ಗೋಣಿಕೊಪ್ಪಲು,ಆ.1: ಸಮರೋಪಾದಿಯಲ್ಲಿ ಕೆಲಸ ನಡೆದ ಹಿನ್ನೆಲೆ ಕೊಡಗು-ಕೇರಳ ಅಂತರರಾಜ್ಯ ಹೆದ್ದಾರಿಯ ಪೆರುಂಬಾಡಿ ರಸ್ತೆ ಕುಸಿತಗೊಂಡಿದ್ದನ್ನು ದುರಸ್ತಿ ಮಾಡಲಾಗಿದೆ.ಮಳೆಹಾನಿ ಪರಿಹಾರ ನಿಧಿಯಿಂದ ಜಿಲ್ಲಾಧಿಕಾರಿಗಳು ರೂ.19 ಲಕ್ಷ ಅನುದಾನ ಕಲ್ಪಿಸುವ ಭರವಸೆ ಹಿನ್ನೆಲೆ ಇರಿಟ್ಟಿಯ ಕಾರ್ಮಿಕರಿಂದ ಇದೀಗ ಶೇ.90 ಭಾಗ ಕಾಮಗಾರಿ ಪೂರ್ಣಗೊಂಡಿದ್ದು, ತಾ.30 ರಿಂದ ಲಘು ವಾಹನಗಳು ಓಡಾಟ ಆರಂಭಿಸಿವೆ. ಪ್ರಯಾಣಿಕರ ಬಸ್ ಮತ್ತು ಭಾರೀ ಸರಕು-ಸಾಗಾಟ ವಾಹನಗಳಿಗೆ ಜಿಲ್ಲಾಧಿಕಾರಿ ಡಾ.ಆರ್.ವಿ. ಡಿಸೋಜ ಅವರು ಆದೇಶ ನೀಡಿದ ನಂತರ ಸಂಚಾರವನ್ನು ಪುನರಾರಂಭಿಸಲಿವೆ.

ಮಾಕುಟ್ಟ ಅಭಯಾರಣ್ಯ ವ್ಯಾಪ್ತಿಯಲ್ಲಿ ಜುಲೈ 22,23 ರಂದು ಸುರಿದ ಭಾರೀ ಮಳೆಗೆ ಕೇರಳಕ್ಕೆ ಸಂಪರ್ಕ ಕಲ್ಪಿಸುವ ಪೆರುಂಬಾಡಿ ರಸ್ತೆ ಸುಮಾರು ನಾಲ್ಕೂವರೆ ಮೀಟರ್ ಆಳ ಹಾಗೂ 13 ಮೀಟರ್ ಉದ್ದ ಕುಸಿತಗೊಂಡಿದ್ದು ವಾಹನ ಓಡಾಟ ಸಂಪರ್ಕ ಕಡಿತಗೊಂಡಿತ್ತು. ಸುಮಾರು 7 ದಿನಗಳ ಕಾಮಗಾರಿ ಬಳಿಕ ಜಿಲ್ಲಾಧಿಕಾರಿ ಆರ್.ವಿ.ಡಿಸೋಜ ಅವರು ಪೆರುಂಬಾಡಿ ಕಾಮಗಾರಿ ಪರಿಶೀಲಿಸಿ ಲಘು ವಾಹನಗಳ ಓಡಾಟಕ್ಕೆ ಅನುಮತಿ ನೀಡಿದ್ದರು. ಇಂದು ಹಾಗೂ ನಾಳೆ ರಸ್ತೆಯ ಇಬ್ಬದಿಯನ್ನು ವೆಟ್‍ಮಿಕ್ಸ್ ಹಾಗೂ ತಾತ್ಕಾಲಿಕ ತಡೆಗೋಡೆಯನ್ನು ಪೂರ್ಣಗೊಳಿಸಿದ ಬಳಿಕ ಕರ್ನಾಟಕ-ಕೇರಳ ಸಾರಿಗೆ, ಖಾಸಗಿ ಸಾರಿಗೆ, ಪ್ರವಾಸಿ ವಾಹನಗಳಿಗೆ ಅನುಮತಿ ನೀಡುವ ಸಾಧ್ಯತೆ ಇದೆ. ಇದೇ ರಸ್ತೆಯ ಮೇಲೆ ಮುಖ್ಯವಾಗಿ ಕೇರಳದಿಂದ ಗ್ರಾನೈಟ್ ಇತ್ಯಾದಿ 40 ಟನ್ ಸಾಮಥ್ರ್ಯದ

(ಮೊದಲ ಪುಟದಿಂದ) ಲಾರಿಗಳು, ಟಿಪ್ಪರ್‍ಗಳ ಓಡಾಟ ಕಳೆದ ಕೆಲವು ವರ್ಷಗಳಿಂದ ಅಧಿಕಗೊಂಡ ನಂತರ ಶತಮಾನ ಇತಿಹಾಸ ಕೆರೆಯ ಕಟ್ಟೆ ಒಡೆಯಲು ಕಾರಣ ಎನ್ನಲಾಗಿದೆ.

ಬ್ರಿಟೀಷರ ಕಾಲದಲ್ಲಿ ವನ್ಯಪ್ರಾಣಿಗಳಿಗೆ ಕುಡಿಯುವ ನೀರಿಗಾಗಿ ಕೆರೆ ನಿರ್ಮಾಣವಾಗಿದ್ದು, ಹೆಚ್ಚುವರಿ ನೀರು ಹೊರಹೋಗಲು ಕೆರೆಯ ಒಂದು ಬದಿಯಲ್ಲಿ ಬ್ರಿಟೀಷರ ಅವಧಿಯಲ್ಲಿಯೇ ಸಣ್ಣ ನಾಲೆಯೊಂದನ್ನು ಕಾಡುಕಲ್ಲು ಬಳಕೆಯಿಂದ ನಿರ್ಮಾಣ ಮಾಡಲಾಗಿತ್ತು. ಆದರೆ, ರಸ್ತೆಯ ತಳಭಾಗ ವಾಹನ ಓಡಾಟದಿಂದಾಗಿ ನಿರಂತರ ಶಿಥಿಲಗೊಂಡು ಕುಸಿಯಲು ಕಾರಣವಾಗಿದೆ.

ಇದೀಗ ಕೆಲಸದ ಬಗ್ಗೆಯೂ ಅಧಿಕಾರಿಗಳಿಂದ ಮೆಚ್ಚುಗೆ ವ್ಯಕ್ತಪಟ್ಟಿದ್ದರೂ, ಮತ್ತೆ ರಸ್ತೆ ಕುಸಿತ ಇನ್ನಿತರ ಯಾವದೇ ಅವಘಡ ಸಂಭವಿಸದಿರಲು ಲೋಕೋಪಯೋಗಿ ಇಲಾಖೆ ಹಾಗೂ ಜಿಲ್ಲಾಧಿಕಾರಿಗಳು ಎಚ್ಚರಿಕೆಯೊಂದಿಗೆ ಓಡಾಟಕ್ಕೆ ಅನುವು ಮಾಡಿಕೊಡಬೇಕಾದ ಅನಿವಾರ್ಯತೆ ಇದೆ.

ಮುಂದಿನ ಎರಡು ಮೂರು ದಿನಗಳಲ್ಲಿ ಬಸ್ ಇತ್ಯಾದಿ ವಾಹನಗಳಿಗೆ ಅನುವು ಮಾಡಿಕೊಡಬಹುದಾಗಿದೆ.

ರಾಷ್ಟ್ರೀಯ ಹೆದ್ದಾರಿಯಾಗುವ ಸಾಧ್ಯತೆ!

ರಾಷ್ಟ್ರೀಯ ಹೆದ್ದಾರಿ ಮತ್ತು ಬಂದರು ಖಾತೆ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರನ್ನು ನಿಯೋಗವೊಂದು ಭೇಟಿ ಮಾಡಿದ್ದು ಹುಣಸೂರು-ಗೋಣಿಕೊಪ್ಪಲು-ವೀರಾಜಪೇಟೆ-ಪೆರುಂಬಾಡಿ-ಕಣ್ಣಾನೂರು ರಸ್ತೆಯನ್ನು ರಾಷ್ಟ್ರೀಯ ಹೆದ್ದಾರಿಯಾಗಿ ಪರಿವರ್ತಿಸುವ ನಿಟ್ಟಿನಲ್ಲಿ ಮನವಿ ಮಾಡಿದ್ದು, ಈ ಬಗ್ಗೆ ಪೂರಕವಾಗಿ ಸ್ಪಂದನೆ ನೀಡಿದ್ದಾರೆ ಎನ್ನಲಾಗಿದೆ. ಹಾಗಿದ್ದಲ್ಲಿ ಪೆರುಂಬಾಡಿ ರಸ್ತೆ ಮತ್ತಷ್ಟು ಅಗಲಗೊಳ್ಳಬೇಕಾಗುತ್ತದೆ. ಇದೀಗ ಭಾರೀ ಗಾತ್ರದ ಕಲ್ಲುಗಳನ್ನು ಕೇರಳದ ಇರಿಟ್ಟಿ ಹಾಗೂ ಕೊಡಗಿನ ಬಾಣಾವರ ಕಲ್ಲುಕೋರೆಯಿಂದ ತರಿಸಲಾಗಿದ್ದು ಸುಮಾರು 105 ಲಾರಿಗಳಷ್ಟು ಕಲ್ಲು ಬಳಕೆಯಾಗಿದೆ ಎಂದು ವಿವಿಟಿ ಕನ್‍ಸ್ಟ್ರಕ್ಷನ್ ಗುತ್ತಿಗೆದಾರರು ತಿಳಿಸಿದ್ದಾರೆ.

ಕಣ್ಣಾನೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಮಟ್ಟನೂರುವಿನಲ್ಲಿ ಮುಕ್ತಾಯದ ಹಂತದಲ್ಲಿದ್ದು, ನಂತರ ಇದೇ ರಸ್ತೆಯ ಮೇಲೆ ವಾಹನ ದಟ್ಟಣೆ ಅಧಿಕಗೊಳ್ಳಲಿದೆ. ಯಾವದೇ ಅಂತರಾಷ್ಟ್ರೀಯ ವಿಮಾನ ನಿಲ್ಧಾಣದ 100 ಕಿ.ಮೀ. ಸುತ್ತಳೆತೆಯಲ್ಲಿ ದ್ವಿಪಥ ರಸ್ತೆ ಕಡ್ಡಾಯ ಹಿನ್ನೆಲೆ ಮುಂದೆ ಮಾಕುಟ್ಟ ರಸ್ತೆ ವನ್ಯ ಜೀವಿ ವಲಯವಾಗಿದ್ದರೂ ದಿಪಥ ರಸ್ತೆ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ರಸ್ತೆ ಡಿವೈಡರ್ ನಿರ್ಮಾಣವಾದಲ್ಲಿ ಗಮನಾರ್ಹವಾಗಿ ಅಪಘಾತಗಳನ್ನೂ ತಡೆಗಟ್ಟಬಹುದು ಎಂದೂ ಹೇಳಲಾಗುತ್ತಿದೆ. ಮಟ್ಟನೂರು-ವೀರಾಜಪೇಟೆ 100 ಕಿ.ಮೀ.ಗೂ ಕಡಿಮೆ ಅಂತರದಲ್ಲಿದ್ದೂ, ಈಗಾಗಲೇ ಇರಿಟ್ಟಿ ವ್ಯಾಪ್ತಿಯಲ್ಲಿ ರಸ್ತೆ ಅಗಲೀಕರಣ ಕೆಲಸ ಭರದಿಂದ ಸಾಗುತ್ತಿದೆ.

ಸದ್ಯದ ಪರಿಸ್ಥಿತಿಯಲ್ಲಿ ಇದೇ ರಸ್ತೆಯ ಮೇಲೆ ಸುಮಾರು 40 ಟನ್ ಸಾಮಥ್ರ್ಯದ ಸರಕು ಸಾಗಾಟ ಸಾಧ್ಯವೇ? ಕಾದು ನೋಡಬೇಕಾಗಿದೆ. ಒಟ್ಟಿನಲ್ಲಿ ಜಿಲ್ಲಾಡಳಿತ ಹಾಗೂ ಲೋಕೋಪಯೋಗಿ ಇಲಾಖೆ 10 ದಿನಗಳಿಗೂ ಕಡಿಮೆ ಅವಧಿಯಲ್ಲಿ ಪೆರುಂಬಾಡಿ-ಕೇರಳ ರಸ್ತೆಯನ್ನು ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟಿರುವದು ಇದೇ ರಸ್ತೆಯನ್ನು ದಿನನಿತ್ಯ ಅವಲಂಬಿಸಿರುವ ವರ್ತಕರು, ಕಾರ್ಮಿಕರು, ಸಾರ್ವಜನಿಕರಿಂದ ಪ್ರಶಂಸೆಗೆ ಪಾತ್ರವಾಗಿದೆ.