ಮಡಿಕೇರಿ, ಆ. 1: ಕೊಡಗು ಮತ್ತು ಮೈಸೂರು ಜಿಲ್ಲೆಯಲ್ಲಿ ಹಬ್ಬಿರುವ ನಾಗರಹೊಳೆ ಹುಲಿ ಅಭಯಾರಣ್ಯದ ಸುತ್ತಲಿನ ಪ್ರದೇಶವನ್ನು ಪರಿಸರ ಸೂಕ್ಷ್ಮ ವಲಯ (ಇ.ಎಸ್.ಝಡ್) ಎಂದು ಘೋಷಿಸುವ ಅಧಿಸೂಚನೆಯ ಕರಡನ್ನು ಕೇಂದ್ರ ಪರಿಸರ ಸಚಿವಾಲಯ ಬಿಡುಗಡೆ ಮಾಡಿದೆ.ಅಭಯಾರಣ್ಯದ ಹೊರ ಭಾಗದಲ್ಲಿ ಬಫರ್ ವಲಯವನ್ನು ಗುರುತಿಸುವದು ಇದರ ಉದ್ದೇಶ ಎನ್ನಲಾಗಿದ್ದು, ಹಲವು ಸುತ್ತಿನ ಸಮಾಲೋಚನೆ ಬಳಿಕ ಇದನ್ನು ಅಂತಿಮಗೊಳಿಸಲಾಗಿದೆ.

ಕರಡು ಬಗ್ಗೆ ಆಕ್ಷೇಪ ಸಲ್ಲಿಸಲು 60 ದಿನಗಳ ಅವಕಾಶ ಇದೆ. ಈ ಪ್ರಕ್ರಿಯೆಯನ್ನು ಪರಿಶೀಲಿಸಿ ಸಮರ್ಪಕ ಎನಿಸಿದ್ದನ್ನು ಸೇರಿಸಿ ಅಧಿಸೂಚನೆ ಯನ್ನು ಅಂತಿಮಗೊಳಿಸಲಾಗುತ್ತದೆ.

ಒಟ್ಟು 299 ಚದರ ಕಿ.ಮೀ. ವ್ಯಾಪ್ತಿಯಲ್ಲಿ 92 ಗ್ರಾಮಗಳು ಇಎಸ್‍ಝೆಡ್ ವ್ಯಾಪ್ತಿಯಲ್ಲಿ ಬರುತ್ತವೆ. ಇದಲ್ಲದೆ ಸುಮಾರು 269 ಚದರ ಕಿ.ಮೀ. ಮೀಸಲು ಅರಣ್ಯ ಕೂಡ ಇದರ ವ್ಯಾಪ್ತಿಯಲ್ಲಿ ಇದೆ. ನಾಗರಹೊಳೆ ಹುಲಿ ಅಭಯಾರಣ್ಯದ ಒಟ್ಟು ವಿಸ್ತೀರ್ಣ 847.41 ಚದರ ಕಿ.ಮೀ. ಇದೆ.

ಮೇಲ್ವಿಚಾರಣಾ ಸಮಿತಿ: ಇಎಸ್‍ಝೆಡ್ ಪ್ರದೇಶದಲ್ಲಿನ ಚಟುವಟಿಕೆಗಳನ್ನು ನಿಯಂತ್ರಿಸಲು ರಾಜ್ಯ ಸರ್ಕಾರವು ಯೋಜನೆಯನ್ನು ಸಿದ್ಧಪಡಿಸಬೇಕು. ಮೇಲ್ವಿಚಾರಣೆಗೆ ಮೂರು ವರ್ಷ ಅಧಿಕಾರಾವಧಿಯ 17 ಸದಸ್ಯರ ಸಮಿತಿ ರಚಿಸಬೇಕು ಎಂಬ ಪ್ರಸ್ತಾವ ಕರಡು ಅಧಿಸೂಚನೆಯಲ್ಲಿ ಇದೆ.

ಮೈಸೂರು ಪ್ರಾದೇಶಿಕ ಆಯುಕ್ತರು ಈ ಸಮಿತಿಗೆ ಅಧ್ಯಕ್ಷರಾಗಿರುತ್ತಾರೆ. ಇಎಸ್‍ಝೆಡ್ ವ್ಯಾಪ್ತಿಯಲ್ಲಿ ಬರುವ ಹುಣಸೂರು, ಹೆಚ್.ಡಿ. ಕೋಟೆ, ಪಿರಿಯಾಪಟ್ಟಣ ಮತ್ತು ವೀರಾಜಪೇಟೆಯ ಶಾಸಕರು ಸದಸ್ಯರಾಗಿರುತ್ತಾರೆ.

ನಾಗರಿಕ ಸೇವೆ, ಪೊಲೀಸ್ ಅಧಿಕಾರಿಗಳು, ರಾಜ್ಯ ಜೀವ ವೈವಿಧ್ಯ ಪ್ರಾಧಿಕಾರದ ಸದಸ್ಯರು ಕೂಡ ಸಮಿತಿಯಲ್ಲಿ ಇರಬೇಕು. ಒಬ್ಬರು ತಜ್ಞರನ್ನೂ ಸೇರಿಸಿಕೊಳ್ಳಬೇಕು.

ನಿಯಂತ್ರಿತ ಚಟುವಟಿಕೆಗಳು ಎಂದು ಅಧಿಸೂಚನೆ ಹೇಳುವ ಎಲ್ಲಾ ಚಟುವಟಿಕೆಗಳನ್ನು ಸಮಿತಿಯು ಪರಿಶೀಲನೆಗೆ ಒಳಪಡಿಸಬೇಕು. ಅಗತ್ಯ ಕಂಡು ಬಂದರೆ ಅಂತಹ ಪ್ರಕರಣಗಳನ್ನು ಕೇಂದ್ರದ ಅನುಮೋದನೆಗೆ ಕಳುಹಿಸಬೇಕು. ಕ್ರಮಕೈಗೊಂಡ ವರದಿಯನ್ನು ವರ್ಷಕ್ಕೆ ಒಮ್ಮೆ ಮುಖ್ಯ ವನ್ಯ ಜೀವಿ ವಾರ್ಡನ್‍ಗೆ ಸಲ್ಲಿಸಬೇಕು.

ನಾಗರಹೊಳೆ ಸೇರಿ ಒಂಬತ್ತು ಅಭಯಾರಣ್ಯಗಳ ಸುತ್ತ ಪರಿಸರ ಸೂಕ್ಷ್ಮ ವಲಯ ರಚಿಸಲು ಕೇಂದ್ರ ಮತ್ತು ರಾಜ್ಯ ಸರಕಾರಗಳು ಕೆಲಸ ಮಾಡುತ್ತಿವೆ.