ಶ್ರೀಮಂಗಲ, ಆ. 2: ರಾಜ್ಯದ ಸಿದ್ದರಾಮಯ್ಯ ನೇತೃತ್ವದ ಸರಕಾರ ರಾಜ್ಯದ ಎಲ್ಲಾ ವರ್ಗದ ಜನರ ಕಲ್ಯಾಣಕ್ಕಾಗಿ ಉತ್ತಮ ಆಡಳಿತವನ್ನು ನೀಡಿದ್ದು, ಸರಕಾರದ ಸಾಧನೆಯನ್ನು ಕಾರ್ಯಕರ್ತರು ಜನರಿಗೆ ಮನವರಿಕೆ ಮಾಡಿ ಮುಂದಿನ ಬಾರಿ ರಾಜ್ಯದಲ್ಲಿ ಕಾಂಗ್ರೆಸ್ ಸರಕಾರವನ್ನು ಆಡಳಿತಕ್ಕೆ ತರಬೇಕು. ಕೊಡಗು ಜಿಲ್ಲೆಯ ಎರಡು ವಿಧಾನಸಭಾ ಕ್ಷೇತ್ರದಲ್ಲಿ ಮರಳಿ ಕಾಂಗ್ರೆಸ್ ಶಾಸಕರನ್ನು ಗೆಲ್ಲಿಸಲು ಶ್ರಮಿಸಬೇಕೆಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಶಿವು ಮಾದಪ್ಪ ಕರೆ ನೀಡಿದರು.

ಟಿ. ಶೆಟ್ಟಿಗೇರಿಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸಭಾಂಗಣದಲ್ಲಿ ನಡೆದ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು. ಪ್ರಧಾನಿ ಮೋದಿಯವರ ಪ್ರತಿ ತಿಂಗಳ ‘ಮನ್ ಕಿ ಬಾತ್’ ಕಾರ್ಯಕ್ರಮ ಹಳಸಿದ ಅನ್ನದಂತಿದ್ದು, ಯಾವದೇ ಹೊಸತನ ಹಾಗೂ ಜನರಿಗೆ ಪ್ರಯೋಜನವಾಗುವ ವಿಚಾರವಿಲ್ಲದೆ ಸ್ವಾರಸ್ಯ ಕಳೆದುಕೊಂಡಿದೆ ಎಂದರು.

ರಾಜ್ಯ ಅರಣ್ಯ ಕೈಗಾರಿಕಾ ನಿಗಮದ ಉಪಾಧ್ಯಕ್ಷೆ ಪದ್ಮಿನಿ ಪೊನ್ನಪ್ಪ ಮಾತನಾಡಿ, ಕಾಂಗ್ರೆಸ್ ಸರಕಾರದ ಅವಧಿಯಲ್ಲಿ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ ಎಲ್ಲಾ ವರ್ಗದ ಜನರ ನಿರೀಕ್ಷೆಗೆ ತಕ್ಕಂತೆ ಜನಪರ ಆಡಳಿತ ನೀಡಿದ್ದಾರೆ ಎಂದು ಹೇಳಿದರು.

ಜಿಲ್ಲೆಯಲ್ಲಿ ಸರಕಾರಿ ಜಾಗವನ್ನು ಒತ್ತುವರಿ ಮಾಡಿಕೊಂಡು ತೋಟ ಹಾಗೂ ಕೃಷಿ ಮಾಡಿರುವ ಜಾಗವನ್ನು ತೆರವುಗೊಳಿಸಲು ಕಳೆದ ಹಲವು ವರ್ಷದಿಂದ ರಾಜಕೀಯ ಪ್ರೇರಿತವಾಗಿ ಸಂಚು ನಡೆಸಲಾಗುತ್ತಿದೆ. ಬೇರೆ ಜಿಲ್ಲೆಗಳಲ್ಲಿ ಒತ್ತುವರಿ ಮಾಡಿಕೊಂಡಿರುವ ಸರಕಾರಿ ಜಾಗವನ್ನು ದಂಡ ಪಾವತಿಸಿ ಸಕ್ರಮಗೊಳಿಸಿಕೊಡಲು ಅವಕಾಶ ನೀಡಿಲಾಗಿದೆ. ಜಿಲ್ಲೆಯ ಸಣ್ಣ ಹಿಡುವಳಿದಾರರು ಸರಕಾರಿ ಜಾಗವನ್ನು ಒತ್ತುವರಿ ಮಾಡಿಕೊಂಡು ಕೃಷಿ ಮಾಡಿ ಜೀವನ ಸಾಗಿಸುತ್ತಿದ್ದು, ಇದನ್ನು ಸಕ್ರಮಗೊಳಿಸಲು ಸರಕಾರ ಅಗತ್ಯ ಕ್ರಮ ಕೈಗೊಳ್ಳಿದೆ ಎಂದು ಭರವಸೆ ನೀಡಿದರು.

250 ಸೊಲಾರ್ ದೀಪ ಭರವಸೆ: ಟಿ. ಶೆಟ್ಟಿಗೇರಿ ಗ್ರಾ.ಪಂ. ವ್ಯಾಪ್ತಿಯ ಅರ್ಹ ಫಲಾನುಭವಿಗಳಿಗೆ 250 ಸೋಲಾರ್ ದೀಪವನ್ನು ಅರಣ್ಯ ಅಭಿವೃದ್ಧಿ ನಿಗಮದಿಂದ ವಿತರಿಸುವ ಭರವಸೆ ನೀಡಿದ ಪದ್ಮಿನಿ ಪೊನ್ನಪ್ಪ ಅವರು, ಟಿ. ಶೆಟ್ಟಿಗೇರಿ ವ್ಯಾಪ್ತಿಯೂ ಗ್ರಾಮೀಣ ಭಾಗವಾಗಿದ್ದು, ಅಧಿಕ ಮಳೆ ಬೀಳುವ ಗುಡ್ಡಗಾಡು ಪ್ರದೇಶವಾಗಿದ್ದರಿಂದ ವಿದ್ಯುತ್ ವ್ಯತಯದಿಂದ ಉಂಟಾಗುವ ಸಮಸ್ಯೆಗೆ ಪರಿಹಾರವಾಗಿ ಈ ದೀಪ ವಿತರಿಸಲಾಗುವದೆಂದು ಹೇಳಿದರು.

ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಧರ್ಮಜ ಉತ್ತಪ್ಪ ಮಾತನಾಡಿ, ಕಾಂಗ್ರೆಸ್ ಪಕ್ಷದಿಂದ ಜಿಲ್ಲೆಯ ಎರಡು ವಿಧಾನಸಭಾ ಕ್ಷೇತ್ರಕ್ಕೆ ಯಾರಿಗೆ ಪಕ್ಷ ‘ಬಿ’ ಫಾರಂ ನೀಡುತ್ತದೋ ಅವರ ಗೆಲುವಿಗೆ ಒಗ್ಗಾಟ್ಟಾಗಿ ಶ್ರಮಿಸಬೇಕು ಎಂದರು.

ಪದ್ಮಿನಿ ಪೊನ್ನಪ್ಪ ತಿರುಗೇಟು: ಪೊನ್ನಂಪೇಟೆ ನೂತನ ತಾಲೂಕು ರಚನೆಗೆ ಶಾಸಕ ಕೆ.ಜಿ. ಬೋಪಯ್ಯ ಸ್ಪಂದಿಸುತ್ತಿಲ್ಲ ಎಂಬ ತಮ್ಮ ಹೇಳಿಕೆಗೆ ಬಿ.ಜೆ.ಪಿ.ಯ ವೀರಾಜಪೇಟೆ ಕ್ಷೇತ್ರ ಅಧ್ಯಕ್ಷ ಅರುಣ ಭೀಮಯ್ಯ ಹಾಗೂ ತಾ.ಪಂ. ಉಪಾಧ್ಯಕ್ಷ ಚಲನ್ ಕುಮಾರ್ ಅವರು ನೀಡಿರುವ ಹೇಳಿಕೆಗೆ ಪದ್ಮಿನಿ ಪೊನ್ನಪ್ಪ ತಿರುಗೇಟು ನೀಡಿದರು. ಕಳೆದ 16 ವರ್ಷದಿಂದ ರಾಜಕೀಯದಲ್ಲಿ ಸಕ್ರಿಯವಾಗಿದ್ದು, ನನಗೆ ರಾಜಕೀಯ ಜ್ಞಾನ ಇವರಿಂದ ಕಲಿಯುವ ಅಗತ್ಯವಿಲ್ಲ ಎಂದರು.

ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ: ಸಭೆಯಲ್ಲಿ ಚೊಟ್ಟೆಯಂಡಮಾಡ ಕಿರಣ್, ಮಂಜು, ಅನಿಲ, ರವಿ, ಸತೀಶ್, ರಮೇಶ್, ಮನು, ಸಂಜು, ಹರೀಶ್, ಮಾಣೀರ ನಂಜಪ್ಪ ಅವರು ಮುಖಂಡರ ಸಮ್ಮುಖದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು.

ಟಿ. ಶೆಟ್ಟಿಗೇರಿ ವಲಯ ಕಾಂಗ್ರೆಸ್ ಅಧ್ಯಕ್ಷ ಚೊಟ್ಟೆಯಂಡಮಾಡ ವಿಶುರಂಜಿ ಸಭೆಯ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ತಾ.ಪಂ. ಸದಸ್ಯರುಗಳಾದ ಆಶಾ ಜೇಮ್ಸ್, ಪಲ್ವೀನ್ ಪೂಣಚ್ಚ, ವೀರಾಜಪೇಟೆ ಕ್ಷೇತ್ರ ಯುವ ಕಾಂಗ್ರೆಸ್ ಅಧ್ಯಕ್ಷ ಜಮ್ಮಡ ಸೋಮಣ್ಣ, ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿ ಎ.ಜೆ. ಬಾಬು, ಹಿರಿಯರಾದ ಬಾಚರಣಿಯಂಡ ನಾಣಯ್ಯ, ಪೆಮ್ಮಂಡ ರಾಜ, ತಡಿಯಂಗಡ ಚಾಮಿ ಮತ್ತು ಸಭೆಯಲ್ಲಿ ಗ್ರಾ.ಪಂ. ಸದಸ್ಯರಾದ ಮುಕ್ಕಾಟಿರ ಸಂದೀಪ್, ಚೊಟ್ಟೆಯಂಡಮಾಡ ಉದಯ್, ಪ್ರಮುಖರಾದ ಅಪ್ಪಚಂಗಡ ಮೋಟಯ್ಯ, ಚೊಟ್ಟೆಯಂಡಮಾಡ ಬೋಸು, ಬಾದುಮಂಡ ರಮೇಶ್ ಮತ್ತಿತರರು ಹಾಜರಿದ್ದರು.