ಮಡಿಕೇರಿ, ಆ.3 : ಹೆಗ್ಗಳ ಗ್ರಾಮದ ತಮ್ಮ ಸ್ವಂತ ನಿವೇಶನದಲ್ಲಿ ಅಗಲಿದ ಪುತ್ರನ ನೆನಪಿಗಾಗಿ ನಿರ್ಮಿಸಿರುವ ದೇವರ ಗುಡಿಯ ವಿಚಾರದಲ್ಲಿ ರಾಜಕೀಯ ಬೆರೆತಿದ್ದು, ತಮ್ಮ ಸ್ವಾಧೀನದ ಜಾಗವನ್ನು ಬಡವರಿಗೆ ಹಂಚುವಂತೆ ಶಾಸಕ ಕೆ.ಜಿ.ಬೋಪಯ್ಯ ಅವರು ಮಾಡಿರುವ ಆದೇಶ ಬೇಸರ ತಂದಿದೆ ಎಂದು ಜಾಗದ ಮಾಲೀಕ ಜಾನ್ ಡಿಸೋಜ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗ್ರಾಮದ ಸುತ್ತಮುತ್ತಲಿನ ಒತ್ತುವರಿಯನ್ನು ಮೊದಲು ತೆರವುಗೊಳಿಸಿ ಬಡವರಿಗೆ ಹಂಚಲಿ ಎಂದು ಒತ್ತಾಯಿಸಿದರು. ಹೆಗ್ಗಳ ಗ್ರಾಮದಲ್ಲಿ ಸುಮಾರು 14 ಗುಡಿಗಳು ಯಾವದೇ ಅನುಮತಿ ಇಲ್ಲದೆ ಕೆಲವರ ಮನೆಗಳ ಮುಂದೆ ನಿರ್ಮಾಣಗೊಂಡಿದೆ. ನಾವು ನಮ್ಮ ಮಗನ ನೆನಪಿಗಾಗಿ ನಾಲ್ಕು ಅಡಿ ವಿಸ್ತೀರ್ಣದಲ್ಲಿ ಸಣ್ಣ ಗುಡಿಯೊಂದನ್ನು ನಿರ್ಮಿಸಿಕೊಂಡಿದ್ದೇವೆಯೆ ಹೊರತು ಚರ್ಚ್ ಅಲ್ಲವೆಂದು ಸ್ಪಷ್ಟಪಡಿಸಿದರು.

ಹೆಗ್ಗಳ ಗ್ರಾಮದ ಸುತ್ತಮುತ್ತ ಕೆಲವು ಪ್ರಭಾವಿಗಳು ಸರಕಾರಿ ಜಾಗವನ್ನು ಅತಿಕ್ರಮಣ ಮಾಡಿಕೊಂಡಿದ್ದಾರೆ, ಸಿ ಅಂಡ್ ಡಿ ಭೂಮಿಯನ್ನು ಮಾರಾಟ ಮಾಡಿದ್ದಾರೆ. ಇವುಗಳನ್ನು ಮೊದಲು ತೆರವುಗೊಳಿಸಲಿ ಎಂದು ಒತ್ತಾಯಿಸಿದ ಅವರು, ಸ್ವಂತ ಜಾಗದಲ್ಲಿರುವ ಗುಡಿಯನ್ನು ತೆರವುಗೊಳಿಸುವದಿಲ್ಲವೆಂದು ಸ್ಪಷ್ಟಪಡಿಸಿದರು. ಸ್ಥಳೀಯ ಗ್ರಾಮಸ್ಥರಿಂದ ಗುಡಿಗೆ ಯಾವದೇ ವಿರೋಧವಿಲ್ಲ. ಆದರೆ, ಬಿಜೆಪಿ ಮಂದಿ ಪರ ಊರಿನವರನ್ನು ಕರೆತಂದು ಪ್ರತಿಭಟನೆ ನಡೆಸಿದ್ದಾರೆ ಎಂದು ಆರೋಪಿಸಿದರು.

ಜಾನ್ ಡಿಸೋಜ ಅವರ ಮಗ ಸುನಿಲ್ ಹಾಗೂ ಸೊಸೆ ಫ್ಲೋರಾ ಪಿಂಟೋ ಮಾತನಾಡಿ, ಅಲ್ಪಸಂಖ್ಯಾತರಾದ ನಮಗೆ ಅನ್ಯಾಯವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.