ಕುಶಾಲನಗರ, ಜು. 30: ವಿದ್ಯಾರ್ಥಿಗಳು ಓದಿನೊಂದಿಗೆ ಕಲೆ ಹಾಗೂ ಸಾಂಸ್ಕ್ರತಿಕ ಚಟುವಟಿಕೆಗಳತ್ತ ಆಸಕ್ತಿ ವಹಿಸಬೇಕೆಂದು ಕುಶಾಲನಗರ ತಪೋವನದ ಫಾದರ್ ಜೀವನ್ ಕರೆ ನೀಡಿದರು.

ಸ್ಥಳೀಯ ಕೊಪ್ಪ ಭಾರತ್‍ಮಾತಾ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ 2017-18 ನೇ ಸಾಲಿನ ವಿವಿಧ ಸಮಿತಿಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು, ಬಾಲ್ಯದಿಂದಲೇ ವಿದ್ಯಾರ್ಥಿಗಳು ಕ್ರೀಡೆ, ಕಲೆ, ಸಾಹಿತ್ಯ, ಸಂಗೀತದತ್ತ ಆಸಕ್ತಿ ಬೆಳೆಸಿಕೊಳ್ಳಬೇಕಿದೆ. ಪಠ್ಯದೊಂದಿಗೆ ಪಠ್ಯೇತರ ಚಟುವಟಿಕೆಗಳತ್ತ ಆಸಕ್ತಿ ಬೆಳೆಸಿಕೊಂಡಲ್ಲಿ ವ್ಯಕ್ತಿತ್ವ ವಿಕಸನಗೊಳ್ಳಲು ಸಾಧ್ಯ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲ ಫಾದರ್ ಜೋಸೆಫ್, ವಿದ್ಯಾರ್ಥಿಗಳಲ್ಲಿ ಅಡಗಿರುವ ಪ್ರತಿಭೆಗಳನ್ನು ಗುರುತಿಸಿ ಸೂಕ್ತ ವೇದಿಕೆ ಕಲ್ಪಿಸಿ ಪ್ರೋತ್ಸಾಹಿಸುವದು ಶಿಕ್ಷಕರ ಜವಾಬ್ದಾರಿಯಾಗಿದೆ ಎಂದರು.

ಇದೇ ಸಂದರ್ಭ 2017-2018 ನೇ ಸಾಲಿನ ಶೈಕ್ಷಣಿಕ ವರ್ಷದ ಸಾಹಿತ್ಯ ಸಮಿತಿ, ಸಾಂಸ್ಕøತಿಕ, ಗಣಿತ ಮತ್ತು ವಿಜ್ಞಾನ ಸಮಿತಿ, ವಾಣಿಜ್ಞ, ಮಾನವೀಯ, ಕ್ರೀಡೆ, ಮಕ್ಕಳ ಮತ್ತು ಬಾಲಕಿಯರ ಸಂರಕ್ಷಣಾ ಸಮಿತಿ, ಆರೋಗ್ಯ ಮತ್ತು ಸ್ವಚ್ಛತಾ ಸಮಿತಿ ಮತ್ತು ಪ್ರಚಾರಗಳ ಸಮಿತಿಗಳನ್ನು ಉದ್ಘಾಟಿಸಲಾಯಿತು.

ಫಾದರ್ ರೆನಿ, ಫಾದರ್ ಪ್ರತೀಶ್, ಫಾದರ್ ತೋಮಸ್, ಸಿಸ್ಟರ್ ಶಿನಿಮ್ಯಾಥ್ಯುವ್, ಸಿಸ್ಟರ್ ಟ್ರಿಸಾ, ಉಪನ್ಯಾಸಕಿ ಗಾಯತ್ರಿ ಉಪಸ್ಥಿತರಿದ್ದರು.

ಅಫ್ರೀನ್ ಮತ್ತು ತಂಡ ಪ್ರಾರ್ಥಿಸಿದರು, ತೇಜಸ್ವಿನಿ ಕಾರ್ಯಕ್ರಮ ನಿರೂಪಿಸಿದರು.