದಿನೇಶ್ ಬೋಪಣ್ಣ ಮಾತನಾಡಿ ಈಗ ಹೆಗ್ಗಳದಲ್ಲಿ ಯಾವದೇ ಧರ್ಮದ ದೇವಾಲಯ ಗಳಿಗೆ ಕೊರತೆ ಇಲ್ಲ. ಹಿಂದೂ, ಕ್ರಿಶ್ಚಿಯನ್, ಮುಸಲ್ಮಾನರು ಸೇರಿದಂತೆ ಇತರ ಧರ್ಮದವರು ಅನ್ಯೊನ್ಯವಾಗಿ ಅವರವರ ಧರ್ಮಗಳ ಅನುಸಾರ ಸಂಪ್ರದಾಯದಂತೆ ಬದುಕುತ್ತಿದ್ದಾರೆ. ಈಗಿನ ಕ್ರೈಸ್ತ ಗುಡಿಯಿಂದ ಗ್ರಾಮಸ್ಥರ ಒಗ್ಗಟ್ಟಿಗೂ ಒಡಕು ಉಂಟಾಗುವ ಸಾಧ್ಯತೆ ಇದೆ ಎಂದರು.

ಹೆಗ್ಗಳ ಗ್ರಾಮಸ್ಥರ ಪ್ರಮುಖರಾದ ಅಚ್ಚಪಂಡ ಹರೀಶ್ ಮಾತನಾಡಿ ಜಾನ್ ಡಿಸೋಜಾ ಅವರಿಗೆ ಬೆಟೋಳಿ ಗ್ರಾಮ ಪಂಚಾಯಿತಿಯಿಂದ ಗುಡಿ ಕಟ್ಟದಂತೆ ನೋಟೀಸ್ ಜಾರಿ ಮಾಡಲಾಗಿದೆ. ಪಂಚಾಯಿತಿ ಅನೇಕ ಸದಸ್ಯರು ಗುಡಿ ನಿರ್ಮಾಣಕ್ಕೆ ವಿರೋಧವಿರುವದನ್ನು ಜಾನ್ ಅವರ ಗಮನಕ್ಕೆ ತರಲಾಗಿದೆ. ಆದರೂ ಜಾನ್ ಅವರು ಗುಡಿ ಕಟ್ಟಿದ್ದಾರೆ, ಇದು ಗ್ರಾಮದಲ್ಲಿ ಅಶಾಂತಿ ಮೂಡಿಸುವ ಉದ್ದೇಶ ಎಂದು ಆರೋಪಿಸಿದರು.

ಗೋಷ್ಠಿಯಲ್ಲಿ ಗ್ರಾಮಸ್ಥರಾದ ಬಾರಿಕಾಡು ವಿಜಯ, ಪ್ರವೀಣ್, ಸುಧೀರ್, ಸಹದೇವ್, ಪ್ರಕಾಶ್ ಮತ್ತಿತರರು ಉಪಸ್ಥಿತರಿದ್ದರು.