ಮಡಿಕೇರಿ, ಜು. 31: ಆಂಗ್ಲ ಭಾಷಾ ವಿಷಯದಲ್ಲಿ ಶೇ. 100 ರಷ್ಟು ಫಲಿತಾಂಶ ಪಡೆದಿರುವ ಕಾಲೇಜುಗಳ ಉಪನ್ಯಾಸಕರನ್ನು ಆಂಗ್ಲ ಭಾಷಾ ಉಪನ್ಯಾಸಕರ ವೇದಿಕೆ ವತಿಯಿಂದ ಸನ್ಮಾನಿಸಿ, ಗೌರವಿಸಲಾಯಿತು.ಇಲ್ಲಿನ ಸ.ಪ.ಪೂ. ಕಾಲೇಜು ಆವರಣದಲ್ಲಿರುವ ಫೀ.ಮಾ. ಕೆ.ಎಂ. ಕಾರ್ಯಪ್ಪ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಆಂಗ್ಲ ಭಾಷೆಯಲ್ಲಿ ಶೇ. 100 ರಷ್ಟು ಫಲಿತಾಂಶ ಗಳಿಸಿದ ಕೂಡಿಗೆ ಸ.ಪ.ಪೂ. ಕಾಲೇಜು, ಮಡಿಕೇರಿಯ ಸಂತ ಮೈಕಲ್ಲರ ಪ.ಪೂ. ಕಾಲೇಜು, ವೀರಾಜಪೇಟೆಯ ಸಂತ ಅನ್ನಮ್ಮ ಪ.ಪೂ. ಕಾಲೇಜು, ಕಳತ್ಮಾಡುವಿನ ಲಯನ್ಸ್ ಪ.ಪೂ. ಕಾಲೇಜು, ಶನಿವಾರಸಂತೆಯ ಸೇಕ್ರೆಡ್ ಹಾರ್ಟ್ ಪ.ಪೂ. ಕಾಲೇಜು, ಮಡಿಕೇರಿಯ ಸಂತ ಜೋಸೆಫರ ಪ.ಪೂ. ಕಾಲೇಜು, ಗೋಣಿಕೊಪ್ಪಲಿನ ವಿದ್ಯಾನಿಕೇತನ ಪ.ಪೂ. ಕಾಲೇಜು, ಕುಶಾಲನಗರ
(ಮೊದಲ ಪುಟದಿಂದ) ಐಶ್ವರ್ಯ ಪ.ಪೂ. ಕಾಲೇಜು, ಕೆ.ಎಂ.ಟಿ. ಪ.ಪೂ. ಕಾಲೇಜು, ಗೋಣಿಕೊಪ್ಪದ ಕೂರ್ಗ್ ಪಬ್ಲಿಕ್ ಕಾಲೇಜು, ಕೊಟ್ಟಮುಡಿಯ ಮರ್ಕಜ್ ಪ.ಪೂ. ಕಾಲೇಜಿನ ಉಪನ್ಯಾಸಕರು ಗಳನ್ನು ಸನ್ಮಾನಿಸಿ, ಗೌರವಿಸಲಾಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ವಿದ್ಯಾ ಇಲಾಖೆ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಕೆ.ಕೆ. ಮಂಜುನಾಥ್ ಕುಮಾರ್, ಶಿಕ್ಷಕರಿಗೆ ವರ್ಷವಿಡೀ ಬೋಧನೆ ಮಾಡಿದ ನಂತರ ಉತ್ತಮ ಫಲಿತಾಂಶ ಬಂದರೆ ಅದರಲ್ಲಿ ಸಿಗುವ ಸಂತೋಷ ಬೇರೆ ಯಾವದರಲ್ಲೂ ಸಿಗುವದಿಲ್ಲ. ಅದೇ ತೃಪ್ತಿದಾಯಕವೆಂದು ಹೇಳಿದರು. ಹಿಂದೆ ಗ್ರಾಮದಲ್ಲಿ ಶಿಕ್ಷಕರನ್ನು ದೇವರಂತೆ ಕಾಣುತ್ತಿದ್ದರು. ಗೌರವ ಇತ್ತು. ಇದೀಗ ಶಿಕ್ಷಕರೇ ವಿದ್ಯಾರ್ಥಿ ಗಳಿಗೆ ನಮಸ್ಕರಿಸುವ, ಪೋಷಕರನ್ನು ನಾವೇ ಕರೆದು ಮಾತನಾಡಿಸುವ ಪರಿಸ್ಥಿತಿ ಬಂದೊದಗಿರುವದು ಅಘಾತಕಾರಿ ಎಂದು ಹೇಳಿದರು. ಎಲ್ಲಾ ಕ್ಷೇತ್ರಗಳಲ್ಲೂ ಬಲಿಷ್ಠ ಸಂಘಟನೆಗಳಿವೆ. ಆದರೆ ಅಸಂಘಟಿತ ವರ್ಗವೆಂದರೆ ಅದು ಶಿಕ್ಷಕ ವರ್ಗ, ಕಾನೂನು ನಿಯಮಗಳ ಚೌಕಟ್ಟಿನಲ್ಲಿ, ಸ್ವಾಭಿಮಾನದ ಹಂಗಿನಲ್ಲಿ ಶಿಕ್ಷಕರು ಬದುಕು ಸಾಗಿಸಬೇಕಾಗಿದೆ ಎಂದು ಹೇಳಿದರು. ಶಿಕ್ಷಕರ ಸಮಸ್ಯೆಗಳಿಗೆ ಸ್ಪಂದಿಸುವ ಸಂಘಟನೆಗಳು, ಪ್ರತಿನಿಧಿಗಳು ಬೇಕು. ಮುಂಬರುವ ಚುನಾವಣೆಯಲ್ಲಿ ಶಿಕ್ಷಕರು ಶಿಕ್ಷಕ ಅಭ್ಯರ್ಥಿಗೆ ಮತ ನೀಡಿ ಸೇವೆಗೆ ಅವಕಾಶ ಕಲ್ಪಿಸಿಕೊಡಬೇಕೆಂದು ಕೋರಿದರು.
ಕೊಡಗು ಜಿಲ್ಲಾ ಉಪನ್ಯಾಸಕರ ಸಂಘದ ಅಧ್ಯಕ್ಷ ವಿಶ್ವನಾಥ್ ಮಾತನಾಡಿ, ಯಾರನ್ನಾದರೂ ಗುರುತಿಸಿ, ಪ್ರೋತ್ಸಾಹಿಸಲು ಸಂಘ, ವೇದಿಕೆಗಳಿರಬೇಕು. ಇನ್ನಷ್ಟು ಉತ್ತಮ ಫಲಿತಾಂಶ ಪಡೆಯುವಂತಾಗಲೆಂದು ಹಾರೈಸಿದರು.
ಚರಿತ್ರೆ ಉಪನ್ಯಾಸಕರ ಸಂಘದ ಅಧ್ಯಕ್ಷ ಹಂಡ್ರಂಗಿ ನಾಗರಾಜ್ ಮಾತನಾಡಿ, ಇದೊಂದು ಉತ್ತಮ ಅಡಿಪಾಯ. ನಮ್ಮ ಮೇಲೂ ಜವಾಬ್ದಾರಿಯಿದ್ದು, ಈ ಕಾರ್ಯಕ್ರಮ ಹೀಗೆಯೇ ಮುಂದುವರಿಬೇಕೆಂದರು.
ಅಧ್ಯಕ್ಷತೆ ವಹಿಸಿದ್ದ ಪ.ಪೂ. ಶಿಕ್ಷಣ ಇಲಾಖೆ ಉಪನಿರ್ದೇಶಕ ಟಿ. ಸ್ವಾಮಿ ಮಾತನಾಡಿ, ಪ್ರತಿ ವಿಷಯದಲ್ಲೂ ವೇದಿಕೆ ರಚಿಸಿಕೊಂಡು ಸಮಸ್ಯೆಗಳನ್ನು ಬಗೆಹರಿಸಿಕೊಳ್ಳುವ ನಿಟ್ಟಿನಲ್ಲಿ ಸರಕಾರ ಅವಕಾಶ ಕಲ್ಪಿಸಿದ್ದು, ಅದು ಉಪಯೋಗವಾಗಿದೆ ಎಂದರು.
ಪ್ರಸ್ತುತ ಇಂಗ್ಲೀಷ್ ಭಾಷೆ ಕಠಿಣ ಪರಿಸ್ಥಿತಿ ಎದುರಿಸುತ್ತಿದೆ. ವೇದಿಕೆ ಮೂಲಕ ಸಮಸ್ಯೆಗಳಿಗೆ ಸ್ಪಂದಿಸ ಬೇಕಿದೆ. ಎಲ್ಲಾ ವಿಷಯಗಳಲ್ಲೂ ವೇದಿಕೆ ರಚನೆಯಾಗಬೇಕೆಂದು ಹೇಳಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ವೇದಿಕೆಯ ಅಧ್ಯಕ್ಷ ಹೇಮಂತ್ ಕುಮಾರ್, ಕೊಡಗು ಪುಟ್ಟ ಜಿಲ್ಲೆಯಾಗಿದ್ದು, ಇಲ್ಲಿ ಕೆಲವೇ ಮಂದಿ ಉಪನ್ಯಾಸಕರಿದ್ದರೂ, ಪ್ರಾಮಾಣಿಕವಾಗಿ ಸೇವೆ ಸಲ್ಲಿಸುತ್ತಿದ್ದಾರೆ. ರಾಜ್ಯದಲ್ಲೇ ಪ್ರಥಮ ಬಾರಿಗೆ ಉಪನ್ಯಾಸಕರಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು. ಜಿಲ್ಲೆಯಲ್ಲಿ ಆಂಗ್ಲ ಭಾಷೆ ಮೇಲ್ಪಂಕ್ತಿಯಲ್ಲಿದ್ದು, ವೇದಿಕೆ ವತಿಯಿಂದ ಹಲವಾರು ಯೋಜನೆ ಗಳನ್ನು ಹಮ್ಮಿಕೊಳ್ಳಲು ಚಿಂತಿಸಲಾಗಿದೆ ಎಂದರು.
ವೇದಿಕೆಯಲ್ಲಿ ಪ್ರಾಚಾರ್ಯರ ಸಂಘದ ಅಧ್ಯಕ್ಷ ಕೆಂಚಪ್ಪ, ಪ.ಪೂ. ಕಾಲೇಜು ಪ್ರಾಂಶುಪಾಲ ಬೆಳ್ಯಪ್ಪ, ಇತರ ಕಾಲೇಜುಗಳ ಪ್ರಾಂಶುಪಾಲರು ಗಳಾದ ಪಾರ್ವತಿ, ದೇವಕಿ, ಗುಲಾಬಿ ಇನ್ನಿತರರಿದ್ದರು.
ಪ.ಪೂ. ಕಾಲೇಜು ವಿದ್ಯಾರ್ಥಿನಿ ಯರಾದ ದೀಪಿಕಾ, ತೀರ್ಥ ಪ್ರಾರ್ಥಿಸಿದರೆ, ವೇದಿಕೆ ಕಾರ್ಯದರ್ಶಿ ಪಿಲಿಫ್‍ವಾಸ್ ಸ್ವಾಗತಿಸಿದರು. ಚಾರ್ಲ್ ಡಿಸೋಜ ನಿರೂಪಿಸಿದರೆ, ಗೋಣಿಕೊಪ್ಪಲು ಕಾವೇರಿ ಕಾಲೇಜು ಉಪನ್ಯಾಸಕಿ ಡಯಾನ ವಂದಿಸಿದರು.