ಸೋಮವಾರಪೇಟೆ, ಆ. 1: ಪಟ್ಟಣದಲ್ಲಿ ಕಸವಿಲೇವಾರಿ ಸಮಸ್ಯೆಗೆ ಸೂಕ್ತ ಪರಿಹಾರ ಕಂಡುಕೊಳ್ಳಲು ಪಟ್ಟಣ ಪಂಚಾಯಿತಿ ಅಧ್ಯಕ್ಷೆ ವಿಜಯಲಕ್ಷ್ಮೀ ಸುರೇಶ್ ಅವರ ಅಧ್ಯಕ್ಷತೆಯಲ್ಲಿ ಸಾರ್ವಜನಿಕ ಸಭೆ ನಡೆಯಿತು.

ಪಂಚಾಯಿತಿಯ ಮಾಜಿ ಸದಸ್ಯರುಗಳು, ಕರವೇ, ಜಯ ಕರ್ನಾಟಕ, ಆಟೋ ಯೂನಿಯನ್, ಪೊಲೀಸ್ ಇಲಾಖೆ ಸೇರಿದಂತೆ ವಿವಿಧ ಸಂಘಸಂಸ್ಥೆಗಳ ಪದಾಧಿಕಾರಿ ಗಳು ಭಾಗವಹಿಸಿ ಚರ್ಚಿಸಿದರು.

ಕಸವಿಲೇವಾರಿ ವಿಷಯದಲ್ಲಿ ಪಂಚಾಯಿತಿ ಅಧ್ಯಕ್ಷರು ಹಾಗೂ ವಿಪಕ್ಷದ ಕೆಲ ಸದಸ್ಯರ ನಡುವೆ ಮಾತಿನ ಚಕಮಕಿ ನಡೆಯುತ್ತಿದ್ದ ಸಂದರ್ಭ, ಸಾರ್ವಜನಿಕರಿಂದ ತರಾಟೆಗೆ ಒಳಗಾದ ಘಟನೆಯೂ ನಡೆಯಿತು.

ಪಂಚಾಯಿತಿ ನಾಮಕರಣ ಸದಸ್ಯ ಬಿ.ಜಿ.ಇಂದ್ರೇಶ್ ಹಾಗು ಅಧ್ಯಕ್ಷೆ ವಿಜಯಲಕ್ಷ್ಮೀ ಸುರೇಶ್, ಬಿ.ಎಂ. ಸುರೇಶ್ ನಡುವೆ ಏರಿದ ಧ್ವನಿಯಲ್ಲಿ ವಾಗ್ವಾದ ನಡೆಯಿತು. ಪಂಚಾಯಿತಿ ಸದಸ್ಯರ ಕೆಸರೆರಚಾಟವನ್ನು ಕಂಡು ಸಿಡಿಮಿಡಿಗೊಂಡ ಸಾರ್ವಜನಿಕರು, ಆಡಳಿತ ಹಾಗು ವಿರೋಧ ಪಕ್ಷದ ಸದಸ್ಯರುಗಳು ಸಾಮಾನ್ಯ ಸಭೆಯಲ್ಲಿ ಜಗಳವಾಡಿದ್ದು ಸಾಲದೆಂಬಂತೆ, ಸಾರ್ವಜನಿಕರ ಸಭೆಯಲ್ಲೂ ಕಚ್ಚಾಡುತ್ತಿರಾ? ಎಂದು ತೀವ್ರ ತರಾಟೆಗೆ ತೆಗೆದುಕೊಂಡರು.

ಪಂಚಾಯಿತಿ ಸದಸ್ಯರೂ ಹೀಗೆ ಕಚ್ಚಾಡಿದರೆ ನಿಮ್ಮ ಜೀವಮಾನದಲ್ಲಿ ಪಟ್ಟಣದ ಕಸವಿಲೇವಾರಿ ಸಮಸ್ಯೆ ಬಗೆಹರಿಸುವದಿಲ್ಲ ಎಂದು ಜಯ ಕರ್ನಾಟಕ ಸಂಘಟನೆ ತಾಲೂಕು ಅಧ್ಯಕ್ಷ ಸುರೇಶ್‍ಶೆಟ್ಟಿ ಸಭೆಯಿಂದ ಹೊರನಡೆದರು.

ಸಿದ್ದಲಿಂಗಪುರ ಗ್ರಾಮದಲ್ಲಿರುವ ನಿವೇಶನದಲ್ಲಿ ಪಂಚಾಯಿತಿ ವತಿಯಿಂದ ವೈಜ್ಞಾನಿಕ ಘಟಕ ಪ್ರಾರಂಭಿಸುತ್ತೇವೆ. ಅಲ್ಲಿಯವರಗೆ ಪಟ್ಟಣದ ಸುತ್ತಮುತ್ತಲಿನಲ್ಲಿ ಕಸವಿಲೇವಾರಿಗೆ ಸಹಕರಿಸಿ. ಕರ್ಕಳ್ಳಿಯಲ್ಲಿ ಹಾಕಲು ಅವಕಾಶ ಕಲ್ಪಿಸಿ ಎಂದು ಅಧ್ಯಕ್ಷರು ಮನವಿ ಮಾಡಿದರು. ಕರ್ಕಳ್ಳಿ ಸುತ್ತಮುತ್ತಲ ಜನರು ಪ್ರಸ್ತಾಪಕ್ಕೆ ವಿರೋಧ ವ್ಯಕ್ತಪಡಿಸಿದರು. ಈ ಹಿಂದೆ ನೀವು ತ್ಯಾಜ್ಯ ಸುರಿದು ಗ್ರಾಮವನ್ನು ಗಬ್ಬೆಸಿದ್ದು ಸಾಕು. ಮುಂದೆ ಅವಕಾಶ ನೀಡುವದಿಲ್ಲ ಎಂದರು. ಒಟ್ಟಿನಲ್ಲಿ ಕಸವಿಲೇವಾರಿ ಸಮಸ್ಯೆ ಬಗೆಹರಿಸಲು ಕರೆದ ಸಾರ್ವಜನಿಕ ಸಭೆ ಯಾವದೇ ಪರಿಹಾರ ಕಾಣದೆ ಅಂತ್ಯಗೊಂಡಿತು.