ಸುಂಟಿಕೊಪ್ಪ, ಜು. 30: ಅಧಿಕಾರಿಗಳು ಹಾಗೂ ಗುತ್ತಿಗೆದಾರರ ಒಡಂಬಡಿಕೆಯ ಪರಿಣಾಮ ಗ್ರಾಮೀಣಾ ಪ್ರದೇಶದಲ್ಲಿ ರೂ. 5 ಕೋಟಿಗೂ ಅಧಿಕ ವೆಚ್ಚದಲ್ಲಿ ನಿರ್ಮಿಸಿದ ರಸ್ತೆ ಕಾಮಗಾರಿ ಕೆಲವೇ ತಿಂಗಳಿನಲ್ಲಿ ಸಂಪೂರ್ಣ ನೀರಿನಲ್ಲಿ ಕೊಚ್ಚಿ ಹೋಗಿದೆ.ಸರಕಾರ ಜನೋಪಯೋಗಿ ಕೆಲಸಗಳನ್ನು ರೂಪಿಸುತ್ತಾ, ಮೂಲಭೂತ ಸೌಲಭ್ಯ ಒದಗಿಸಲು ಆನೇಕ ಯೋಜನೆ ಜಾರಿಗೆ ತಂದಿದೆ ಅದನ್ನು ಜನಪ್ರತಿನಿಧಿಗಳ ಅಧಿಕಾರಿಗಳ ಸಹಕಾರದಿಂದ ಕಾರ್ಯರೂಪಕ್ಕೆ ತರಬೇಕಾಗಿದೆ. ಭ್ರಷ್ಟಚಾರಕ್ಕೆ ಈ ಕಾಮಗಾರಿ ಹಿಡಿದ ಕೈಗನ್ನಡಿಯಾಗಿದೆ.
5 ಕೋಟಿ 63 ಲಕ್ಷ ನೀರಿನಲ್ಲಿ ಹೋಮ: ಐಗೂರು ಗ್ರಾಮ ಪಂಚಾಯಿತಿಯ ಯಡವನಾಡು ಫಾರೆಸ್ಟ್ನಿಂದ ಕಾಜೂರು ಜಂಕ್ಷನ್ವರೆಗೆ 6 ಕಿ.ಮೀ. ರಸ್ತೆ ಕಾಮಗಾರಿಯನ್ನು ‘ನಮ್ಮ ಗ್ರಾಮ ನಮ್ಮ ರಸ್ತೆ’ ಯೋಜನೆಯಡಿ 5 ಕೋಟಿ 63 ಲಕ್ಷ ವೆಚ್ಚದಲ್ಲಿ ನಿರ್ಮಿಸಲು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಿಂದ ನಿರ್ಮಿಸಲು ತಾ. 25. 6.2015 ರಂದು ಭೂಮಿಪೂಜೆ ನೇರವೇರಿಸಲಾಗಿತ್ತು. ತಾ. 24.5.2016ಕ್ಕೆ ಕಾಮಗಾರಿ ಪೂರ್ಣಗೊಳ್ಳಬೇಕಾಗಿತ್ತು.
ಮಂಗಳೂರಿನ ಯೋಜನಾ ವಿಭಾಗದ ಕಾರ್ಯನಿರ್ವಾಹಕ ಅಭಿಯಂತರರು ಹಾಗೂ ಮಡಿಕೇರಿಯ ಯೋಜನಾ ವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರಿಗೆ ಈ ಕಾಮಗಾರಿಯ ಜವಾಬ್ದಾರಿ ವಹಿಸಿದ್ದು ಕುಶಾಲನಗರದ ಗುತ್ತಿಗೆದಾರರೊಬ್ಬರು ಕಾಮಗಾರಿ ಕೈಗೆತ್ತಿಕೊಂಡಿದ್ದರು.
ಆಮೆಗತಿಯಲ್ಲಿ ನಡೆದ ಕಾಮಗಾರಿ ಬಗ್ಗೆ ಯಡವಾರೆ, ಕಾಜೂರು ಗ್ರಾಮಸ್ಥರು ಆಗಾಗ್ಗೆ ಒತ್ತಾಯ ಹೇರಿರುವದರಿಂದ ಕೊನೆಗೂ ಮಾರ್ಚ್ನಲ್ಲಿ ಅರ್ಧಂಬರ್ಧ ಪೂರ್ಣಗೊಳಿಸಲಾಯಿತು. ಇನ್ನೂ 1 ಕಿ.ಮೀ. ರಸ್ತೆ ಕಾಮಗಾರಿ ಬಾಕಿ ಇದೆ.
ಕಳಪೆ ಕಾಮಗಾರಿ: ಈ 6 ಕಿ.ಮೀ. ರಸ್ತೆ ಕಾಮಗಾರಿ ಕಳಪೆಯಿಂದ ಕೂಡಿದೆ ಎಂದು ಸಜ್ಜಳ್ಳಿ ಯಡವಾರೆ ಗ್ರಾಮಸ್ಥರು ಇಂಜಿನಿಯರ್ ಹಾಗೂ ಗುತ್ತಿಗೆದಾರರಲ್ಲಿ ಆಗಾಗ್ಗೆ ಒತ್ತಾಯಿಸುತ್ತಿದ್ದರು.
3 ತಿಂಗಳ ಹಿಂದೆ ನಿರ್ಮಿಸಿದ ಈ ರಸ್ತೆಯ ಡಾಮರು ಸಂಪೂರ್ಣ ಕಿತ್ತು ಹೋಗಿದ್ದು ರಸ್ತೆ ಈಗ ಕೆಸರುಮಯವಾಗಿದೆ. ಸಾರ್ವಜನಿಕರ ತೆರಿಗೆ ಹಣ ನೀರು ಪಾಲಾಗಿದೆ. ಇದರಿಂದ ಸಾರ್ವಜನಿಕರು, ಶಾಲಾ ಮಕ್ಕಳು, ವಾಹನ ಚಾಲಕರು ಪರದಾಡುವಂತಾಗಿದೆ.
ಯಡವನಾಡು ಗ್ರಾಮಸ್ಥರು ಪ್ರತಿಭಟನೆ ನಡೆಸಿ ಪಟ್ಟು ಹಿಡಿದುದರಿಂದ ಮರು ಡಾಮರೀಕರಣ ಮಾಡಿ ಗುತ್ತಿಗೆದಾರರು ಕೈ ತೊಳೆದುಕೊಂಡರು. ಆ ವಿಭಾಗದ 2 ಕಿ.ಮೀ. ರಸ್ತೆ ಕಾಮಗಾರಿ ಸರಿಪಡಿಸಲಾಗಿದೆ. ಯಡವಾರೆ, ಕಾಜೂರು ರಸ್ತೆ ಅಲ್ಲಲ್ಲಿ ಕಿತ್ತು ಹೋಗಿ ಗುಂಡಿ ಬಿದ್ದು ಕೆಸರು ಮಾಯವಾಗಿದೆ. ಗುತ್ತಿಗೆದಾರರು, ಅಭಿಯಂತರರು ಇತ್ತ ತಲೆ ಹಾಕುತ್ತಿಲ್ಲ ಎಂದು ಗ್ರಾಮಸ್ಥರು ಪರಿತಪ್ಪಿಸುತ್ತಿದ್ದಾರೆ.
ನಮ್ಮ ರಸ್ತೆ ಮಳೆಯಲ್ಲಿ ಕಳಪೆ ಕಾಮಗಾರಿಯಿಂದ ಕೊಚ್ಚಿಹೋಗಿದೆ. ಮತ್ತೆ ಸರಿ ಪಡಿಸುವಂತಾಗಬೇಕು ಎಂದು ಚೆರಿಯಮನೆ ರಾಮಪ್ಪ ಒತ್ತಾಯಿಸಿದ್ದಾರೆ.
ಕಾಜೂರು ಯಡವನಾಡು ರಸ್ತೆ ಕಾಮಗಾರಿ ಕಳಪೆಯಾಗಿದೆ ಗುತ್ತಿಗೆದಾರರು ಮತ್ತೆ ಇದನ್ನು ಸರಿಪಡಿಸಿಕೊಡದಿದ್ದರೆ ಹೋರಾಟ ನಡೆಸಲಿದ್ದೇವೆ ಎಂದು ಗ್ರಾಮಸ್ಥ ಪ್ರಮೋದ್ ತಿಳಿಸಿದ್ದಾರೆ.