ಕುಶಾಲನಗರ, ಆ. 3: ನನ್ನ ಹೆಸರು ಕಾರ್ತಿಕ್. ಪ್ರಸಕ್ತ ಬಿಡುಗಡೆಯ ಭಾಗ್ಯಕ್ಕಾಗಿ ಕಾಯುತ್ತಾ ದುಬಾರೆ ಸಾಕಾನೆ ಶಿಬಿರದಲ್ಲಿ ಬಾಲಾಪರಾಧಿ ಯಾಗಿ ಬಂಧನಕ್ಕೊಳಗಾಗಿದ್ದೇನೆ. ಕುಶಾಲನಗರದ ಆನೆಕಾಡಲ್ಲಿ ಹುಟ್ಟಿದ ನನ್ನನ್ನು ತಾಯಿಯಿಂದ ಬೇರ್ಪಡಿಸಿ ದುಬಾರೆ ಸಾಕಾನೆ ಶಿಬಿರಕ್ಕೆ ತಂದು ಬಹುತೇಕ 7 ವರ್ಷಗಳೇ ಕಳೆದಿವೆ. ಇಲ್ಲಿನ 30ಕ್ಕೂ ಹೆಚ್ಚು ಸಹಪಾಠಿಗ ಳೊಂದಿಗೆ ನನ್ನನ್ನು ದುಬಾರೆ ಶಿಬಿರದ ಕೆಲವು ಮಾವುತರು ಆರೈಕೆ ಮಾಡಿ ಸಲಹುತ್ತಿದ್ದರು. ಶಿಬಿರಕ್ಕೆ ಭೇಟಿ ನೀಡುವ ಪ್ರವಾಸಿಗರಿಗೂ ನಾನು ಮನರಂಜನೆ ನೀಡಿದ ನೆನಪು ನನಗೆ ಇನ್ನೂ ಇದೆ. ಶಿಬಿರಕ್ಕೆ ಆಗಮಿಸುತ್ತಿದ್ದ ಗಣ್ಯಾತಿಗಣ್ಯರು ಕೂಡ ನನ್ನ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದು ಕೂಡ ಇದೆ.
ಅದೇನೋ ಇತ್ತೀಚಿನ ಕೆಲವು ಸಮಯದಿಂದ ನನ್ನ ಆರೈಕೆ ಮಾಡುವ ಬಗ್ಗೆ ಶಿಬಿರದ ಅಧಿಕಾರಿಗಳು ಮತ್ತು ಮಾವುತರ ನಡುವೆ ಗೊಂದಲ ಉಂಟಾಗಿ ನನಗೆ ಸರಿಯಾದ ಉಪಚಾರ ಆಗುತ್ತಿರಲಿಲ್ಲ. ಕುಡಿದ ಮತ್ತಿನಲ್ಲಿ ನನ್ನ ಬಳಿ ಬಂದು ಕೀಟಲೆ ಮಾಡುವದು, ನನ್ನ ಮೇಲೆ ವಿನಾಕಾರಣ ಪ್ರಹಾರ ಮಾಡುವದು, ಸರಿಯಾಗಿ ಆಹಾರ ನೀಡದೆ ಉಪವಾಸ ಬೀಳಿಸುವದು, ಇದೆಲ್ಲಾ ನಡೆದು ನನಗೂ ಅಮ್ಮನ ಪ್ರೀತಿಯ ಕೊರತೆಯೊಂದಿಗೆ ಸ್ವಾತಂತ್ರ್ಯದ ನೆನಪಾಗಿ ಒಂದೇ ವಾರದಲ್ಲಿ ಇಬ್ಬರು ಮಾವುತರ ಮೇಲೆ ತನ್ನ ರೋಷದ ಕಿಡಿ ವ್ಯಕ್ತಪಡಿಸಿದ್ದು, ಅದು ಅತಿರೇಕಕ್ಕೆ ಹೋಗಿ ಇಬ್ಬರ ಅಗಲಿಕೆಗೆ ಕೂಡ ನಾನು ಕಾರಣ ಆಗಿರುವದು ನಿಜಕ್ಕೂ ವಿಷಾದವೆನಿಸುತ್ತಿದೆ. ಘಟನೆ ನಂತರ ನನ್ನನ್ನು ಶಿಬಿರದ ಮಾವುತ ಕಾವಾಡಿ ಗರು ನನ್ನನ್ನು ನರಹಂತಕ ಎಂಬಂತೆ ಬಿಂಬಿಸುತ್ತಿದ್ದು ಇದರಿಂದ ನಾನು ಒಂಟಿಯಾಗಿಯೇ ದಿನಕಳೆಯುತ್ತಿದ್ದೇನೆ.
ಈ ಅಪರಾಧಕ್ಕೆ ನಾನು ಮಾತ್ರ ಕಾರಣವಲ್ಲ. ನನ್ನನ್ನು ನೋಡಿ ಕೊಳ್ಳುತ್ತಿದ್ದ ಅರಣ್ಯ ಇಲಾಖೆಯ ಸಂಬಂಧಿಸಿದ ಅಧಿಕಾರಿಗಳು ಕೂಡ ಕಾರಣ ಎನ್ನುವದು ಇಲ್ಲಿ ಹೇಳಲೇಬೇಕಾದ ವಿಚಾರ. ಈ ಬಗ್ಗೆ ಒಂದು ವಿಶೇಷ ತಂಡದಿಂದ ತನಿಖೆ ಮಾಡಿದರೆ ಶಿಬಿರದಲ್ಲಿ ನಡೆಯುವ ಆಗು ಹೋಗುಗಳ ಬಗ್ಗೆ ತನಿಖಾ ವರದಿಯೇ ಪ್ರಕಟಿಸಬಹುದು.
ನನ್ನ ಸಹಪಾಠಿಗಳು ಸ್ವಚ್ಚಂದವಾಗಿ ಓಡಾಡುತ್ತಿದ್ದು ನನ್ನನ್ನು ಮಾತ್ರ ದುಬಾರೆ ಸಾಕಾನೆ ಶಿಬಿರದ ಸ್ಕ್ರಾಲ್‍ನಲ್ಲಿ ಬಂಧಿಸಿ ಇಟ್ಟಿದ್ದಾರೆ. ಇಂದಿಗೆ ಸುಮಾರು 3 ತಿಂಗಳುಗಳು ಕಳೆದಿವೆÉ. ನನ್ನ ಆರೈಕೆಗೆ ಸಿಬ್ಬಂದಿಗಳು ಇಟ್ಟಿದ್ದರೂ ಅವರು ನನ್ನನ್ನು ಸರಿಯಾಗಿ ಸಲಹುತ್ತಿಲ್ಲ. ಈ ಬಗ್ಗೆ ಅಧಿಕಾರಿಗಳಿಗೂ ಮಾಹಿತಿ ತಿಳಿದಿದೆ. ಆರೋಪಿ ಸ್ಥಾನದಲ್ಲಿರುವ ನನ್ನ ಬಗ್ಗೆ ಮಾಹಿತಿಯಿರುವ ಕೆಲವು ಇಲಾಖಾ ಅಧಿಕಾರಿಗಳು ಬೇರೆಡೆಗೆ ವರ್ಗವಾಗಿರುವದು ಕೂಡ ನನ್ನ ಗಮನಕ್ಕೆ ಬಂದಿದೆ. ಪ್ರಾರಂಭದಲ್ಲಿ ಕೆಲವು ಮಾಧ್ಯಮದವರು ನನ್ನ ಬಗ್ಗೆ ವರದಿ ಮಾಡಿದ್ದು, ಬಿಟ್ಟರೆ ನಂತರ ನನ್ನ ಬಗ್ಗೆ ಯಾರೂ ಕೂಡ ಗಮನಹರಿಸುತ್ತಿಲ್ಲ. ಸ್ಕ್ರಾಲ್‍ನಲ್ಲಿ ಬಂಧನದಲ್ಲಿರುವ ನಾನು ಇದೀಗ ಕೊರಗಿ ಸೊರಗುತ್ತಿದ್ದೇನೆ. ನನ್ನ ಆರೋಗ್ಯದ ಬಗ್ಗೆ ಗಮನಹರಿಸಲು ಕೂಡ ಯಾವದೇ ವೈದ್ಯರುಗಳು ಬಂದಿಲ್ಲ. ಇನ್ನೊಂದೆಡೆ ನನ್ನ ತಪ್ಪನ್ನು ತಿದ್ದಿ ತೀಡುವ ತರಬೇತುದಾರರ ಕೊರತೆ ಕೂಡ ಈ ಶಿಬಿರದಲ್ಲಿದೆ. ನನಗೆ ಬಿಡುಗಡೆಯ ಭಾಗ್ಯ ಯಾವಾಗ ದೊರಕುತ್ತದೋ ಎನ್ನುತ್ತಾ ಏಕಾಂಗಿಯಾಗಿ ಸ್ಕ್ರಾಲ್‍ನ ಒಳಗಡೆ ಬಂಧಿತನಾಗಿದ್ದೇನೆ. ಈ ನಡುವೆ ನಮ್ಮ ಶಿಬಿರದಿಂದ ಮೈಸೂರು ದಸರಾಕ್ಕೆ ನನ್ನ ಸಹಪಾಠಿಗಳು ತೆರಳುವ ಬಗ್ಗೆ ಕೂಡ ನನಗೆ ಅರಿವು ದೊರಕಿದೆ.
ಇಂತಹ ಶಿಬಿರದಲ್ಲಿ ಬಂಧಿತನಾ ಗಿರುವ ನನ್ನದೊಂದು ಮನವಿ. ಈ ಬಾರಿಯ ಸ್ವಾತಂತ್ರ್ಯ ದಿನಕ್ಕಿಂತ ಮುನ್ನ ನನ್ನನ್ನು ಸ್ಕ್ರಾಲ್‍ನಿಂದ ಬಿಡುಗಡೆಗೊಳಿಸಿ ಸ್ವತಂತ್ರನಾಗಿಸಲು ಯಾರಾದರೂ ಶಿಫಾರಸು ಮಾಡಿ. ಎಲ್ಲಿಯೂ ಸಲ್ಲದಿದ್ದಲ್ಲಿ ನನ್ನನ್ನು ದೂರದ ಶಿವಮೊಗ್ಗ ಶಿಬಿರ ಅಥವಾ ಬಂಡಿಪುರ ಅರಣ್ಯದಲ್ಲಿ ಬಿಟ್ಟರೆ ಸ್ವಚ್ಛಂದವಾಗಿ ಯಾರಿಗೂ ಹೊರೆ ಯಾಗದೆ ಓಡಾಡಿಕೊಂಡಿರುತ್ತೇನೆ.
ಇಂತಿ,
ಕಾರ್ತಿಕ್
(ದುಬಾರೆ ಸಾಕಾನೆ ಶಿಬಿರದಲ್ಲಿ ಬಂಧಿತನಾಗಿರುವ ಬಾಲಾಪರಾಧಿ ಮರಿಯಾನೆ)