ಸೋಮವಾರಪೇಟೆ,ಆ.1: ತಾಲೂಕಿನ ಸಿದ್ದಲಿಂಗಪುರ ಗ್ರಾಮದಲ್ಲಿ ಮದ್ಯದಂಗಡಿ ತೆರೆಯಲು ಕೆಲವರು ತೆರೆಮರೆಯ ಪ್ರಯತ್ನ ಮಾಡುತ್ತಿದ್ದು, ಇದಕ್ಕೆ ಗ್ರಾಮಸ್ಥರು ಅವಕಾಶ ನೀಡುವದಿಲ್ಲ ಎಂದು ಸಿದ್ದಲಿಂಗೇಶ್ವರ ಯುವಕ ಸಂಘದ ಅಧ್ಯಕ್ಷ ಪಿ.ಆರ್.ರಾಬಿನ್ ಹೇಳಿದ್ದಾರೆ.ಸಿದ್ದಲಿಂಗಪುರ ಗ್ರಾಮದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ಸ್ನಾತಕೋತ್ತರ ಕೇಂದ್ರವಿದೆ. ಸರ್ಕಾರಿ ಶಾಲೆ, ದೇವಾಲಯ, ಚರ್ಚ್, ಗಿರಿಜನರ ಹಾಡಿ ಇದೆ. ಅಲ್ಲದೆ ಕೃಷಿಕರು, ಕಾರ್ಮಿಕರು ಹೆಚ್ಚಾಗಿ ವಾಸ ಮಾಡುತ್ತಿರುವದರಿಂದ, ಇಲ್ಲಿ ಮದ್ಯದಂಗಡಿ ಪ್ರಾರಂಭವಾದರೆ ಜನರು ದುಶ್ಚಟಗಳಿಗೆ ಬಲಿಯಾಗುವ ಸಂಭವವಿದೆ ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಈಗಾಗಲೆ ತೊರೆನೂರು ಗ್ರಾಮಪಂಚಾಯಿತಿಯಲ್ಲಿ ಮಿಲಿನಿಯಂ ಹೊಟೇಲ್ ಎಂಬ ಹೆಸರಿನಲ್ಲಿ ಎನ್‍ಒಸಿಗಾಗಿ ಅರ್ಜಿ ಸಲ್ಲಿಸಿದ್ದಾರೆ. ಹೊಟೇಲ್ ಹೊರತುಪಡಿಸಿ ಮದ್ಯದಂಗಡಿ ಪ್ರಾರಂಭಿಸಿದರೆ, ಗ್ರಾಮಸ್ಥರು, ಸ್ತ್ರೀ ಶಕ್ತಿ ಸಂಘದ ಸದಸ್ಯರಗಳು ಹಾಗೂ ವಿದ್ಯಾರ್ಥಿಗಳ ಸಮ್ಮುಖದಲ್ಲಿ ಪ್ರತಿಭಟನೆ ನಡೆಸಲಾಗುವದು ಎಂದು ಎಚ್ಚರಿಸಿದರು.

ಗೋಷ್ಠಿಯಲ್ಲಿ ಯುವಕ ಸಂಘದ ಪದಾಧಿಕಾರಿಗಳಾದ ಬಿ.ಎಚ್.ಆನಂದ, ಬಿ.ಎಸ್.ಅಶೋಕ್ ಕುಮಾರ್, ರವಿಕುಮಾರ್, ವೆಂಕಟೇಶ್ ಇದ್ದರು.