*ಸಿದ್ದಾಪುರ, ಆ. 1: ನೆಲ್ಯಹುದಿಕೇರಿಯ ಬರಡಿ ಗ್ರಾಮದಲ್ಲಿ ಕಸ ವಿಲೇವಾರಿ ಮಾಡಿದರೆ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಗುವದೆಂದು ಗ್ರಾಮಸ್ಥರು ಮತ್ತು ಜನಪ್ರತಿನಿಧಿಗಳು ಎಚ್ಚರಿಸಿದ್ದಾರೆ.

ಜಿಲ್ಲಾಡಳಿತ ಕಸವಿಲೇವಾರಿಗೆ ಸ್ಥಳ ಗುರುತು ಮಾಡಿರುವದರ ವಿರುದ್ಧ ಬರಡಿ ಗ್ರಾಮಸ್ಥರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈಗಾಗಲೇ ಗುರುತಿಸಿರುವ 80 ಸೆಂಟ್ ಜಾಗದಲ್ಲಿ ನೆಲ್ಯಹುದಿಕೇರಿ ಸಮೀಪದ ಬರಡಿ ಗ್ರಾಮದಲ್ಲಿ ಒತ್ತುವರಿ ತೆರವು ಮಾಡಿರುವ ಸ್ಥಳದಲ್ಲಿ ಕಸ ವಿಲೇವಾರಿಗೆ ಅವಕಾಶ ನೀಡುವದಿಲ್ಲ ಎಂದು ಬರಡಿ ಗ್ರಾಮಸ್ಥರು ಮತ್ತು ವಾರ್ಡ್ ಸದಸ್ಯರು ಪಟ್ಟು ಹಿಡಿದಿದ್ದಾರೆ. ಜಿಲ್ಲಾಡಳಿತ ಈ ಸ್ಥಳದಲ್ಲಿ ಕಸ ಸುರಿಯಲು ಮುಂದಾದರೇ ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗ ಪ್ರತಿಭಟನೆ ನಡೆಸುವದಾಗಿ ಗ್ರಾಮಸ್ಥರು ಎಚ್ಚರಿಸಿದ್ದಾರೆ.

ಬರಡಿ ಗ್ರಾಮದಲ್ಲಿ ಜನಪ್ರತಿನಿಧಿಗಳು ಮತ್ತು ಗ್ರಾಮಸ್ಥರ ಸಹಭಾಗಿತ್ವದಲ್ಲಿ ನಡೆದ ಸಭೆಯಲ್ಲಿ ಕಸವಿಲೇವಾರಿಗೆ ವಿರೋಧ ವ್ಯಕ್ತವಾಯಿತು. ಸಭೆಯ ನಡುವೆ ಜನಪ್ರತಿನಿಧಿಗಳು ಮತ್ತು ಬರಡಿ ಗ್ರಾಮಸ್ಥರ ನಡುವೆ ತೀವ್ರ ಮಾತಿನ ಚಕಮಕಿಯೂ ನಡೆಯಿತು.

ಈ ಸಂದರ್ಭ ಮಾತನಾಡಿದ ಯೋಗೇಶ್, 80 ಸೆಂಟ್ ಜಾಗ ಒತ್ತುವರಿ ತೆರವು ಮಾಡಿ ಈ ಸ್ಥಳದಲ್ಲಿ ಕಸ ವಿಲೇವಾರಿ ಮಾಡುವದನ್ನು ಜಿಲ್ಲಾಡಳಿತ ಕೈ ಬಿಡಬೇಕು. ಈ ಜಾಗವನ್ನು ವಸತಿ ರಹಿತರಿಗೆ ಹಂಚಬೇಕೆಂದು ಆಗ್ರಹಿಸಿದರು. ಜಿಲ್ಲಾಡಳಿತ ಸೂಕ್ತ ಮತ್ತು ಶಾಶ್ವತ ಕ್ರಮಕ್ಕೆ ಮುಂದಾಗದಿದ್ದರೆ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟಿಸುವದು ಅನಿವಾರ್ಯವಾಗಲಿದೆ ಎಂದು ಎಚ್ಚರಿಸಿದರು.

ಜಿಲ್ಲಾ ಪಂಚಾಯಿತಿ ಸದಸ್ಯೆ ಸುನೀತಾ ಮಂಜುನಾಥ್ ಮಾತನಾಡಿ, ಬರಡಿ ಗ್ರಾಮದಲ್ಲಿ ಕಸ ವಿಲೇವಾರಿಗೆ ಗ್ರಾಮಸ್ಥರ ವಿರೋಧವಿರುವದು ಗಮನಕ್ಕೆ ಬಂದಿದೆ. ಗ್ರಾಮ ಪಂಚಾಯತಿ ಸಭೆಯಲ್ಲಿ ಆಡಳಿತ ಮಂಡಳಿ ತೀರ್ಮಾಸಿ ಮುಂದಿನ ನಿರ್ದಾರ ತೆಗೆದುಕೊಳ್ಳಬೇಕೆಂದ ಅವರು, ಶಾಶ್ವತ ಪರಿಹಾರ ಕಲ್ಪಿಸಲು ಜಿಲ್ಲಾಡಳಿತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.

ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಸಫಿಯಾ ಮಹಮ್ಮದ್ ಮಾತನಾಡಿ, ನೆಲ್ಯಹುದಿಕೇರಿ ವ್ಯಾಪ್ತಿಯಲ್ಲಿ ನೂರಾರು ಏಕರೆ ಪೈಸಾರಿ ಜಾಗವಿದ್ದು, ಅದನ್ನು ಒತ್ತುವರಿಯಿಂದ ಮುಕ್ತಗೊಳಿಸಿ ಕಸವಿಲೇವಾರಿ ಮತ್ತು ನಿವೇಶನ ರಹಿತರಿಗೆ ಮೀಸಲಿಡುವಂತೆ ಒತ್ತಾಯಿಸಿದರು.

ಜಿಲ್ಲಾಡಳಿತ ಕೂಡಲೆ ಶಾಶ್ವತವಾಗಿ ಸಿದ್ದಾಪುರ-ನೆಲ್ಯಹುದಿಕೇರಿ ವ್ಯಾಪ್ತಿಯಲ್ಲಿ ಕಸ ಸಮಸ್ಯೆ ಬಗೆಹರಿಸಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ

ಈ ಸಂದರ್ಭ ತಾಲೂಕು ಪಂಚಾಯಿತಿ ಸದಸ್ಯೆ ಸುಹಾದ ಅಶ್ರಫ್, ಗ್ರಾಮ ಪಂಚಾಯತಿ ಅಧ್ಯಕ್ಷೆ ಪದ್ಮಾವತಿ, ಸದಸ್ಯರಾದÀ ಮಹಮ್ಮದ್, ಶಶಿ, ಶೈಲಾ, ಗ್ರಾಮಸ್ಥರಾದ ಲಕ್ಮಣ, ಮೊಣಪ್ಪ, ಅನಿಲ್, ಸುಂದರಿ, ಲೀಲಾ, ಶಾಂತ, ವಾಣಿ, ಖತೀಜ ಸೇರಿದಂತೆ ಮತ್ತಿತರರು ಹಾಜರಿದ್ದರು.