ಮಡಿಕೇರಿ, ಆ. 2: ಈ ಹಿಂದಿನ ಎರಡು ವರ್ಷಗಳಂತೆ ಪ್ರಸಕ್ತ ವರ್ಷವೂ ಕೊಡಗು ಜಿಲ್ಲೆಯಲ್ಲಿ ವಾಡಿಕೆಯಂತೆ ಮಳೆಯಾಗದಿರುವದು ರೈತಾಪಿ ವರ್ಗವನ್ನು ಆತಂಕಕ್ಕೀಡು ಮಾಡುತ್ತಿದೆ. ಅದರಲ್ಲೂ ಆಷಾಢ (ಕಕ್ಕಡ) ಮಾಸದಲ್ಲಿ ಕಂಡು ಬರುತ್ತಿರುವ ವಾತಾವರಣ ಕೊಡಗಿನ ಈ ಹಿಂದಿನ ಚಿತ್ರಣವನ್ನು ಊಹಿಸಿಕೊಂಡರೆ ಅಚ್ಚರಿ ಮೂಡಿಸುವಂತಿದೆ.ವರ್ಷಂಪ್ರತಿ ಜಿಲ್ಲೆಯಲ್ಲಿ ಮಳೆಯ ಪ್ರಮಾಣ ಕ್ಷೀಣಗೊಳ್ಳುತ್ತಿರುವದು ಕೃಷಿ ಪ್ರಧಾನ ಜಿಲ್ಲೆಯಲ್ಲಿ ಕೃಷಿ ಚಟುವಟಿಕೆಯ ಮೇಲೆ ಪರಿಣಾಮ ಬೀರುತ್ತಿದೆ. ಸಾಧಾರಣವಾಗಿ ಜುಲೈ ಅಂತ್ಯದಿಂದ ಆಗಸ್ಟ್ ತಿಂಗಳ ಅವಧಿಯಲ್ಲಿ ಜಿಲ್ಲೆಯಲ್ಲಿ ನಾಟಿ ಕೆಲಸದ ಪರ್ವ ಕಾಲ. ಈ ಸಂದರ್ಭ ನಾಟಿ ಕೆಲಸಕ್ಕೆ ಅಗತ್ಯ ಮಳೆಯ ಅನಿವಾರ್ಯತೆ ಇದೆ. ಪ್ರಸಕ್ತ ವರ್ಷ ಕೃಷಿ ಇಲಾಖೆಯ ಮಾಹಿತಿಯಂತೆ 30,500 ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಉತ್ಪಾದಿಸುವ ಗುರಿ ಹೊಂದಲಾಗಿದ್ದು, ಮಳೆಯ ಅಭಾವದ ನಡುವೆಯೂ ಶೇ. 90ರಷ್ಟು ಬಿತ್ತನೆ ಕಾರ್ಯ ನಡೆದಿದ್ದು, ಸಸಿಮಡಿ ತಯಾರಾಗಿದೆ. ಆದರೆ ನಾಟಿ ಕೆಲಸಕ್ಕೆ ಬಹುತೇಕ ಕಡೆಗಳಲ್ಲಿ ಗದ್ದೆಗಳಲ್ಲಿ ನೀರು ಇಲ್ಲದೆ ಸಮಸ್ಯೆಯಾಗುತ್ತಿವೆ. ಈ ತನಕ 8,658 ಹೆಕ್ಟೇರ್‍ನಲ್ಲಿ ನಾಟಿ ಕೆಲಸ ಮುಗಿದಿದ್ದು, ಶೇ. 28ರಷ್ಟು ಮಾತ್ರ ಪ್ರಗತಿ ಕಂಡು ಬಂದಿದೆ. ನಾಟಿಯಾದ ಗದ್ದೆಗಳಲ್ಲಿ ನೀರು ಇಂಗುತ್ತಿರುವದು ಈ ಕೆಲಸ ಪೂರೈಸಿದವರಿಗೆ ಆಗುತ್ತಿರುವ ಸಮಸ್ಯೆಯಾದರೆ ನಾಟಿ ಕೆಲಸಕ್ಕೆ ತೊಡಗದವರಿಗೆ ಬಿಸಿಲು ಕಾಯುತ್ತಿರುವದು ತೊಂದರೆಯಾಗಿದೆ. ಆಷಾಢ ಮಾಸದಲ್ಲೇ ಮಳೆಯಾಗದಿರುವದು ಆತಂಕಕಾರಿ. ನಾಟಿ ಕೆಲಸ ಪೂರ್ಣಗೊಳಿಸಿದರೂ ನೀರು ಇಳಿಮುಖಗೊಳ್ಳುತ್ತಿರುವದು ಭವಿಷ್ಯದ ಬಗ್ಗೆ ಯೋಚಿಸುವಂತಾಗಿದೆ ಎಂದು ಮೊನ್ನೆ ತಾನೆ ನಾಟಿ ಕೆಲಸ ಪೂರ್ಣಗೊಳಿಸಿರುವ ಬೊಳ್ಳುಮಾಡು ಗ್ರಾಮದ ಮಾತಂಡ ಎಂ. ಮೊಣ್ಣಪ್ಪ ಅವರು ‘ಶಕ್ತಿ’ಯೊಂದಿಗೆ ಅನಿಸಿಕೆ ವ್ಯಕ್ತಪಡಿಸಿದರು.