ಗುಡ್ಡೆಹೊಸೂರು, ಜು. 31: ಶೀರ್ಷಿಕೆ ನೋಡಿ ಕಸಿವಿಯಾಯಿತೇ...? ಆಗುವದು ಸಹಜ, ಆದರೆ ಶೀರ್ಷಿಕೆ ಸಂಬಂಧಿಸಿದ ವಿಷಯ ತಿಳಿದರೆ ನೀವೇ ತಲೆ ಮೇಲೆ ಕೈ ಇಟ್ಟುಕೊಳ್ಳುವಂತ ದಿಟ...!ಗಣಿಗಾರಿಕೆ ತಡೆಗಟ್ಟುವಂತೆ ಕೋರಿ ಗ್ರಾಮಸ್ಥರು ಸುಂಟಿಕೊಪ್ಪ ಪೊಲೀಸ್ ಠಾಣೆಗೆ ದೂರು ನೀಡಿದ ಸಂದರ್ಭ ದೂರು ದಾಖಲಿಸಿಕೊಂಡ ಪೊಲೀಸರು ದೂರುದಾರರ ಹೆಸರುಗಳನ್ನು ತಿರುಚಿದಲ್ಲದೆ, ಸತ್ತು ಹೋದವರ ಹೆಸರುಗಳನ್ನು ನಮೂದಿಸಿ ವಿಳಾಸದಲ್ಲಿ ನಾಕೂರು ಶಿರಂಗಾಲ ಗ್ರಾಮವು ಅಂಡಮಾನ್ ನಿಕೋಬಾರ್‍ನಲ್ಲಿರುವದಾಗಿ ನಮೂದಿಸಿಕೊಂಡಿದ್ದಾರೆ.

ಕಲ್ಲೂರು ಗ್ರಾಮದಲ್ಲಿ ಗ್ರಾನೇಟ್ ಗಣಿಗಾರಿಕೆ ನಡೆಯುತ್ತಿದೆ. ಈ ಗಣಿಗಾರಿಕೆ ನಡೆಯುತ್ತಿರುವ ಸನಿಹದಲ್ಲಿ ಸರ್ವೆ ನಂ.80 ರಲ್ಲಿ 12.60 ಜಾಗವು ಶ್ರೀಬಸವೇಶ್ವರ ದೇವಸ್ಥಾನಕ್ಕೆ ಸೇರಿದ ಜಾಗವಾಗಿರುತ್ತದೆ. ಅಲ್ಲಿನ ದೇವಸ್ಥಾನ ಟ್ರಸ್ಟ್‍ನ ಅಧ್ಯಕ್ಷ ರಾಜಪ್ಪ ಮತ್ತು ಗ್ರಾಮಸ್ಥರು ತಾ. 27ರಂದು ಸುಂಠಿಕೊಪ್ಪ ಠಾಣೆಗೆ ದೂರು ನೀಡಲು ತೆರಳಿದ್ದಾರೆ. ಕರ್ತವ್ಯದಲ್ಲಿದ್ದ ಠಾಣಾಧಿಕಾರಿ ಬೋಜಪ್ಪ ಅವರು ದೂರು ಸ್ವೀಕರಿಸಲು ನಿರಾಕರಿಸುತ್ತಾರೆ. ಗ್ರಾಮಸ್ಥರು ಸೇರಿ ಪೋಲಿಸ್ ಠಾಣೆ ಮುಂದೆ ಧರಣಿ ನಡೆಸುವದಾಗಿ ಎಚ್ಚರಿಸಿದ ಸಂದರ್ಭ ದೂರು ಸ್ವೀಕರಿಸುತ್ತಾರೆ. ಆದರೆ ದೂರುದಾರರ ಹೆಸರುಗಳನ್ನೆ ತಿರುಚಿ ಬರೆದು ಕೊಂಡಿದ್ದಾರೆ.

ದೂರುದಾರ ರಾಜಪ್ಪ ಎಂದಿರುವದನ್ನು

ರಾಮಯ್ಯ ಮಾಡಿ ಸತ್ತು ಹೋಗಿರುವ ಮತ್ತೊಬ್ಬರ ಹೆಸರು ಸೇರಿಸಿ ದೂರುದಾರರಿಗೆ ಸ್ವೀಕೃತಿ ಪ್ರತಿ ನೀಡಲಾಗಿದೆ.

(ಮೊದಲ ಪುಟದಿಂದ) ಗಣಿಗಾರಿಕೆ ನಡೆಸುವವರಿಗೆ ಬೆಂಬಲ ನೀಡಲು ಈ ರೀತಿಯ ಕೃತ್ಯ ನಡೆಸಿರುವದಾಗಿ ಟ್ರಸ್ಟ್‍ನ ಅಧ್ಯಕ್ಷರು ಮತ್ತು ಸದಸ್ಯರು ದೂರಿದ್ದಾರೆ. ಈ ಬಗ್ಗೆ ಪೋಲಿಸ್ ಉನ್ನತಾಧಿಕಾರಿಯವರಿಗೆ ದೂರು ನೀಡಲು ನಿರ್ಧರಿಸಿದ್ದಾರೆ. ನೋಡಿದರೆ ಯಾರಾದರೂ ಆಶ್ಚರ್ಯ ಪಡಬೇಕಾಗುತ್ತದೆ. ನಾಕೂರು ಶಿರಂಗಾಲ ಗ್ರಾಮ ಸುಂಠಿಕೊಪ್ಪ, ಕೊಡಗು ಅಂಡಮಾನ್, ನಿಕೋಬಾರ್ ಎಂದು ರಾಜ್ಯದ ಹೆಸರು ಇರುವದು ನಮೂದಾಗಿದೆ. ಸುಂಠಿಕೋಪ್ಪ ಎಲ್ಲಿದೆ? ನಾಕೂರು ಶಿರಂಗಾಲ ಎಲ್ಲಿದೆ? ಅಂಡಮಾನ್ ನಿಕೋಬಾರ್ ಎಲ್ಲಿದೆ? ಎಂದು ಸುಂಟಿಕೊಪ್ಪ ಪೋಲಿಸ್ ಠಾಣೆಯವರೆ ಉತ್ತರಿಸಬೇಕಾಗಿದೆ.!

ವರದಿ : ಕುಡೆಕಲ್ ಗಣೇಶ್