ಮಡಿಕೇರಿ, ಜು. 31: ದೇಶದಲ್ಲಿ ಜಾರಿಗೊಂಡಿರುವ ನೂತನ ಸರಕು ಹಾಗೂ ಸೇವಾ ತೆರಿಗೆ ವ್ಯವಸ್ಥೆಯಿಂದಾಗಿ ಪ್ರತಿ ಪ್ರಜೆಯೂ ಶಿಸ್ತುಬದ್ಧ ವ್ಯಕ್ತಿತ್ವ ರೂಪಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಕೇಂದ್ರ ಅಬಕಾರಿ ಸುಂಕ ಇಲಾಖೆಯ ಮೈಸೂರು ವಿಭಾಗದ ಜಂಟಿ ಆಯುಕ್ತ ರವಿಕಿರಣ್ ಅಭಿಪ್ರಾಯಪಟ್ಟರು.ಕೊಡಗು ಜಿಲ್ಲಾ ಹೊಟೇಲ್, ರೆಸಾಟ್ರ್ಸ್ ಮತ್ತು ಉಪಹಾರ ಗೃಹಗಳ ಸಂಘದ ವತಿಯಿಂದ ನಗರದಲ್ಲಿ ನಡೆದ ಜಿಎಸ್‍ಟಿ ಕುರಿತ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.

ನೂತನ ತೆರಿಗೆ ವ್ಯವಸ್ಥೆ ಒಂದು ಇತಿಹಾಸವನ್ನು ಸೃಷ್ಟಿಸಿದೆ. ಗ್ರಾಹಕ, ವ್ಯಾಪಾರಿ ಹಾಗೂ ತಯಾರಕರು ಪಾರದರ್ಶಿಕ ವ್ಯವಸ್ಥೆಯನ್ನು ಕಾಣಲಿದ್ದು, ಶಿಸ್ತು ಮತ್ತು ಕಾನೂನು ಪಾಲನೆಗೂ ಇದು ಸಹಕಾರಿ ಎಂದ ರವಿಕಿರಣ್, ಮುಂದೆ ವ್ಯಾಪಾರಕ್ಕೆ ಸಂಬಂಧಿಸಿದ ವ್ಯಾಜ್ಯಗಳೂ ಕಡಿಮೆಯಾಗಲಿದೆ ಎಂದರು. ವ್ಯಾಪಾರಿಗಳು ಕಂಪ್ಯೂಟರ್ ಮೂಲಕವೇ ಲೆಕ್ಕ ವಿವರಗಳನ್ನು ಸಲ್ಲಿಸಬೇಕಿರುವದರಿಂದ ಅವ್ಯವಹಾರ ಹಾಗೂ ಭ್ರಷ್ಟಾಚಾರಕ್ಕೂ ಕಡಿವಾಣ ಬೀಳಲಿದೆ ಎಂದ ಅವರು, ಇದುವರೆಗೂ ತೆರಿಗೆ ಬದಲಾವಣೆಗೆ ಲೋಕಸಭೆ ಹಾಗೂ ವಿಧಾನಸಭೆ ಗಳನ್ನು ಅವಲಂಬಿಸಲಾಗಿದ್ದು, ಮುಂದೆ ಜಿಎಸ್‍ಟಿ ಮಂಡಳಿಯೇ ತೀರ್ಮಾನಿಸಿ ಸರಕಾರಕ್ಕೆ ವರದಿ ಸಲ್ಲಿಸುವದರಿಂದ ಅನುಕೂಲಗಳು ಹೆಚ್ಚಾಗಲಿವೆ ಎಂದು ವಿವರಿಸಿದರು.

ದೇಶದಲ್ಲಿ ವಸ್ತುಗಳ ದರದಲ್ಲಿಯೂ ಸ್ಥಿರತೆ ಉಂಟಾಗಲಿದ್ದು, ದರಗಳಲ್ಲಿಯೂ ಇಳಿತ ಕಾಣಲಿದೆ ಎಂದು ಅವರು ಭವಿಷ್ಯ ನುಡಿದರು.

ಮೈಸೂರು ಹಾಗೂ ಕೊಡಗು ವಿಭಾಗದ ಅಧೀಕ್ಷಕ ವೆಂಕಟೇಶ್ ಅವರು ಪ್ರಾತ್ಯಕ್ಷಿಕೆ ಮೂಲಕ ಜಿಎಸ್‍ಟಿ ವ್ಯವಸ್ಥೆ ಬಗ್ಗೆ ವಿವರಿಸಿದರು.

ಸಂಘದ ಅಧ್ಯಕ್ಷ ಬಿ.ಆರ್. ನಾಗೇಂದ್ರ ಪ್ರಸಾದ್ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ವೆಂಕಟರಮಣ, ಖಜಾಂಚಿ ಭಾಸ್ಕರ್ ವೇದಿಕೆಯಲ್ಲಿದ್ದರು. ಪದಾಧಿಕಾರಿ ಆಸಿಫ್ ಸ್ವಾಗತಿಸಿ, ಜಾಹೀರ್ ಅತಿಥಿಗಳ ಪರಿಚಯ ಮಾಡಿದರು.