ಮಡಿಕೇರಿ, ಆ. 1: ಜಿಲ್ಲೆಯ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾಗಿರುವ ಈ ಹಿಂದೆ ಸೀನಿಯರ್ ಕಾಲೇಜು ಆಗಿದ್ದ ಇದೀಗ ಮಂಗಳೂರು ವಿ.ವಿ. ಅಧಿನದಲ್ಲಿರುವ ಫೀ.ಮಾ. ಕಾರ್ಯಪ್ಪ ಕಾಲೇಜಿನಲ್ಲಿ ರಾಜಕೀಯ ನುಸುಳುತ್ತಿರುವ ಲಕ್ಷಣಗಳು ಕಂಡುಬರುತ್ತಿವೆ. ವಿದ್ಯಾರ್ಥಿ ಸಂಘದ ಚುನಾವಣೆ ಹೆಸರಿನಲ್ಲಿ ರಾಜಕೀಯ ಪಕ್ಷಗಳ ಅಂಗಗಳಾಗಿರುವ ವಿದ್ಯಾರ್ಥಿ ಸಂಘಟನೆಗಳು ರಾಜಕೀಯ ಮಾಡುತ್ತಿರುವಂತೆ ಭಾಸವಾಗುತ್ತಿದೆ. ಇತ್ತೀಚೆಗೆ ವಿದ್ಯಾರ್ಥಿ ಸಂಘಕ್ಕೆ ನಡೆದ ಚುನಾವಣೆ ಇದಕ್ಕೆ ಸಾಕ್ಷಿಯಾಗಿದೆ.ಈ ಹಿಂದೆ ಕಾಲೇಜಿನ ವಿದ್ಯಾರ್ಥಿ ಸಂಘದ ಚುನಾವಣೆ ಎಂದರೆ ವಿಧಾನಸಭೆಗೆ ನಡೆಯುವ ಚುನಾವಣೆಗಿಂತಲೂ ಏನೂ ಕಡಿಮೆ ಇರುತ್ತಿರಲಿಲ್ಲ. ಬಿಜೆಪಿ ಬೆಂಬಲಿತ ಎಬಿವಿಪಿ, ಕಾಂಗ್ರೆಸ್ ಬೆಂಬಲಿತ ಎನ್‍ಎಸ್‍ಯುಐ. ಸೇರಿದಂತೆ ಇತರ ಪ್ರತ್ಯೇಕ ಗುಂಪುಗಳ ಮೂಲಕ ಅಭ್ಯರ್ಥಿಗಳು ಕಣಕ್ಕಿಳಿದು ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದರು. ಬ್ಯಾಲೆಟ್ ಪೇಪರ್‍ನಿಂದ ಹಿಡಿದು ಕಾಲೇಜು ರಸ್ತೆಯುದ್ದಕ್ಕೂ ಪ್ರಚಾರ ಘಲಕ, ರಸ್ತೆಯಲ್ಲಿ ಬಣ್ಣಗಳಿಂದ ಬರೆದು ಪ್ರಚಾರ ಮಾಡಲಾಗುತ್ತಿತ್ತು. ಗೆದ್ದ ಬಳಿಕ

(ಮೊದಲ ಪುಟದಿಂದ) ಗೆದ್ದ ತಂಡದವರ ಮೆರವಣಿಗೆ ನಗರದ್ಯಾಂತ ನಡೆಯುತ್ತಿತ್ತು.

ಈ ಸಂದರ್ಭ ಕಲಹ - ಹೊಡೆದಾಟಗಳು ಸಂಭವಿಸುತ್ತಿದ್ದುದರಿಂದ ನಂತರದಿಂದ ಬಹಿರಂಗ ಚುನಾವಣೆ ಕಡಿವಾಣ ಹಾಕಿ ಕಾಲೇಜಿನ ಆಡಳಿತ ವರ್ಗದಿಂದಲೇ ಸಮರ್ಥ ನಾಯಕ, ನಾಯಕಿಯರುಗಳನ್ನು ಆಯ್ಕೆ ಮಾಡುವ ಪ್ರಕ್ರಿಯೆ ಆರಂಭಗೊಂಡಿತು. ಇಂದಿಗೂ ಅದೇ ಮುಂದುವರಿಯುತ್ತಿದೆ.

ಆದರೆ ಮೊನ್ನೆ ನಡೆದ ಚುನಾವಣೆಯಲ್ಲಿ ಪದಾಧಿಕಾರಿಗಳು ಆಯ್ಕೆಗೊಂಡಿದ್ದಾರೆ. ಇದೀಗ ಅವರನ್ನು ನಮ್ಮ ಸಂಘಟನೆಯ ಅಭ್ಯರ್ಥಿಗಳೆಂದು ಎರಡು ಸಂಘಟನೆಗಳು ಕಿತ್ತಾಡುತ್ತಿರುವದು ನೋಡಿದರೆ ವಿದ್ಯಾರ್ಥಿ ಸಂಘ ಎಲ್ಲಿಗೆ ತಲಪಿದೆ ಎಂಬದು ಅರಿಯದಂತಾಗಿದೆ.

ವಿದ್ಯಾರ್ಥಿಗಳಲ್ಲಿ ಗೊಂದಲ : ಕಳೆದ ಜುಲೈ 26ರಂದು ನಡೆದ ಚುನಾವಣೆಯಲ್ಲಿ ನಾಯಕನಾಗಿ ಲೋಹಿತ್, ಉಪನಾಯಕಿಯಾಗಿ ಜನನಿ, ಸಾಂಸ್ಕøತಿಕ ಘಟಕದ ಕಾರ್ಯದರ್ಶಿಯಾಗಿ ನೀಲಮ್ಮ, ಅಹಲ್ಯ, ಜಂಟಿ ಕಾರ್ಯದರ್ಶಿಯಾಗಿ ತೃಪ್ತಿ ಹಾಗೂ ಸುಭಾಶ್ ಆಯ್ಕೆಯಾಗಿದ್ದರು. ಈ ಸಂದರ್ಭ ಎನ್‍ಎಸ್‍ಯುಐನ ಬ್ಯಾನರ್ ಹಿಡಿದು ಅವರುಗಳು ಹಾಕಿದ ಹೂಹಾರದೊಂದಿಗೆ ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ. ಇದು ಎಲ್ಲ ಮಾಧ್ಯಮಗಳಲ್ಲೂ ಬಿತ್ತರಗೊಂಡಿದೆ.

ಆದರೆ ನಿನ್ನೆ ಮತ್ತೆ ಇದೇ ವಿದ್ಯಾರ್ಥಿ ನಾಯಕರುಗಳು ಎಬಿವಿಪಿ ಸಂಘಟನೆಯ ಕಾರ್ಯಕರ್ತರೊಂದಿಗೆ ಧ್ವಜ ಹಿಡಿದು ಸಂಭ್ರಮಾಚರಣೆ ಮಾಡಿದ್ದಾರೆ. ವಿದ್ಯಾರ್ಥಿ ನಾಯಕ ಲೋಹಿತ್, ‘ನಾವು ದೇಶಪ್ರೇಮಿ ಸಂಘಟನೆಗಳಿಗೆ ಬೆಂಬಲ ನೀಡುವದಾಗಿ ಹೇಳಿದ್ದಾರೆ.’ ನಾಯಕಿ ಜನನಿ ‘ನಾವು ಯಾವದೇ ಸಂಘಟನೆಗಳ ಪರವಾಗಿ ಗೆದ್ದು ಬಂದಿಲ್ಲ. ಯಾವದೇ ಸಂಘಟನೆಗಳಿಗೆ, ಪಕ್ಷಗಳಿಗೆ ಬೆಂಬಲಿಸುವದಿಲ್ಲ. ವಿದ್ಯಾರ್ಥಿ ಸಂಘಟನೆ ಮೂಲಕ ಗೆದ್ದಿದ್ದೇವೆ’ ಎಂದು ಹೇಳಿದ್ದಾರೆ.

ಎಬಿವಿಪಿ ಬೆಂಬಲಿಗರು: ಇತ್ತ ಈ ಬಗ್ಗೆ ಪ್ರತಿಕ್ರಿಯಿಸಿರುವ ಎಬಿವಿಪಿ ಜಿಲ್ಲಾ ಸಂಚಾಲಕ ನವನೀತ್ ಪೊನ್ನೇಟ್ಟಿ ವಿದ್ಯಾರ್ಥಿ ಸಂಘಕ್ಕೆ ಆಯ್ಕೆ ಆಗಿರುವವರೆಲ್ಲರೂ ಎಬಿವಿಪಿ ಬೆಂಬಲದಿಂದ ಗೆದ್ದವರು. ಚುನಾವಣೆ ನಡೆದ ಸಂದರ್ಭ ನಾವುಗಳೆಲ್ಲ ಕಾರ್ಗಿಲ್ ವಿಜಯೋತ್ಸವದಲ್ಲಿದ್ದ ಸಂದರ್ಭ ಎನ್‍ಎಸ್‍ಯುಐನವರು ಕಾಲೇಜಿನ ಗೇಟ್ ಬಳಿ ಹೊಂಚು ಹಾಕಿ ಗೆದ್ದವರಿಗೆ ಹೂಹಾರ ಹಾಕಿ, ಸಿಹಿ ಹಂಚಿ, ನಿಮ್ಮೊಂದಿಗೆ ನಾವೂ ಇದ್ದೇವೆ, ನಮ್ಮ ಬೆಂಬಲ ಇದೆ ಎಂದು ಅವರ ಬ್ಯಾನರ್ ನೀಡಿ ಫೋಟೋ ತೆಗದು ಸಾಮಾಜಿಕ ಜಾಲತಾಣಗಳಲ್ಲಿ ಹಾಕಿದ್ದಾರೆ. ನಂತರ ವಿದ್ಯಾರ್ಥಿಗಳೇ ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ಹಾಗಾಗಿ ಎಲ್ಲರಿಗೂ ತಿಳಿಯಪಡಿಸಲೋಸ್ಕರ ನಿನ್ನೆ ಸಂಭ್ರಮಾಚರಣೆ ಮಾಡಿದ್ದಾಗಿ ಹೇಳುತ್ತಾರೆ.

ಎನ್‍ಎಸ್‍ಯುಐ ಗೆಲ್ಲಿಸಿದ್ದು: ಎನ್‍ಎಸ್‍ಯುಐನ ಕಾನೂನು ಸಲಹೆಗಾರ ಪೆಮ್ಮಯ್ಯ ಪ್ರತಿಕ್ರಿಯಿಸಿ ಈ ಹಿಂದಿನಿಂದಲೂ ಎನ್‍ಎಸ್‍ಯುಐ ಬೆಂಬಲಿತ ಅಭ್ಯರ್ಥಿಗಳೇ ಜಯಗಳಿಸುತ್ತಿದ್ದಾರೆ. ಆದರೆ ಎಬಿವಿಪಿಯವರು ಗೆದ್ದವರಿಗೆ ಹಾರ ಹಾಕಿ ನಮ್ಮವರೆಂದು ಹೇಳಿಕೊಳ್ಳುವ ಕಾರ್ಯ ಮಾಡುತ್ತಾರೆ. ಮೊನ್ನೆಯ ಚುನಾವಣೆಯಲ್ಲೂ ನಮ್ಮ ಅಭ್ಯರ್ಥಿಗಳೇ ಗೆಲುವು ಸಾಧಿಸಿದ್ದಾರೆ. ಹಾಗಾಗಿ ನಾವುಗಳು ಗೆದ್ದವರನ್ನು ಅಭಿನಂದಿಸಿದ್ದೇವೆ. ನಮ್ಮೊಂದಿಗೆ ಎಲ್ಲರೂ ಸಂಭ್ರಮಿಸಿದ್ದಾರೆ. ಆದರೆ ಅವರುಗಳನ್ನು ತಮ್ಮತ್ತ ಸೆಳೆಯಲು ಬಿಜೆಪಿ ಹಾಗೂ ಎಬಿವಿಪಿಯವರು ವಾರದಿಂದ ಪ್ರಯತ್ನಿಸಿದರಾದರೂ ವಿದ್ಯಾರ್ಥಿಗಳು ಒಪ್ಪದ ಕಾರಣ ನಿನ್ನೆ ಮಾಧ್ಯಮದವರನ್ನು ಕರೆಸಿ, ಧ್ವಜ ಹಿಡಿಸಿ ಸಂಭ್ರಮಾಚರಣೆ ಎಂದು ಬಿಂಬಿಸಿದ್ದಾರೆ.

ಆದರೆ, ವಿದ್ಯಾರ್ಥಿ ನಾಯಕರು ತಾವು ಎಬಿವಿಪಿ ಸಂಘಟನೆಯವರಲ್ಲ ಎಂದು ಹೇಳಿಕೆ ನೀಡಿದ್ದಾರೆ.

ಒಟ್ಟಿನಲ್ಲಿ ರಾಜಕೀಯ ಪ್ರೇರಿತ ಸಂಘಟನೆಗಳು ವಿದ್ಯಾರ್ಥಿಗಳ ಭವಿಷ್ಯದಲ್ಲಿ ಆಟ ಮುಂದುವರಿಸಿದಂತಿದೆ. ಮುಂದಿನ ಚುನಾವಣೆಯಲ್ಲಿ ಗುರಿಯಾಗಿರಿಸಿಕೊಂಡು ಎಲ್ಲಾ ಕಾಲೇಜುಗಳಲ್ಲೂ ಈ ರೀತಿಯ ‘ಮೇಲಾಟ’ಕ್ಕೆ ಮುಂದಾಗಿರುವದು ಗೊಚರಿಸುತ್ತಿದೆ. ವಿದ್ಯಾರ್ಥಿಗಳಿಗೆ ಆಮಿಸವೊಡ್ಡುವ ಕಾರ್ಯಕ್ಕೂ ಇಳಿದಿರುವದು ರಾಜಕೀಯ ವ್ಯವಸ್ಥೆಯಡಿ ದುರಂತವೆನ್ನಬಹುದು. ವಿದ್ಯಾರ್ಥಿಗಳು ಇಂತಹ ರಾಜಕೀಯ ದಾಳಕ್ಕೆ ಬಲಿಯಾಗದೆ ಭವಿಷ್ಯದ ಪ್ರಜೆಗಳಾಗಿ ರೂಪುಗೊಳ್ಳಬೇಕೆಂಬದೆ ನಮ್ಮ ಆಶಯವಾಗಿದೆ.