ಮಡಿಕೇರಿ, ಆ.3 : ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯ 2014-17 ನೇ ಸಾಲಿನ ಆಡಳಿತಾವಧಿ ಯಲ್ಲಿ ಕೊಡವ ಭಾಷೆ, ಸಾಹಿತ್ಯ, ಸಂಸ್ಕøತಿಗೆ ಪೂರಕವಾದ ಅನೇಕ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಡೆಸಿದ್ದು, 101 ನೇ ಕಾರ್ಯಕ್ರಮ ಕೊಡವ-ಕೊಡವ ಭಾಷಿಕ ಸಮುದಾಯದವರ ಸಮಗ್ರ ದಾಖಲೀಕರಣದ ಲೋಕಾರ್ಪಣೆ ಸಮಾರಂಭ ತಾ.12 ರಂದು ಆಯೋಜಿಸಿರುವದಾಗಿ ಅಕಾಡೆಮಿಯ ಅಧ್ಯಕ್ಷ ಬಿ.ಎಸ್.ತಮ್ಮಯ್ಯ ತಿಳಿಸಿದ್ದಾರೆ.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಾವು ಅಧಿಕಾರವಹಿಸಿ ಕೊಂಡು ಇದುವರೆಗೆ ಯಶಸ್ವಿ ಕಾರ್ಯಕ್ರಮಗಳನ್ನು ನೀಡಿರುವದಾಗಿ ತಿಳಿಸಿದರು.

ಕೊಡವ-ಕೊಡವ ಭಾಷಿಕ ಸಮುದಾಯದವರ ಜನಪದ, ಆಚಾರ-ವಿಚಾರ ಸಂಪ್ರದಾಯಗಳನ್ನು ಉತ್ತೇಜಿಸುವ ನಿಟ್ಟಿನಲ್ಲಿ ಕಾರ್ಯ ಕ್ರಮಗಳನ್ನು ರೂಪಿಸಿ, ಕೊಡಗು ಜಿಲ್ಲೆ ಮಾತ್ರವಲ್ಲದೆ, ಹೊರ ಜಿಲ್ಲೆ, ಹೊರ ರಾಜ್ಯಗಳಲ್ಲಿ ಕಾರ್ಯಕ್ರಮವನ್ನು ನಡೆಸಿ ಕೊಡವ ಸಂಸ್ಕøತಿಯ ಮೆರಗನ್ನು ಪಸರಿಸ ಲಾಗಿದೆ ಎಂದರು.

(ಮೊದಲ ಪುಟದಿಂದ) ಕಳೆದ ಮೂರು ವರ್ಷಗಳಾವಧಿಯಲ್ಲಿ 42 ಆಟ್-ಪಾಟ್ ಕಾರ್ಯಕ್ರಮ, 67 ತಂಡ ಪ್ರಾಯೋಜಕತ್ವ, ಪರಿಕರ ವಿತರಣೆ, ಒಟ್ಟು 21 ಪುಸ್ತಕ ಹಾಗೂ 8 ಸಿ.ಡಿ ಬಿಡುಗಡೆ, ನಾಲ್ಕು ಕೃಷಿ ಹಬ್ಬ, ವೀರಾಜಪೇಟೆಯಲ್ಲಿ ಸಾಹಿತ್ಯ ತರಬೇತಿ ಶಿಬಿರ, ಮೂರ್ನಾಡು ಮತ್ತು ಪೊನ್ನಂಪೇಟೆಯಲ್ಲಿ ನಾಟಕ ಶಿಬಿರ, ಕೊಡವ ನಾಟಕೋತ್ಸವ, ಕುಂಞÂಮಕ್ಕಡ ನಮ್ಮೆ, ಪೊಮ್ಮಕ್ಕಡ ನಮ್ಮೆ, ಹುದಿಕೇರಿ, ಕಕ್ಕಬೆ, ಕುಶಾಲನಗರದಲ್ಲಿ ತಾಲೂಕು ಮಟ್ಟದ ಮೇಳ, ಮೈಸೂರಿನಲ್ಲಿ ರಾಜ್ಯಮಟ್ಟದ ಕೊಡವ ಸಾಂಸ್ಕøತಿಕ ಮೇಳ ಅಲ್ಲದೆ ದೆಹಲಿ ಮತ್ತು ಮುಂಬೈ ಸೇರಿದಂತೆ ಒಟ್ಟು 99 ಕಾರ್ಯಕ್ರಮಗಳನ್ನು ನಡೆಸಲಾಗಿದೆ ಎಂದು ವಿವರಿಸಿದರು.

ಇದೀಗ 101 ನೇ ಕಾರ್ಯಕ್ರಮವಾಗಿ ``ಕೊಡಗಿನ ಕಾಳಿದಾಸ'', ``ಶೇಕ್ಸ್‍ಪಿಯರ್'' ಎಂದು ಕರೆಸಿಕೊಂಡಿರುವ ``ಹರದಾಸ ಅಪ್ಪನೆರವಂಡ. ಅಪ್ಪಚ್ಚ ಕವಿಯ ಜೀವನ ಚರಿತ್ರೆ'' ಪುಸ್ತಕ ಬಿಡುಗಡೆ ಕಾರ್ಯಕ್ರಮ ಹಾಗೂ ಅಕಾಡೆಮಿಯ ಈ ಅವಧಿಯ ಮಹತ್ವಾಕಾಂಕ್ಷೆಯ ಯೋಜನೆಯಾಗಿರುವ ``ಕೊಡವ-ಕೊಡವ ಭಾಷಿಕ ಸಮುದಾಯದವರ ಸಮಗ್ರ ದಾಖಲೀಕರಣ'' ಲೋಕಾರ್ಪಣೆ ಕಾರ್ಯಕ್ರಮವನ್ನು ತಾ.12 ರಂದು ಮಡಿಕೇರಿ ಕೊಡವ ಸಮಾಜದ ಸಹಯೋಗದಲ್ಲಿ ಆಯೋಜಿಸಲಾಗಿದೆ ಎಂದು ಬಿ.ಎಸ್.ತಮ್ಮಯ್ಯ ತಿಳಿಸಿದರು.

ಅಪ್ಪಚ್ಚ ಕವಿ ಅವರ ಜೀವನ ಚರಿತ್ರೆಯ ಪುಸ್ತಕವನ್ನು ಪತ್ರಕರ್ತ ಹಾಗೂ ಸಾಹಿತಿಗಳಾದ ಐತಿಚಂಡ. ರಮೇಶ್ ಉತ್ತಪ್ಪ ರಚಿಸಿದ್ದಾರೆ. ಕಾರ್ಯಕ್ರಮದಲ್ಲಿ ಪುಸ್ತಕ ಕುರಿತಾದ ಪರಿಚಯ, ಹರದಾಸ ಅಪ್ಪನೆರವಂಡ. ಅಪ್ಪಚ್ಚ ಕವಿಯ ವಿರಚಿತ ನಾಟಕಗಳ ಕುರಿತಾದ ವಿಶ್ಲೇಷಣೆ, ನಾಟಕಗಳಲ್ಲಿರುವ ಹಾಡುಗಳ ಗಾಯನ ಕಾರ್ಯಕ್ರಮವೂ ನಡೆಯಲಿದೆ.

ಅಕಾಡೆಮಿಯ ಯೋಜನೆಯನ್ವಯ ಫೇಲೊಶಿಪ್‍ಗಾಗಿ ಅರ್ಹತೆ ಮೇರೆ ನಾಲ್ವರನ್ನು ಆಯ್ಕೆ ಮಾಡಲಾಗಿದೆ. ಕೊಡಗಿನ ಮುಂದುಮನೆ/ಬಲ್ಯಮನೆ ಇತ್ಯಾದಿಗಳ ದಾಖಲೀಕರಣ (ಕಂಬೇಯಂಡ ದೀನಾ), ಸ್ವಾತಂತ್ರ್ಯ ಪೂರ್ವ ಕೊಡಗಿನಲ್ಲಿ ರಾಜಕೀಯ ಪರಿವರ್ತನೆ (ಡಾ. ಬಿದ್ದಂಡ ರೇಖಾ ಚಿಣ್ಣಪ್ಪ) ಈ ಎರಡು ಫೇಲೋಶಿಪ್ ಪ್ರಕ್ರಿಯೆ ಪೂರ್ಣಗೊಂಡು ಈ ಎರಡು ಪುಸ್ತಕಗಳು ಅಂದಿನ ಕಾರ್ಯಕ್ರಮದಲ್ಲಿ ಬಿಡುಗಡೆಗೊಳ್ಳಲಿದೆ ಎಂದು ಬಿ.ಎಸ್.ತಮ್ಮಯ್ಯ ಮಾಹಿತಿ ನೀಡಿದರು.

ಸುಮಾರು 15 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣಗೊಂಡಿರುವ ದಾಖಲೀಕರಣದ ಸಾಕ್ಷ್ಯ ಚಿತ್ರವನ್ನು ಕೇಂದ್ರ ಹಾಗೂ ರಾಜ್ಯ ಸರಕಾರಗಳಿಗೂ ರವಾನಿಸ ಲಾಗುವದು. ಅಲ್ಲದೆ ಸಂಘ, ಸಂಸ್ಥೆಗಳಿಗೆ ಮತ್ತು ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಶಾಲಾ, ಕಾಲೇಜುಗಳಿಗೆ ಕೂಡ ನೀಡಲಾಗುವದೆಂದು ತಿಳಿಸಿದರು. 100 ನೇ ಕಾರ್ಯಕ್ರಮ ನಾಪೋಕ್ಲುವಿನಲ್ಲಿ ತಾ.10 ರಂದು ನಡೆಯಲಿದೆ ಎಂದರು.

ಅನುದಾನ ಸದ್ಬಳಕೆ

ಅಕಾಡೆಮಿಗೆ ವಾರ್ಷಿಕ 60 ಲಕ್ಷ ರೂ. ಅನುದಾನ ದೊರೆಯುತ್ತಿದ್ದು, ಮೂರು ವರ್ಷಗಳಲ್ಲಿ 1.80 ಕೋಟಿ ಹಾಗೂ ಈ ಹಿಂದಿನ ಆಡಳಿತ ಮಂಡಳಿ ಉಳಿಕೆ ಮಾಡಿದ್ದ ರೂ.1.10 ಕೋಟಿ ರೂ. ಸೇರಿದಂತೆ ಒಟ್ಟು 2.90 ಕೋಟಿ ರೂ.ಗಳ ಕಾರ್ಯಕ್ರಮಗಳನ್ನು ಆಯೋಜಿಸಿ ಸರಕಾರದ ಅನುದಾನವನ್ನು ಸದ್ಬಳಕೆ ಮಾಡಿಕೊಳ್ಳಲಾಗಿದೆ. ಅಕಾಡೆಮಿಯ ಇತಿಹಾಸದಲ್ಲೇ ಈ ಅವಧಿಯಲ್ಲಿ ಸುಮಾರು 4 ಲಕ್ಷ ಪುಸ್ತಕಗಳನ್ನು ಮಾರಾಟ ಮಾಡಲಾಗಿದೆ ಎಂದು ಬಿ.ಎಸ್.ತಮ್ಮಯ್ಯ ತಿಳಿಸಿದರು.

ಅಕಾಡೆಮಿಯ ಸದಸ್ಯ ಹಾಗೂ ದಾಖಲೀಕರಣದ ಸಂಪಾದಕ ಮಾದೇಟಿರ ಬೆಳ್ಯಪ್ಪ ಮಾತನಾಡಿ, ತಲಾ ಅರ್ಧ ಗಂಟೆಯ ಅವಧಿಯ 13 ಸಿಡಿಗಳನ್ನು ಹೊರ ತರುತ್ತಿರುವದಾಗಿ ತಿಳಿಸಿದರು.

2 ಸಾವಿರಕ್ಕೂ ಅಧಿಕ ಸಾಕ್ಷ್ಯ ಚಿತ್ರಗಳನ್ನು ತಯಾರಿಸಿದ ಅನುಭವವಿರುವ ಜನಪದ ತಜ್ಞ ಸಿರಿಗಂಧ ಶ್ರೀನಿವಾಸ ಮೂರ್ತಿ ಅವರ ನಿರ್ದೇಶನದಲ್ಲಿ ದಾಖಲೀಕರಣದ ದೃಶ್ಯ ವೈಭವವನ್ನು ಸೆರೆ ಹಿಡಿಯಲಾಗಿದೆ. ಸಧ್ಯಕ್ಕೆ ಸಿಡಿ ರೂಪದಲ್ಲಿ ಹೊರ ಬರುವ ದಾಖಲೀಕರಣವನ್ನು ಮುಂದಿನ ದಿನಗಳಲ್ಲಿ ಪುಸ್ತಕ ರೂಪಕ್ಕೂ ಪರಿವರ್ತಿಸುವ ಚಿಂತನೆ ಇದೆ ಎಂದರು. ಕೊಡಗಿನ ಇತಿಹಾಸ, ಸಮುದಾಯ, ಸಂಸ್ಕøತಿ, ಪರಂಪರೆ, ಆಹಾರ ಪದ್ಧತಿ, ಜನಪದದ ಸ್ಪರ್ಶ, ಬಾಳೋಪಾಟ್, ಕೊಡವರ ಹಬ್ಬಗಳು, ಸೇನೆ ಮತ್ತು ಕ್ರೀಡಾ ಪರಂಪರೆ, ನೃತ್ಯ, ಸಂಗೀತ, ವಾದ್ಯಗಳು, ಕೊಡವ ಮಹಿಳೆಯರು ಸೇರಿದಂತೆ ಎಲ್ಲಾ ವಿಚಾರಗಳ ಸಮಗ್ರ ಮಾಹಿತಿ ದಾಖಲೀಕರಣದಲ್ಲಿ ಅಡಕವಾಗಿದೆ ಎಂದು ಮಾದೇಟಿರ ಬೆಳ್ಯಪ್ಪ ಮಾಹಿತಿ ನೀಡಿದರು.

ಅಕಾಡೆಮಿಯ ರಿಜಿಸ್ಟ್ರಾರ್ ಉಮರಬ್ಬ ಮಾತನಾಡಿ, ಅಕಾಡೆಮಿಯ ಆಡಳಿತ ಮಂಡಳಿ ಕಳೆದ ಮೂರು ವರ್ಷಗಳಿಂದ ನಡೆಸಿಕೊಂಡು ಬಂದಿರುವ ಕಾರ್ಯಕ್ರಮಗಳ ಬಗ್ಗೆ ತೃಪ್ತಿ ವ್ಯಕ್ತಪಡಿಸಿದರು. ಸುದ್ದಿಗೋಷ್ಠಿಯಲ್ಲಿ ಸದಸ್ಯರಾದ ಅಣ್ಣೀರ ಹರೀಶ್ ಹಾಗೂ ಲೀಲಾವತಿ ಉಪಸ್ಥಿತರಿದ್ದರು.