ಮಡಿಕೇರಿ, ಆ. 1: ಯಾವದೇ ವ್ಯಕ್ತಿ ಅಥವಾ ಸಂಸ್ಥೆಗಳು ಕಟ್ಟಡ ನಿರ್ಮಿಸಬೇಕಿದ್ದಲ್ಲಿ ಆಯಾ ಪ್ರದೇಶದ ಕಾನೂನಿಗೆ ಅನುಗುಣವಾಗಿ ನಕ್ಷೆಯನ್ನು ತಯಾರಿಸಬೇಕು. ಸ್ಥಳೀಯ ಸಂಸ್ಥೆಗಳಿಂದ ಅಂಗೀಕಾರ ಪಡೆದ ಇಂಜಿನಿಯರ್ ಅವರ ಸಹಿ ಹೊತ್ತ ಈ ನಕ್ಷೆ ಮತ್ತೆ ಸ್ಥಳೀಯ ಸಂಸ್ಥೆಯ ಕಚೇರಿ ತಲಪುತ್ತದೆ. ಮೂಡಾ ವ್ಯಾಪ್ತಿಯಲ್ಲಿದ್ದರೆ ಮೂಡಾ ಕಚೇರಿಗೂ ಒಂದು ಪ್ರತಿ ತಲಪುತ್ತದೆ. ಅಧಿಕಾರಿಗಳು ಪರಿಶೀಲಿಸಿ ಪರವಾನಗಿ ಶುಲ್ಕದೊಂದಿಗೆ ಅಭಿವೃದ್ಧಿ ಶುಲ್ಕವನ್ನು ವಿಧಿಸಿಕೊಂಡು ಹಲವಷ್ಟು ನಿಯಮಗಳನ್ನು ಮುದ್ರಿಸಿರುವ ಹಾಳೆಯಲ್ಲಿ ಇತರ ವಿವರಗಳನ್ನು ಬರೆದು ಅನುಮತಿ ನೀಡುತ್ತಾರೆ. ಅಂತಹ ಕಟ್ಟಡ ಪೂರ್ಣಗೊಂಡ ಬಳಿಕ ಮಡಿಕೇರಿಯಲ್ಲಾದರೆ ನಗರಸಭೆ ವಾರ್ಷಿಕ ಕಟ್ಟಡ ತೆರಿಗೆಯನ್ನು ವಿಧಿಸುತ್ತದೆ.ಈ ಎಲ್ಲಾ ಕಷ್ಟಗಳಿಂದ ಪಾರಾಗಿ ಹಣ ಉಳಿತಾಯ ನಿಮಗೆ ಬೇಕೆ...?

ಹಾಗಾದರೆ ಬನ್ನಿ ನಮ್ಮ ನಗರಸಭೆಗೆ. ಅಲ್ಲಿ ಉಪಾಯ ಹೇಳಿಕೊಡುವ ಅಧಿಕಾರಿಗಳಿದ್ದಾರೆ. ಅವರುಗಳ ಬೆಂಬಲಕ್ಕೆ ಕೆಲವು ಜನ ಕೂಡ ಖಾಯಂ ಇದ್ದಾರೆ. ನಿಮ್ಮಿಂದ ತಾತ್ಕಾಲಿಕ ಕಟ್ಟಡ ನಿರ್ಮಾಣಕ್ಕೆ ಅನುಮತಿ ಕೊಡಿ ಎಂದು ಅರ್ಜಿ ಬರೆಸಿಕೊಂಡು ಸಂಜೆಯೊಳಗಾಗಿ ಅನುಮತಿ ನೀಡುತ್ತಾರೆ. ನೀವು ಶೆಡ್ ಕಟ್ಟುತ್ತಿದ್ದೀರೋ, ಬೃಹತ್ ಕಟ್ಟಡ ಕಟ್ಟುತ್ತಿದ್ದೀರೋ... ಇಟ್ಟಿಗೆ ಮರಳು ಬಳಸಿ ಕಟ್ಟಡವನ್ನು ಮೇಲೆ ತರುತ್ತಿದ್ದೀರೋ... ಇದಾವದನ್ನೂ ನಗರಸಭೆ ಗಮನಿಸದಂತೆ ನೋಡಿಕೊಳ್ಳುವ ‘ಜವಾಬ್ದಾರಿ’ ಮಾತ್ರ ನಿಮ್ಮದು! ಮುಂದೆ ಎಲ್ಲವೂ ಸುಸೂತ್ರ. ಗೋದಾಮಾದರೂ ಮಾಡಿ, ಉದ್ಯಮವನ್ನಾದರೂ ಮಾಡಿ, ವ್ಯಾಪಾರವನ್ನಾದರೂ ಮಾಡಿ... ನಿಮ್ಮನ್ನು ಯಾರೂ ಪ್ರಶ್ನಿಸುವದಿಲ್ಲ. ನೀವು ಚೆನ್ನಾಗಿ ‘ನೋಡಿಕೊಂಡರೆ’ ಮುಂದೆ ಪರವಾನಗಿ ನವೀಕರಿಸಬೇಕಾಗಿಯೂ ಇಲ್ಲ, ವರ್ಷದ ಕಟ್ಟಡ ತೆರಿಗೆಯನ್ನೂ ಪಾವತಿಸಬೇಕಾಗಿಲ್ಲ.

ಇಂತಹ ಬೆಳವಣಿಗೆ ಕಂಡುಬಂದಿರುವದು ಮಡಿಕೇರಿಯಲ್ಲಿ. ಎಗ್ಗಿಲ್ಲದೆ! ನಡೆಯುತ್ತಿರುವ ಈ ವ್ಯವಹಾರದಿಂದ ಮಡಿಕೇರಿ ನಗರಸಭೆ ವಾರ್ಷಿಕವಾಗಿ ಲಕ್ಷಾಂತರ ನಷ್ಟ ಅನುಭವಿಸುತ್ತಿದೆ. ನಗರದ ಸೌಂದರ್ಯದೊಂದಿಗೆ ನೂತನ ಕಟ್ಟಡಗಳ ಒಟ್ಟು ನಿಯಂತ್ರಣ ಹೊಂದಿರುವ ಮಡಿಕೇರಿ ನಗರಾಭಿವೃದ್ಧಿ ಪ್ರಾಧಿಕಾರ, ತನ್ನ ಗಮನಕ್ಕೆ ಬಾರದೆ ಕಂಡು ಬರುತ್ತಿರುವ ಈ ಬೆಳವಣಿಗೆಗಳನ್ನು ಮೌನವಾಗಿ ವೀಕ್ಷಿಸುತ್ತಿದೆ.

ಮಡಿಕೇರಿ ನಗರಸಭೆಯ ಅಧ್ಯಕ್ಷರು ಇದಾವುದು ತನ್ನ ಗಮನಕ್ಕೆ ಬಾರದೆ ಅಧಿಕಾರಿಗಳೇ ನಡೆಸುತ್ತಿರುವ ಕೃತ್ಯ ಎಂದು ಅಸಹಾಯಕತೆ ವ್ಯಕ್ತಪಡಿಸಿದರೆ, ಮೂಡಾ ಅಧ್ಯಕ್ಷರು ತಮ್ಮ ಇಲಾಖೆಯನ್ನು ಕತ್ತಲಲ್ಲಿಟ್ಟು ನಗರಸಭೆ ಇದೆಲ್ಲವನ್ನೂ ಮಾಡುತ್ತಿದೆ ಎಂದು ಆರೋಪಿಸುತ್ತಾರೆ. ಮೂಡಾದ ಕಮಿಷನರ್, ತಮ್ಮ ಇಲಾಖೆಯ ಅನುಮತಿ ಪಡೆಯುವದು ಕಡ್ಡಾಯ ಎಂದು ಹೇಳಿದರೆ, ತಾತ್ಕಾಲಿಕ ಪರವಾನಗಿಗೆ ನಗರಸಭೆಯಲ್ಲಿ ತೀರ್ಮಾನಿಸಲಾಗಿದ್ದು, ಈ ಹಿಂದಿನ ಪದ್ಧತಿಯನ್ನೇ ಮುಂದುವರೆಸಲಾಗಿದೆ ಎಂದು ನಗರಸಭೆಯ ಕಮಿಷನರ್ ಸಮರ್ಥಿಸಿಕೊಳ್ಳುತ್ತಾರೆ.

ಮಡಿಕೇರಿ ನಗರ ವ್ಯಾಪ್ತಿಯಲ್ಲಿ ಕಟ್ಟಡವೊಂದು ತಲೆ ಎತ್ತಬೇಕಾದರೆ ಹತ್ತಾರು ಕಾನೂನು ಪಾಲನೆ ಅಗತ್ಯ. ಬಡ ಹಾಗೂ ಮಧ್ಯಮ ವರ್ಗದ ಮಂದಿಯೇನಾದರೂ ಮನೆ ಅಥವಾ ವಾಣಿಜ್ಯ ಕಟ್ಟಡಗಳನ್ನು ನಿರ್ಮಿಸಲು ಮುಂದಾದರೆ ಕಚೇರಿಗೆ ಅಲೆದಲೆದು ಚಪ್ಪಲಿ ಸವೆಯುವದಂತೂ ಖಚಿತ.

ಆದರೆ.., ಪ್ರಭಾವ ಬೀರಿ ಹಣ ಚೆಲ್ಲಿ ಬೇಳೆ ಬೇಯಿಸಿಕೊಳ್ಳುವ ಮಂದಿಗೆ ಎಲ್ಲವೂ ಸುಲಲಿತ.

ನಗರಸಭೆ ಹತ್ತು ಹಲವು ಮಂದಿಗೆ ಶೀಟ್‍ಗಳನ್ನು ಬಳಸಿ ಅಂಗಡಿ ನಿರ್ಮಿಸಿಕೊಳ್ಳಲು ‘ತಾತ್ಕಾಲಿಕ ಪರವಾನಗಿ’ ಎಂಬ ಶಿರೋನಾಮೆಯಡಿ ಅನುಮತಿ ನೀಡುತ್ತಿದೆ. ಪರಿಣಾಮ ದೊಡ್ಡ ದೊಡ್ಡ ವ್ಯಾಪಾರ ಮಳಿಗೆಗಳು ರಾಜಾರೋಷವಾಗಿ ತಲೆ ಎತ್ತಿ ನಿಂತಿವೆ.

ಮಣ್ಣು ಇಟ್ಟಿಗೆ ಬಳಸಿ ನಿರ್ಮಿಸಿದ ಕಟ್ಟಡಗಳಿಗೆ ಅನುಮತಿ ನೀಡಲು ಹಲವಾರು ದಾಖಲಾತಿಗಳನ್ನು ಪಡೆದು ಪ್ರತಿ ವರ್ಷ ತೆರಿಗೆಯನ್ನೂ ಚಾಚೂ ತಪ್ಪದೆ ವಸೂಲಿ ಮಾಡುವ ನಗರಸಭೆ ಶೀಟ್‍ಗಳನ್ನು ಬಳಸಿಕೊಂಡು ಮಳಿಗೆ ನಿರ್ಮಿಸಿ ವ್ಯಾಪಾರ ವಹಿವಾಟು ನಡೆಸಲು ಸುಲಭವಾಗಿ ಅನುಮತಿ ನೀಡಿದೆ. ಇದರಿಂದಾಗಿ ಕಡಿಮೆ ಖರ್ಚಿನಲ್ಲಿ ಬೃಹತ್ ವಾಣಿಜ್ಯ ಮಳಿಗೆಗಳು ನಿರಾಳವಾಗಿ ಕಾರ್ಯಾಚರಿಸುತ್ತಿದ್ದು, ಲಕ್ಷಾಂತರ ರೂ. ವ್ಯಯಿಸಿ ಕಟ್ಟಡ ನಿರ್ಮಿಸಿಕೊಂಡು ವ್ಯಾಪಾರ ಮಾಡುತ್ತಿರುವ

(ಮೊದಲ ಪುಟದಿಂದ) ವ್ಯಾಪಾರಸ್ಥರು ಮೂಗಿನ ಮೇಲೆ ಬೆರಳಿಟ್ಟುಕೊಳ್ಳಬೇಕಾದ ಪರಿಸ್ಥಿತಿ! ಕೆಲವು ಕಡೆ ಶೀಟ್‍ಗಳು ಸದ್ದಿಲ್ಲದೆ ಗೋಡೆಗಳಾಗಿಯೂ ಮಾರ್ಪಾಡಾಗುತ್ತಿದೆ! ಮುಂದಿನ ದಿನಗಳಲ್ಲಿ ಸಂಪೂರ್ಣ ಕಾಂಕ್ರಿಟ್‍ಮಯವಾದರೂ ಅಚ್ಚರಿಪಡಬೇಕಿಲ್ಲ. ಏಕೆಂದರೆ ಇದು ನಗರಸಭೆಯ ‘ಆಫರ್’...!

ನಾಲ್ಕೈದು ವರ್ಷಗಳಿಂದ ನಡೆಯುತ್ತಿದೆ

‘ಶಕ್ತಿ’ಗೆ ದೊರೆತ ಮಾಹಿತಿಯನ್ವಯ ನಗರಸಭೆಯ ಈ ‘ತಾತ್ಕಾಲಿಕ ಪರವಾನಗಿ’ ಎಂಬ ರೆಕ್ಕೆಪುಕ್ಕವಿಲ್ಲದ ಪ್ರಕ್ರಿಯೆ ಕಳೆದ ನಾಲ್ಕೈದು ವರ್ಷಗಳಿಂದ ನಡೆಯುತ್ತಿದೆ. ಈ ಹಿಂದೆ ಇದ್ದಂತಹ ಆಯುಕ್ತರು ಇದಕ್ಕೆ ಚಾಲನೆ ನೀಡಿದ್ದರೆನ್ನಲಾಗಿದ್ದು, ಪ್ರಸ್ತುತವೂ ಅದು ಮುಂದುವರೆದಿದೆ.

ನಗರಾಭಿವೃದ್ಧಿ ಇಲಾಖೆಯ ನಿಯಮದ ಪ್ರಕಾರ ಸ್ಥಳೀಯ ಸಂಸ್ಥೆಗಳು ಪ್ರಾರಂಭಿಕ ಪ್ರಮಾಣ ಪತ್ರವನ್ನು ನೀಡುವ ಮುನ್ನ ನಗರಾಭಿವೃದ್ಧಿ ಪ್ರಾಧಿಕಾರದಿಂದ ತಾಂತ್ರಿಕ ಅಭಿಪ್ರಾಯಪಡೆಯುವದು ಕಡ್ಡಾಯವಾಗಿದೆ. ಆದರೆ ನಗರಸಭೆ ನೀಡುತ್ತಿರುವ ‘ತಾತ್ಕಾಲಿಕ ಪರವಾನಗಿ’ ಪ್ರಕ್ರಿಯೆಯಲ್ಲಿ ನಗರಾಭಿವೃದ್ಧಿ ಇಲಾಖೆ ಆದೇಶದಂತೆ ಮೂಡಾವನ್ನು ಪರಿಗಣಿಸುತ್ತಿಲ್ಲ ಎಂಬದು ಮೂಡಾ ಅಧ್ಯಕ್ಷರ ಆರೋಪ.

ಆದರೆ.., ತಾತ್ಕಾಲಿಕ ಶೆಡ್‍ಗಳಿಗೆ ಈ ಹಿಂದಿನಿಂದಲೂ ಅನುಮತಿ ನೀಡುವ ವೇಳೆ ನಗರಾಭಿವೃದ್ಧಿ ಪ್ರಾಧಿಕಾರದ ಅನುಮತಿ ಪಡೆಯದೆ ನಗರಸಭೆ ಪರವಾನಗಿ ನೀಡುತ್ತಾ ಬಂದಿದ್ದು, ಪ್ರಸ್ತುತ ಇರುವ ಅಧಿಕಾರಿಗಳು ಅದನ್ನೇ ಮುಂದುವರೆಸಿದ್ದಾರೆ. ಇದನ್ನು ಅಧಿಕಾರಿಗಳೇ ದೃಢಪಡಿಸಿದ್ದಾರೆ.

ನಗರಸಭೆಯ ಆ್ಯಕ್ಟ್‍ನಲ್ಲಿ ತಾತ್ಕಾಲಿಕ ಶೆಡ್‍ಗಳಿಗೆ ಅನುಮತಿ ನೀಡುವ ಕಾನೂನು ಇಲ್ಲ.

ಆದರೂ ನಗರಸಭೆ ಕೆಲ ವರ್ಷಗಳ ಹಿಂದೆ ತೀರ್ಮಾನಿಸಿರುವಂತೆ ಸ್ವಂತ ಜಾಗ ಹೊಂದಿದ್ದು, ದಾಖಲಾತಿ ಸಮರ್ಪಕವಾಗಿದ್ದರೆ ಪರವಾನಗಿ ಶುಲ್ಕ ಪಾವತಿಸಿ ನಗರಸಭೆಯಿಂದ ತಾತ್ಕಾಲಿಕ ಶೆಡ್ ನಿರ್ಮಾಣಕ್ಕೆ ಪರವಾನಗಿ ಪಡೆಯಬಹುದು. ಶೀಟ್‍ಗಳನ್ನು ಬಳಸಿ ಶೆಡ್ ನಿರ್ಮಾಣ ಮಾಡಿದ ಬಳಿಕ ಯಾವದೇ ತೆರಿಗೆ ಎಂಬದು ಇದಕ್ಕೆ ಅನ್ವಯವಾಗುವದಿಲ್ಲವಂತೆ. ಒಂದು ವೇಳೆ ಶೀಟ್‍ಗಳ ಬದಲು ಕಾಂಕ್ರೀಟ್ ಮೇಲ್ಛಾವಣಿ ನಿರ್ಮಿಸಿದರೆ ‘ಬಿಲ್ಡಿಂಗ್ ಟ್ಯಾಕ್ಸ್’ ಕಡ್ಡಾಯ! ಇದು ನಗರಸಭೆಯ ‘ಸ್ಪೆಷಲ್’ ಕಾನೂನು.

ತಾತ್ಕಾಲಿಕ ಪರವಾನಗಿಗೆ 11 ತಿಂಗಳು ಮಾತ್ರ ಅವಧಿ ನೀಡಿದ್ದು, ಅವಧಿ ಮುಗಿದ ಬಳಿಕ ಅದನ್ನು ತೆರವುಗೊಳಿಸಬೇಕು ಎಂಬದು ನಗರಸಭೆ ತಾತ್ಕಾಲಿಕ ಪರವಾನಗಿಗೆ ವಿಧಿಸಿರುವ ಷರತ್ತು. ಆದರೆ ನಗರ ವ್ಯಾಪ್ತಿಯಲ್ಲಿ 11 ತಿಂಗಳಲ್ಲ ವರ್ಷಗಳೇ ಕಳೆದಿದ್ದರೂ ಶೀಟ್‍ನಿಂದ ತಯಾರಾದ ಅದೆಷ್ಟೋ ಶೆಡ್‍ಗಳು ಗಟ್ಟಿಯಾಗಿ ನಿಂತಿವೆ. ನಿಯಮ ರೂಪಿಸಿರುವ ನಗರಸಭೆ ಮಾತ್ರ ಕಣ್ಮುಚ್ಚಿ ಕುಳಿತಿದೆ.

ನೀರಿನ ಕಂದಾಯ ಕಟ್ಟಿಲ್ಲ, ಮನೆ ಕಂದಾಯ ಕಟ್ಟಿಲ್ಲ ಎಂಬ ಕಾರಣಕ್ಕೆ ಪತ್ರಿಕೆ-ಮಾಧ್ಯಮಗಳಲ್ಲಿ ಎಚ್ಚರಿಕೆ ನೀಡಿ, ಮೂಲಾಜಿಲ್ಲದೆ ಕ್ರಮಕೈಗೊಳ್ಳುವ ನಗರಸಭೆ ತಾತ್ಕಾಲಿಕ ಶೆಡ್ ವ್ಯವಸ್ಥೆಯಿಂದ ಲಕ್ಷಾಂತರ ರೂಪಾಯಿ ಹಣ ನಗರಸಭೆಗೆ ನಷ್ಟವಾಗುತ್ತದೆ ಎಂಬದು ಗೊತ್ತಿದ್ದರೂ ಸುಮ್ಮನಿದೆ.

ಜಿಲ್ಲಾಧಿಕಾರಿಗಳು ಈ ಬಗ್ಗೆ ಕ್ರಮಕೈಗೊಳ್ಳಬೇಕಾದ ಅಗತ್ಯತೆ ಇದೆ.