ಸಿದ್ದಾಪುರ, ಜು. 30: ನೆಲ್ಯಹುದಿಕೇರಿ ಗ್ರಾ.ಪಂ ವ್ಯಾಪ್ತಿಯ ನಲ್ವತ್ತೆಕರೆ ಹಾಗೂ ಬರಡಿ ಗ್ರಾಮಗಳಿಗೆ ತೆರಳುವ ರಸ್ತೆಯು ಸಂಪೂರ್ಣ ಹದಗೆಟ್ಟಿದ್ದು, ಗ್ರಾಮಸ್ಥರು ಪ್ರತಿಭಟನೆಯ ಎಚ್ಚರಿಕೆ ನೀಡಿದ್ದಾರೆ.ನೆಲ್ಯಹುದಿಕೇರಿಯ ಬರಡಿ, ನಲ್ವತ್ತೇಕರೆಗೆ ತೆರಳುವ ನೂರಾರು ಮಂದಿ ಇದೇ ರಸ್ತೆಯಲ್ಲಿ ಸಂಚರಿಸುತ್ತಿದ್ದು, ಗುಂಡಿಗಳಿಂದ ಕೂಡಿದ ರಸ್ತೆಯಲ್ಲಿ ಸಂಚರಿಸುವದು ಗ್ರಾಮಸ್ಥರಿಗೆ ಸಾಹಸವಾಗಿದೆ. ಮಾತ್ರವಲ್ಲದೇ ಆಟೋ ಸೇರಿದಂತೆ ಬಾಡಿಗೆ ವಾಹನಗಳು ಕೂಡ ಬಾಡಿಗೆಗೆ ಬರಲು ಹಿಂಜರಿಯುತ್ತಿದ್ದು, ದುಬಾರಿ ಬಾಡಿಗೆಯನ್ನು ನೀಡಬೇಕಾದ ಸ್ಥಿತಿ ಗ್ರಾಮಸ್ಥರಿಗೆ ಎದುರಾಗಿದೆ. ಈ ಭಾಗದಲ್ಲಿ ಕಾಡಾನೆ ಹಾವಳಿ ಕೂಡ ಹೆಚ್ಚಾಗಿದ್ದು, ಹದಗೆಟ್ಟಿರುವ ರಸ್ತೆಯಲ್ಲಿ ಭಯದಿಂದಲೇ ಸಂಚರಿಸಬೇಕಾದ ದುಸ್ಥಿತಿ ಗ್ರಾಮಸ್ಥರದ್ದು.

ಇತ್ತೀಚೆಗೆ ಜಿಲ್ಲಾಧಿಕಾರಿಗಳು ಕಸದ ವಿಲೇವಾರಿಗೆ ಜಾಗ ಗುರುತಿಸುವ ನಿಟ್ಟಿನಲ್ಲಿ ನಲ್ವತ್ತೆಕರೆ ಗ್ರಾಮಕ್ಕೆ ತೆರಳಿದ್ದು, ಗ್ರಾಮದ ಹಿರಿಯರಾದ ಕೊಂಗೆರ ಬೋಪಯ್ಯ ಅವರು ತಮ್ಮ ಸ್ವಂತ ಜಾಗವನ್ನು ಕಸದ ವಿಲೇವಾರಿಗೆ ನೀಡುವದಾಗಿ, ನಲ್ವತ್ತೆಕರೆಗೆ ತೆರಳುವ ಸಾರ್ವಜನಿಕ ರಸ್ತೆಯನ್ನು ಡಾಮರೀಕರಣ ಮಾಡಿಕೊಡುವಂತೆ ಷರತ್ತು ಹಾಕಿದ್ದರು. ಸ್ವತಹಾ ಜಿಲ್ಲಾಧಿಕಾರಿಗಳೇ ಗುಂಡಿಗಳಿಂದ ಕೂಡಿದ ರಸ್ತೆಯಲ್ಲಿ ಸಂಚರಿಸಿ ಇದೀಗ ವಾರಗಳು ಕಳೆದಿದ್ದು, ಯಾವುದೇ ಪ್ರತಿಕ್ರಿಯೆ ವ್ಯಕ್ತವಾಗುತ್ತಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ಇನ್ನಾದರು ಜನಪ್ರತಿನಿಧಿಗಳು ಜಿಲ್ಲಾಡಳಿತ ಹಾಗೂ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ರಸ್ತೆಯನ್ನು ದುರಸ್ಥಿಪಡಿಸುವಲ್ಲಿ ಆಸಕ್ತಿ ವಹಿಸಬೇಕೆಂದು ಆಗ್ರಹಿಸಿದ್ದಾರೆ.