ವೀರಾಜಪೇಟೆ ಆ. 2: ಸರ್ಕಾರದ ಕಾನೂನನ್ನು ಗಾಳಿಗೆ ತೂರಿ ನಿಯಮ ಬಾಹಿರವಾಗಿ ಯಾವದೇ ಅನುಮತಿ ಇಲ್ಲದೆ ನಿರ್ಮಾಣ ಮಾಡಿರುವ ಬೂದಿಮಾಳದ ಕ್ರೈಸ್ತ ದೇವರ ಗುಡಿಯನ್ನು ಕೂಡಲೇ ತೆರವುಗೊಳಿಸುವಂತೆ ವೀರಾಜಪೇಟೆ ಶಾಸಕ ಕೆ.ಜಿ ಬೋಪಯ್ಯ ತಹಶೀಲ್ದಾರ್ ಗೋವಿಂದರಾಜ್ ಅವರಿಗೆ ಆದೇಶ ನೀಡಿದ್ದಾರೆ.ಜಿಲ್ಲಾ ಪಂಚಾಯಿತಿ ಸದಸ್ಯ ಅಚ್ಚಪಂಡ ಮಹೇಶ್ ನೇತೃತ್ವದಲ್ಲಿ ತಾಲೂಕು ಕಚೇರಿ ಎದುರು ಕ್ರೈಸ್ತ ಗುಡಿಯನ್ನು ತೆರವು ಮಾಡುವಂತೆ ಒತ್ತಾಯಿಸಿ ನಡೆದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.
ನಿರ್ಗತಿಕರಿಗೆ ಹಂಚಿ : ಜಾನ್ ಡಿಸೋಜಾ ಅವರಿಗೆ ಐದು ಎಕರೆ ಜಾಗ ಇದ್ದು, ಒಂದು ಎಕರೆ ಮಾತ್ರ ದಾಖಲೆಯಲ್ಲಿ ನಮೂದಾಗಿದೆ. ಉಳಿದ ನಾಲ್ಕು ಎಕರೆ ಜಾಗ ಪೈಸಾರಿ ಎಂದು ಗ್ರಾಮಸ್ಥರು ಮಾಹಿತಿ ನೀಡಿದಾಗ ಕೂಡಲೇ ಸರ್ವೆ ನಡೆಸಿ ಪ್ಯೆಸಾರಿ ಜಾಗವನ್ನು ಮುಟ್ಟುಗೋಲು ಹಾಕಿಕೊಂಡು ನಿರ್ಗತಿಕರಿಗೆ ಹಂಚುವಂತೆ ಶಾಸಕ ಕೆ.ಜಿ.ಬಿ. ತಹಶಿಲ್ದಾರರಿಗೆ ಸೂಚಿಸಿದರು.
ಪೋಲಿಸರೇ ಹೊಣೆ : ಅನಧಿಕೃತವಾಗಿ ಕ್ರೈಸ್ತ ಗುಡಿ ಹಾಗೂ ಗೋಪುರಗಳನ್ನು ನಿರ್ಮಾಣ ಮಾಡುತ್ತಿದ್ದಾರೆ ಎಂದು ಶಾಸಕರಿಗೆ ಗ್ರಾಮಸ್ಥರು ದೂರು ನೀಡಿದಾಗ ಪೊಲೀಸ್ ಅಧಿಕಾರಿಗಳು ಸಮ್ಮನಿದ್ದಿದೇಕೆ? ಅಶಾಂತಿ ವಾತಾವರಣಕ್ಕೆ ಅವಕಾಶ ನೀಡಬೇಡಿ ಎಂದು ಸ್ಥಳದಲ್ಲಿದ್ದ ಡಿವ್ಯೆಸ್ಪಿ ನಾಗಪ್ಪ ಅವರಿಗೆ ನಿರ್ದೇಶನ ನೀಡಿದರು.
ಬೇಟೋಳಿ ಪಂಚಾಯಿತಿ ಪಿ.ಡಿ.ಒ.ಗೆ ದೂರು ನೀಡಲಾಗಿದೆ. ಪಿಡಿಒ ಅವರು ಕಾರ್ಯ ನಿರ್ವಹಣಾಧಿಕಾರಿಗಳ ಗಮನಕ್ಕೆ ತಂದಿದ್ದರೂ, ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಕಿರಣ್ ಪಡ್ನೇಕರ್ ಅವರು ಕ್ರಮ ಕೈಗೊಂಡಿಲ್ಲ ಎಂದು ಪ್ರತಿಭಟನಾಕಾರರು ಆರೋಪ ವ್ಯಕ್ತಪಡಿಸಿದರು.
ಅನಧಿಕೃತವಾಗಿ ನಿರ್ಮಾಣ ಮಾಡಿರುವ ಕ್ರೈಸ್ತ ದೇವರ ಗುಡಿಯನ್ನು ಕೂಡಲೇ ತೆರವುಗೊಳಿಸಲು ಪಿಡಿಒಗೆ ಲಿಖಿತವಾಗಿ ಆದೇಶÀ ನೀಡಿ ಎಂದು ಶಾಸಕರು ಹೇಳಿದಾಗ ಈಗ ಸಾಧ್ಯವಿಲ್ಲ ಸಮಯಾವಕಾಶ ಬೇಕು ಎಂದು ಕಾರ್ಯನಿರ್ವಾಹಣಾಧಿಕಾರಿಗಳು ನೀಡಿದ ಹೇಳಿಕೆ ಶಾಸಕರನ್ನು ಕೆರಳಿಸಿತು. ಗ್ರಾಮಸ್ಥರ ಭಾವನೆಗಳ ಜೊತೆಯಲ್ಲಿ ಚೆಲ್ಲಾಟವಾಡಬೇಡಿ. ಕೂಡಲೇ ತೆರವುಗೊಳಿಸಲು ಪಿಡಿಒಗೆ ಆದೇಶ ನೀಡಿ ಎಂದು ಬೋಪಯ್ಯ ಏರು ಧ್ವನಿಯಲ್ಲಿ ಹೇಳಿದರು.
ಪ್ರತಿಭಟನೆಯಲ್ಲಿ ಜಿಲ್ಲಾ ಬಿಜೆಪಿ ಮಾಜಿ ಅಧ್ಯಕ್ಷ ಸುಜಾ ಕುಶಾಲಪ್ಪ, ಜಿಲ್ಲಾ ಜಿಜೆಪಿ ಪ್ರಧಾನ ಕಾರ್ಯದರ್ಶಿ ಕಾಂತಿ ಸತೀಶ್, ತಾಲೂಕು ಪಂಚಾಯಿತಿ ಸದಸ್ಯ ಬಿ.ಎಂ. ಗಣೇಶ್, ಗೋಣಿಕೊಪ್ಪ ಆರ್ಎಂಸಿ ಅಧ್ಯಕ್ಷ ಸುವಿನ್ ಗಣಪತಿ, ಪಟ್ರಪಂಡ ರಘು ನಾಣಯ್ಯ, ತಾಲೂಕು ಅಧ್ಯಕ್ಷ ಅರುಣ್ಭೀಮಯ್ಯ, ಬೆಟೋಳಿ ಗ್ರಾಮ ಪಂಚಾಯಿತಿ ಸದಸ್ಯ ದಿನೇಶ್ಬೋಪಣ್ಣ, ಜಿಲ್ಲಾ ಪಂಚಾಯಿತಿಯ ಸ್ಥಾಯಿ ಸಮಿತಿ ಅಧ್ಯಕ್ಷ ಶಶಿ ಸುಬ್ರಮಣಿ, ಕಾಂತಿ ಸತೀಶ್, ಚೋಟು ಬಿದ್ದಪ್ಪ, ಪಂಚಾಯಿತಿ ಸದಸ್ಯ ಪರಮೇಶ್ವರ, ಕಿರಣ್ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.