ಮಡಿಕೇರಿ, ಜು. 30: ವಿಶ್ವಮಟ್ಟದಲ್ಲಿ ಕಠಿಣವಾದ 10 ರ್ಯಾಲಿಗಳ ಪೈಕಿ ಒಂದಾಗಿದ್ದು, ಏಷ್ಯಾದಲ್ಲಿನ ಅತ್ಯಂತ ಕಠಿಣ ರ್ಯಾಲಿ ಎಂದು ಪರಿಗಣಿಸಲ್ಪಟ್ಟಿರುವ ವಾಹನ ರ್ಯಾಲಿಯಲ್ಲಿ ಕೊಡಗಿನವರಾದ ಅಂತರ್ರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿರುವ ಖ್ಯಾತ ರ್ಯಾಲಿ ಪಟು ಮಾಳೇಟಿರ ಜಗತ್ ನಂಜಪ್ಪ ಹಾಗೂ ಉದ್ದಪಂಡ ಚೇತನ್ ಜೋಡಿ ಪ್ರಥಮ ಸ್ಥಾನ ಗಳಿಸಿದೆ. ಈ ಮೂಲಕ ಜಗತ್ ನಂಜಪ್ಪ ಮತ್ತೊಮ್ಮೆ ತಮ್ಮ ಸಾಮಥ್ರ್ಯ ಸಾಬೀತುಪಡಿಸಿದ್ದಾರೆ.

ಜಗತ್ ಹಾಗೂ ಚೇತನ್ ಜೋಡಿ ಡೀಸಲ್ ಕ್ಲಾಸ್ ವಿಭಾಗದಲ್ಲಿ ಪ್ರಥಮ ಸ್ಥಾನ ಹಾಗೂ ಓವರ್ ಆಲ್ ವಿಭಾಗದಲ್ಲಿ ರನ್ನರ್ಸ್ ಆಗಿ ಹೊರ ಹೊಮ್ಮಿದ್ದಾರೆ.

ಗೋವಾದಲ್ಲಿ ಈ ರ್ಯಾಲಿ ನಡೆದಿದ್ದು, ದುರ್ಗಮಹಾದಿಯ ನಡುವಿನ ಕಠಿಣವಾದ ಸವಾಲು ಇದಾಗಿದೆ. ವಿಶೇಷ ಮಾದರಿಯಲ್ಲಿ ಸಿದ್ಧಪಡಿಸಿದ ಡೀಸಲ್ ಜೀಪ್‍ನಲ್ಲಿ ಇವರು ಈ ಸಾಧನೆ ಮಾಡಿದ್ದಾರೆ. ಒಟ್ಟು ಏಳು ದಿನಗಳ ಸ್ಪರ್ಧೆ ಇದಾಗಿದ್ದು, ಕೊಡಗಿನಿಂದ ಈ ಜೀಪನ್ನು ಸ್ವರಾಜ್ ಮಜ್ದಾ ಲಾರಿಯಲ್ಲಿ ದೂರದ ಗೋವಾಕ್ಕೆ ಕೊಂಡೊಯ್ಯಲಾಗಿತ್ತು. ಇದು ಇವರ ರ್ಯಾಲಿಯ ಆಸಕ್ತಿಗೆ ಸಾಕ್ಷಿಯಾಗಿದೆ. ಇವರ ಸಹಾಯಕ ತಂಡದವರು ಮತ್ತೊಂದು ಜೀಪ್‍ನಲ್ಲಿ ಗೋವಾಕ್ಕೆ ತೆರಳಿದ್ದರು. ಅಂತ್ರಾಷ್ಟ್ರೀಯ ಮಟ್ಟದ ಸ್ಪರ್ಧೆ ಇದಾಗಿದೆ. ಜಗತ್ ನಂಜಪ್ಪ ಈ ಹಿಂದೆ ವಿವಿಧ ರ್ಯಾಲಿಗಳಲ್ಲಿ ಒಟ್ಟು 9 ಬಾರಿ ರಾಷ್ಟ್ರೀಯ ಚಾಂಪಿಯನ್ ಆಗಿ ಸಾಧನೆ ಮಾಡಿದ್ದಾರೆ. ಈ ಬಾರಿ ಇವರೊಟ್ಟಿಗೆ ತೆರಳಿದ್ದ ಉದ್ದಪಂಡ ಚೇತನ್ ಮೂಲತಃ ಅಮ್ಮತ್ತಿಯವರಾಗಿದ್ದಾರೆ.