ಕೂಡಿಗೆ, ಆ. 3: ಸರ್ಕಾರದಿಂದ ಸಿಗುವ ಸೌಲಭ್ಯಗಳನ್ನು ಸ್ತ್ರೀಶಕ್ತಿ ಸಂಘ ಸೇರಿದಂತೆ ವಿವಿಧ ಸಂಘಟನೆಗಳ ಮೂಲಕ ಪಡೆಯಲು ಮಹಿಳೆಯರು ಮುಂದಾಗಬೇಕು ಎಂದು ರಾಜ್ಯ ಐಎನ್‍ಟಿಯುಸಿ ಉಪಾಧ್ಯಕ್ಷ ನಾಪಂಡ ಮುತ್ತಪ್ಪ ಹೇಳಿದರು.

ಹೆಬ್ಬಾಲೆಯಲ್ಲಿ ನಡೆದ ಐಎನ್‍ಟಿಯುಸಿಯ ಸ್ತ್ರೀ ಶಕ್ತಿ ನಾಲ್ಕು ಸಂಘಗಳನ್ನು ಉದ್ಘಾಟಿಸಿ, ಮಾತನಾಡುತ್ತಾ, ಇತ್ತೀಚಿನ ದಿನಗಳಲ್ಲಿ ಕಾರ್ಮಿಕ ಸಂಘಟನೆಯ ಮಹಿಳಾ ಗುಂಪುಗಳಿಗೆ ವಿವಿಧ ಬ್ಯಾಂಕ್ ಮತ್ತು ಸರಕಾರಿ ಸೌಲಭ್ಯಗಳು ಹೆಚ್ಚು ಇರುವದರಿಂದ ಇದನ್ನು ಪಡೆದುಕೊಳ್ಳಬೇಕು. ಅಲ್ಲದೆ, ಬ್ಯಾಂಕ್‍ಗಳಲ್ಲಿ ಸ್ತ್ರೀ ಶಕ್ತಿ ಸಂಘಗಳ ಗುಂಪುಗಳಿಗೆ ರಿಯಾಯಿತಿ ಸಾಲ ಸೌಲಭ್ಯ ಸೇರಿದಂತೆ ವಿವಿಧ ಯೋಜನೆಯ ಪ್ರಯೋಜನಗಳನ್ನು ಪಡೆದುಕೊಂಡು ತಮ್ಮ ಆರ್ಥಿಕ ಮಟ್ಟವನ್ನು ಸುಧಾರಿಸಿಕೊಳ್ಳಬೇಕೆಂದು ಕರೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕೊಡಗು ಜಿಲ್ಲಾ ಐಎನ್‍ಟಿಯುಸಿ ಅಧ್ಯಕ್ಷ ಟಿ.ಪಿ. ಹಮೀದ್ ಮಾತನಾಡುತ್ತಾ ಮಹಿಳಾ ಸಂಘಟನೆಗಳು ಸ್ತ್ರೀ ಶಕ್ತಿ ಗುಂಪುಗಳಲ್ಲಿ ತಮ್ಮ ಹೆಸರುಗಳನ್ನು ನೊಂದಾಯಿಸಿ ಕೊಂಡು ಆಯಾ ಸಂಘಗಳ ಮೂಲಕ ತಮ್ಮ ಉಳಿತಾಯದ ಹಣವನ್ನು ಕ್ರೋಡೀಕರಿಸಿ ಜೀವನ ಮಟ್ಟವನ್ನು ಸುಧಾರಿಸಿಕೊಳ್ಳಲು ಸಹಕಾರಿ ಯಾಗುತ್ತದೆ. ಐಎನ್‍ಟಿಯುಸಿ ಹಾಗೂ ವಿವಿಧ ತರಬೇತಿ ಸಂಸ್ಥೆಗಳ ಸಹಕಾರ ದೊಂದಿಗೆ ಮಹಿಳೆಯರಿಗೆ ವಿವಿಧ ಕೌಶಲ್ಯ ಯೋಜನೆಯಿಂದ ಗುಡಿ ಕೈಗಾರಿಕೆಗಳ ತರಬೇತಿಯನ್ನು ಪಡೆದು ಬ್ಯಾಂಕ್‍ಗಳಲ್ಲಿ ಸಾಲ ಸೌಲಭ್ಯಗಳನ್ನು ಪಡೆಯಬಹುದು ಎಂದರು.

ಈ ಸಂದರ್ಭ ಕೊಡಗು ಜಿಲ್ಲಾ ಐಎನ್‍ಟಿಯುಸಿ ಉಪಾಧ್ಯಕ್ಷ ಕಿಶೋರ್‍ಕುಮಾರ್, ಕಾರ್ಯದರ್ಶಿ ಗೋವಿಂದ್‍ರಾಜ್‍ದಾಸ್, ಐಎನ್‍ಟಿಯುಸಿ ವಕ್ತಾರ ಅಜ್ಜಳ್ಳಿರವಿ ಇದ್ದರು. ಕಾರ್ಯಕ್ರಮದಲ್ಲಿ ಹೆಬ್ಬಾಲೆ ಸುತ್ತಮುತ್ತಲ ಮಹಿಳೆಯರು ಭಾಗವಹಿಸಿದ್ದರು.