ಮಡಿಕೇರಿ, ಆ. 2: ಕೊಡಗಿನಲ್ಲಿ ಕಕ್ಕಡ (ಆಟಿ) ತಿಂಗಳು ಹೇಗಿರುತ್ತಿತ್ತು ಎಂಬದನ್ನು ನೆನಪಿಸಿಕೊಳ್ಳಲು ಕೊಡವ ಭಾಷೆಯಲ್ಲಿರುವ ಹಳೆಯ ಗಾದೆಯೊಂದು ಇಂತಿದೆ. ‘ಕಕ್ಕಡತ್ ತಿತ್ತ್‍ಕ್ ಬುದ್ಧ ಕುಂಞನ ಎಡ್‍ಪಕೂ ನೇರ ಇಲ್ಲೆ’ ಹೌದು ಕಕ್ಕಡ ಮಾಸದಲ್ಲಿ ಈ ಹಿಂದಿನ ವರ್ಷಗಳಲ್ಲಿ ಈ ಸಮಯದಲ್ಲಿ ರೈತಾಪಿ ಜನರಿಗೆ ಪುರುಸೋತ್ತು ಎಂಬದೇ ಇರುತ್ತಿರಲಿಲ್ಲ. ಕೊಡಗಿನ ಮಳೆಗಾಲದ ನಡುಭಾಗ ಇದು ಭಾರೀ ಪ್ರಮಾಣದಲ್ಲಿ ದೋ... ಎಂದು ಸುರಿಯುವ ನಿರಂತರ ಮಳೆ, ಬಿರುಗಾಳಿಯ ರೀತಿಯಲ್ಲಿ ಬೀಸುವ ಗಾಳಿ ತಡೆಯಲಸಾಧ್ಯವಾದ ಚಳಿ... ಎದೆ ನಡುಗಿಸುವ ಸಿಡಿಲು ಹಗಲಿನ ವೇಳೆಯಲ್ಲೂ ಕತ್ತಲೆಯ ಅನುಭವ. ತಿಂಗಳುಗಟ್ಟಲೆ ಸೂರ್ಯನ ದರ್ಶನವಿರುತ್ತಿರಲಿಲ್ಲ. ಈ ಪರಿಸ್ಥಿತಿಯ ನಡುವೆ ಜೀವನಾಶ್ರಯದ ಅನಿವಾರ್ಯತೆಯ ಕೃಷಿ ಚಟುವಟಿಕೆಯ ಕೆಲಸ... ಈ ಸನ್ನಿವೇಶ ಅನುಭವಿಸಿದವರಿಗೇ ಗೊತ್ತು ಎನ್ನುತ್ತಾರೆ ಹಿರಿಯರು... ಆದರೂ ಆಗಿನ ಕಾಲದಲ್ಲಿ ಜನರು ಎದೆಗುಂದುತ್ತಿರಲಿಲ್ಲ. ಕಕ್ಕಡದಲ್ಲಿ ಸುರಿಯುವ ಪುಷ್ಯ, ಆಶ್ಲೇಷ ಮಳೆಯನ್ನು ಸಮರ್ಥವಾಗಿಯೇ ಎದುರಿಸಿ ಕೆಲಸ ಕಾರ್ಯ ಮುಗಿಸುತ್ತಿದ್ದರು. ನದಿ, ತೊರೆ, ತೋಡುಗಳು

(ಮೊದಲ ಪುಟದಿಂದ) ತುಂಬಿ ಎಲ್ಲೆಡೆ ಜಲಾವೃತಗೊಂಡು ಜಲಪುಟಿದೇಳುತ್ತಿದ್ದ ದೃಶ್ಯವನ್ನು ಕಂಡವರು ಇಂದು ಹಿಂದಿನ ಕೊಡಗೇ ಎಂದುಕೊಳ್ಳುವಂತಾಗಿದೆ.

ಅಂದಿನ ಕಕ್ಕಡವನ್ನು ಇಂದಿನ ಚಿತ್ರಣವನ್ನು ವಿಶ್ಲೇಷಿಸಿದರೆ ಇದು ನಿಜವೋ ಸುಳ್ಳೋ ಎಂಬ ಭಾವನೆ ಮೂಡುತ್ತದೆ. ಪ್ರಸ್ತುತ ಈ ಮಾಸದಲ್ಲಿ ಬಿಸಿಲಿನ ವಾತಾವರಣ... ಬಿಸಿಲಿನ ನಡುವೆ ನಾಟಿ ಕೆಲಸ ಕಂಡು ಬರುತ್ತಿದೆ. 24 ಗಂಟೆಯೂ ನಿರಂತರವಾಗಿ ಸುರಿಯುತ್ತಿದ್ದ ಮಳೆ ಇದೀಗ 24 ಗಂಟೆಗೊಮ್ಮೆ ಸುರಿಯುವದೇ ಅಪರೂಪ ಎಂಬಂತಾಗಿದೆ.

ಆಗಿನ ಕಕ್ಕಡ ಎದುರಿಸಲು ಹಿರಿಯರು ವಿಶಿಷ್ಟ ಆಹಾರವನ್ನೂ ಕಂಡುಕೊಂಡಿದ್ದರು. ಅದರ ಒಂದು ಭಾಗವೇ ಮದ್ದು ಪಾಯಸ- ನಾಟಿಕೋಳಿಯ ಸವಿ... ಈ ಮಾಸದ 18ನೆಯ ದಿನದ ಈ ಆಚರಣೆ ವಿಶಿಷ್ಟವಾದದ್ದು. ಈ ಬಾರಿ ಆಗಸ್ಟ್ 3ರಂದು (ಇಂದು) ಕಕ್ಕಡ ಪದಿನೆಟ್ಟ್ ಆಚರಿಸಲ್ಪಡುತ್ತಿದೆ. ಪ್ರಸ್ತುತದ ವರ್ಷಗಳಲ್ಲಿ ಈ ಆಚರಣೆಯನ್ನು ಮನೆ ಮನೆಗಳಲ್ಲಿ ಮಾತ್ರವಲ್ಲದೆ ಸಾರ್ವತ್ರಿಕವಾಗಿಯೂ ಆಚರಿಸಲಾಗುತ್ತಿರುವದು. ಸಭೆ- ಸಮಾರಂಭಗಳನ್ನು ನಡೆಸುವದು ವಿಶೇಷವಾಗಿದೆ. ಪೊನ್ನಂಪೇಟೆಯಲ್ಲಿ ಕಿಗ್ಗಟ್ಟ್‍ನಾಡ್ ಕೊಡವ ಹಿತರಕ್ಷಣಾ ಬಳಗ ಕಳೆದ ಆರು ವರ್ಷಗಳಿಂದ ಪೊನ್ನಂಪೇಟೆಯಲ್ಲಿ ಈ ದಿನದಿಂದ ಪಂಜಿನ ಮೆರವಣಿಗೆಯ ಮೂಲಕ ವಿವಿಧ ಕಾರ್ಯಕ್ರಮ ಆಯೋಜಿಸಿ ಕೊಂಡು ಬರುತ್ತಿದ್ದು, ಸಾವಿರಾರು ಮಂದಿ ಪಾಲ್ಗೊಳ್ಳುವದು ವಿಶೇಷ.

ತಾ.3ರಂದು (ಇಂದು) ಸಂಜೆ ಪೊನ್ನಂಪೇಟೆ ಪಟ್ಟಣದಲ್ಲಿ ಪಂಜಿನ ಮೆರವಣಿಗೆ ಸಭಾ ಕಾರ್ಯಕ್ರಮ, ಸಾಧಕರಿಗೆ ಸನ್ಮಾನದೊಂದಿಗೆ ‘ಕುರ್ಕಂಗ’ ಎಂಬ ತಮಾಷೆ ನಾಟಕ ಪ್ರದರ್ಶನವನ್ನು ಏರ್ಪಡಿಸಲಾಗಿದೆ. ಬಳಿಕ ಮದ್ದ್ ಪಾಯಸ, ನಾಟಿಕೋಳಿಯ ಊಟೋಪಚಾರ ವಿದೆ. ಜಿಲ್ಲೆಯ ಇತರೆಡೆಗಳಲ್ಲೀ ಬೇರೆ ಬೇರೆ ಕಾರ್ಯಕ್ರಮಗಳು ನಡೆಯುತ್ತವೆ. ತಾ. 2ರಂದೇ ನಗರ ಪಟ್ಟಣ ಪ್ರದೇಶಗಳಲ್ಲಿ ಮದ್ದು ಸೊಪ್ಪು ಮಾರಾಟ- ಜನತೆ ಕಟ್ಟು ಕಟ್ಟು ಸೊಪ್ಪನ್ನು ಮನೆಗೆ ಒಯ್ಯುತ್ತಿದ್ದ ಭರಾಟೆ ಕಂಡುಬಂದಿತು.

-ಶಶಿ