ಚೆಟ್ಟಳ್ಳಿ, ಆ. 1: ಚೆಟ್ಟಳ್ಳಿಯ ಕೇಂದ್ರೀಯ ತೋಟಗಾರಿಕಾ ಪ್ರಾಯೋಗಿಕ ಕೇಂದ್ರÀದಲ್ಲಿ ಹಕ್ಕಿಗಳ ಮಾರಣ ಹೊಮವಾಗುತ್ತಿದೆ ಎಂಬ ಸುದ್ದಿ ನಿನ್ನೆಯಿಂದ ಫೇಸ್ ಬುಕ್‍ನಲ್ಲಿ ಹರಿದಾಡುತಿದ್ದು, ಅಲರ್ಟ್ ಆದ ಉಪ ವಲಯ ಅರಣ್ಯಾಧಿಕಾರಿ ಬಾನಂಡ ದೇವಿಪ್ರಸಾದ್, ಅರಣ್ಯ ಸಿಬ್ಬಂದಿಗಳು ಮಾಹಿತಿಯ ಜಾಡನ್ನು ಹಿಡಿದು ತನಿಖೆ ಪ್ರಾರಂಭಿಸಿದ್ದಾರೆ.

ಹಿಂದೊಮ್ಮೆ ಸೀಬೆಹಣ್ಣಿನ ಫಸಲನ್ನು ಟೆಂಡರ್ ಪಡೆದವರು ಹಕ್ಕಿ, ಬಾವಲಿಗಳು ಫಸಲನ್ನು ತಿಂದು ನಷ್ಟ ಮಾಡದಂತೆ ಬಲೆಗಳನ್ನು ಹಾಕಿದ್ದರು. ಅದರಲ್ಲಿ ಹಲವು ಹಕ್ಕಿ, ಬಾವಲಿಗಳು ಸಿಲುಕಿ ಸಾವನಪ್ಪಿದರೆ, ಮತ್ತೆ ಕೆಲವನ್ನು ಪರಿಸರ ಪ್ರೇಮಿಗಳು ಬಿಡಿಸಿ ಕಾಪಾಡಿದ್ದು ದೊಡ್ಡ ಸುದ್ದಿಯಾದವು. ಇದರಿಂದ ಚೆಟ್ಟಳ್ಳಿಯ ಕೇಂದ್ರೀಯ ತೋಟಗಾರಿಕಾ ಪ್ರಾಯೋಗಿಕ ಕೇಂದ್ರದ ಅಧಿಕಾರಿಗಳು ತೊಂದರೆ ಅನುಭವಿಸಬೇಕಾಯಿತು.

ಅದೇ ರೀತಿ ಈ ವರ್ಷವೂ ಚೆಟ್ಟಳ್ಳಿಯ ಕೇಂದ್ರೀಯ ತೋಟಗಾರಿಕಾ ಪ್ರಾಯೋಗಿಕ ಕೇಂದ್ರದಲ್ಲಿ ಸೀಬೆಕಾಯಿ ಫಸಲು ತೀವ್ರ ಪೈಪೋಟಿಯಿಂದ ಇಪ್ಪತೈದು ಲಕ್ಷದ ಒಂದು ಸಾವಿರಕ್ಕೆ ಟೆಂಡರ್ ಆಗಿದೆ. ಟೆಂಡರ್ ಪಡೆದವರು ಪ್ರಾಣಿ, ಪಕ್ಷಿಗಳಿಂದ ಹಗಲಿರುಳು ಫಸಲನ್ನು ಕಾಯುತ್ತಿರುವರು. ಫಸಲಿನ ರಕ್ಷಣೆಗೆ ಬಲೆಹಾಕಿದರೆ ಪಕ್ಷಿಗಳು ಸಾಯುವ ಕಾರಣಕ್ಕೆ ಬಲೆ ಹಾಕಲು ಅವಕಾಶವಿಲ್ಲ.

ಕಳೆದೆರಡು ದಿನಗಳ ಹಿಂದೆ ಟೆಂಡರ್ ಪಡೆದ ಧರ್ಮಲಿಂಗ ಎಂಬ ವ್ಯಕ್ತಿ ಚೆಟ್ಟಳ್ಳಿಯ ಪ್ರಾಯೋಗಿಕ ಕೇಂದ್ರದೊಳಗೆ ಏರ್‍ಗನ್ ಹಿಡಿದು ಬೇಟೆ ಮಾಡುವ ಪೋಸ್‍ನಲ್ಲಿ ಮೊಬೈಲ್‍ನಲ್ಲಿ ಫೋಟೋ ಹಾಕಿರುವದು ಎಡವಟ್ಟಾಗಿದೆ. ಫೋಟೋ ಫೇಸ್‍ಬುಕ್‍ನಲ್ಲೆಲ್ಲ ಹರಿದಾಡಿ ಮೀನುಕೊಲ್ಲಿ ಅರಣ್ಯ ಉಪ ವಲಯ ಅರಣ್ಯಾಧಿಕಾರಿ ಬಾನಂಡ ದೇವಿಪ್ರಸಾದ್ ಅವರಿಗೆ ತಲಪುತಿದ್ದಂತೆ ತಂಡದೊಂದಿಗೆ ಇಂದು ಚೆಟ್ಟಳ್ಳಿಯ ಕೇಂದ್ರೀಯ ತೋಟಗಾರಿಕಾ ಪ್ರಾಯೋಗಿಕ ಕೇಂದ್ರಕ್ಕೆ ದಿಢೀರ್ ಭೇಟಿ ನೀಡಿ ಇಲಾಖಾಧಿಕಾರಿಗಳ ಸಮ್ಮುಖದಲ್ಲಿ ತನಿಖೆ ಪ್ರಾರಂಭಿಸಿದರು.

ಕೇಂದ್ರೀಯ ತೋಟಗಾರಿಕಾ ಪ್ರಾಯೋಗಿಕ ಕೇಂದ್ರದ ಮೇಲ್ವಿಚಾರಣಾಧಿಕಾರಿ ಡಾ. ದೊರೆಯಪ್ಪನ್ ಟೆಂಡರ್ ಪಡೆದ ವ್ಯಕ್ತಿಯ ಮಾಹಿತಿಯನ್ನು ನೀಡಿ ಟೆಂಡರ್‍ದಾರ ಧರ್ಮಲಿಂಗನನ್ನು ಕರೆಸಿ ವಿಚಾರಿಸಿದಾಗ ಏರ್‍ಗನ್ನ್ ನೊಂದಿಗೆ ಪೋಸ್ ನೀಡಿದ ಫೋಟೋವನ್ನು ತಾನೇ ಅಪ್‍ಲೋಡ್ ಮಾಡಿದ್ದ ಬಗ್ಗೆ, ಯಾವದೇ ಪಕ್ಷಿಗಳನ್ನು ಬೇಟೆಯಾಡಿಲ್ಲವೆಂದು ಒಪ್ಪಿಕೊಂಡಿದ್ದಾನೆ.

ಉಪ ವಲಯ ಅರಣ್ಯಾಧಿಕಾರಿ ದೇವಿಪ್ರಸಾದ್, ಕೇಂದ್ರೀಯ ತೋಟಗಾರಿಕಾ ಪ್ರಾಯೋಗಿಕ ಕೇಂದ್ರದ ಸುತ್ತಲಿನ ಹಣ್ಣಿನ ತೋಟಗಳನ್ನೆಲ್ಲ ಪರಿಶೀಲಿಸಿ ಯಾವದೇ ಅನಾಹುತವಾದರೆ ಕಾನೂನು ಕ್ರಮಕೈಗೊಳ್ಳ ಲಾಗುವದೆಂದು ಎಚ್ಚರಿಸಿದರು.

-ಪುತ್ತರಿರ ಕಾಳಯ್ಯ, ಪಪ್ಪುತಿಮ್ಮಯ್ಯ