ಸೋಮವಾರಪೇಟೆ, ಆ.3 : ಕೊಡ್ಲಿಪೇಟೆ, ಬ್ಯಾಡಗೊಟ್ಟ ಮತ್ತು ಬೆಸೂರು ಗ್ರಾಮ ಪಂಚಾಯಿತಿಗಳಿಗೆ ಭೇಟಿ ನೀಡಿದ ಜಿಲ್ಲಾ ಪಂಚಾಯತ್ ಅಧ್ಯಕ್ಷರು, ಉಪಾಧ್ಯಕ್ಷರನ್ನು ಒಳಗೊಂಡ ಇತರ ಜನಪ್ರತಿನಿಧಿಗಳು, ಸಾರ್ವಜನಿಕರ ಕುಂದುಕೊರತೆಗಳನ್ನು ಆಲಿಸಿದರು.

ಬ್ಯಾಡಗೊಟ್ಟ ಗ್ರಾಮ ಪಂಚಾಯಿತಿಗೆ ಭೇಟಿ ನೀಡಿದ ಜಿ.ಪಂ. ಅಧ್ಯಕ್ಷ ಬಿ.ಎ. ಹರೀಶ್, ಗ್ರಾ.ಪಂ. ಅಭಿವೃದ್ಧಿ ಕಾರ್ಯಗಳ ಬಗ್ಗೆ ಮಾಹಿತಿ ಪಡೆದರು. ಕ್ಯಾತೆ ಗ್ರಾಮ ವ್ಯಾಪ್ತಿಯಲ್ಲಿ ಸುಮಾರು 4 ಎಕರೆ ಜಾಗವನ್ನು ನವಗ್ರಾಮಕ್ಕಾಗಿ ಮೀಸಲಿಟ್ಟಿದ್ದು, ತಾಲೂಕು ಪಂಚಾಯಿತಿ ಕಾರ್ಯನಿರ್ವ ಹಣಾಧಿಕಾರಿಗಳ ಹೆಸರಿನಲ್ಲಿರುವ ಜಾಗವನ್ನು ತಕ್ಷಣ ವಿಲೇವಾರಿ ಮಾಡಬೇಕು ಎಂದು ಹರೀಶ್ ಸೂಚಿಸಿದರು.

ಬ್ಯಾಡಗೊಟ್ಟ ಗ್ರಾ.ಪಂ. ವ್ಯಾಪ್ತಿಯಲ್ಲಿ ನೂರಾರು ಮಂದಿ ಮನೆ ನಿವೇಶನಕ್ಕಾಗಿ ಅರ್ಜಿ ಸಲ್ಲಿಸಿದ್ದು, ಮೀಸಲಿಟ್ಟಿರುವ ಜಾಗದಲ್ಲಿ ಆದ್ಯತೆಯ ಮೇರೆಗೆ 90 ಮಂದಿ ಫಲಾನುಭವಿಗಳನ್ನು ಗುರುತಿಸಿ ನಿವೇಶನ ಹಂಚಲು ಕ್ರಮ ಕೈಗೊಳ್ಳುವಂತೆ ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಚಂದ್ರಶೇಖರ್ ಅವರಿಗೆ ನಿರ್ದೇಶನ ನೀಡಿದರು.

ನಂತರ ಕೊಡ್ಲಿಪೇಟೆ ಗ್ರಾಮ ಪಂಚಾಯಿತಿಗೆ ಭೇಟಿ ನೀಡಿ ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸಿ, ಮನವಿ ಸ್ವೀಕರಿಸಿದ ತಂಡ, ಕೊಡ್ಲಿಪೇಟೆ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿತು. ಆರೋಗ್ಯ ಕೇಂದ್ರದಲ್ಲಿ ಶುಚಿತ್ವಕ್ಕೆ ಆದ್ಯತೆ ನೀಡಬೇಕು. ಡೆಂಗ್ಯೂ ಸೇರಿದಂತೆ ಇನ್ನಿತರ ಮಾರಕ ರೋಗಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಬೇಕು ಎಂದು ಜಿ.ಪಂ. ಅಧ್ಯಕ್ಷ ಹರೀಶ್, ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್, ತಾ.ಪಂ. ಅಧ್ಯಕ್ಷೆ ಪುಷ್ಪಾ ರಾಜೇಶ್ ಅವರುಗಳು ವೈದ್ಯಾಧಿಕಾರಿಗಳಿಗೆ ಸೂಚಿಸಿದರು.

ಊರುಗುತ್ತಿ-ಬೆಂಬಳೂರು-ಶಿವರಳ್ಳಿ ರಸ್ತೆಯನ್ನು ತುರ್ತು ದುರಸ್ತಿಗೊಳಿಸಬೇಕು. ಇದರೊಂದಿಗೆ ಗ್ರಾಮೀಣ ಭಾಗಗಳ ರಸ್ತೆಗಳ ಅಭಿವೃದ್ಧಿಗೆ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಮನವಿ ಮಾಡಿದರು.

ಕ್ಯಾತೆ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಿದ್ದು, ಬೋರ್‍ವೆಲ್ ಕೊರೆಯಿಸಿದ್ದರೂ ವಿದ್ಯುತ್ ಸಂಪರ್ಕ ಮತ್ತು ಪೈಪ್‍ಲೈನ್ ಮಾಡಿಲ್ಲ. ಇದರಿಂದ ಕುಡಿಯುವ ನೀರಿಗೆ ಪರದಾಡುವಂತಾಗಿದೆ ಎಂದು ಗ್ರಾಮಸ್ಥರು, ಜನಪ್ರತಿನಿಧಿಗಳ ಗಮನಕ್ಕೆ ತಂದರು. ತಕ್ಷಣ ಬೋರ್‍ವೆಲ್‍ಗೆ ವಿದ್ಯುತ್ ಸಂಪರ್ಕ ಕಲ್ಪಿಸಿ, ಪೈಪ್‍ಲೈನ್ ಅಳವಡಿಸಿ ನೀರು ಹರಿಸುವಂತೆ ಜಿ.ಪಂ. ಅಧ್ಯಕ್ಷರು ಸಂಬಂಧಿಸಿದ ಅಭಿಯಂತರ ಸಲೀಂ ಅವರಿಗೆ ಸೂಚಿಸಿದರು.

ಈ ಸಂದರ್ಭ ಜಿಲ್ಲಾ ಪಂಚಾಯತ್ ಸದಸ್ಯ ಪುಟ್ಟರಾಜು, ಕೊಡ್ಲಿಪೇಟೆ ಗ್ರಾ.ಪಂ. ಅಧ್ಯಕ್ಷೆ ಅನುಸೂಯ, ಬ್ಯಾಡಗೊಟ್ಟ ಗ್ರಾ.ಪಂ. ಅಧ್ಯಕ್ಷೆ ನಿರ್ಮಲ, ಉಪಾಧ್ಯಕ್ಷ ಅಹ್ಮದ್, ಬಿಜೆಪಿ ಮುಖಂಡರುಗಳಾದ ಶರತ್‍ಚಂದ್ರ, ಪ್ರಸಾದ್ ಪಟೇಲ್, ಕ್ಯಾತೆ ಶಿವು ಸೇರಿದಂತೆ ಇತರರು ಉಪಸ್ಥಿತರಿದ್ದರು.