ಮಡಿಕೇರಿ, ಆ. 2: ಮೂರು ಪ್ರತ್ಯೇಕ ಪ್ರಕರಣಗಳಿಗೆ ಸಂಬಂಧಿಸಿ ದಂತೆ ನ್ಯಾಯಾಲಯ ಆರೋಪಿಗಳಿಗೆ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.ಸೋಮವಾರಪೇಟೆಯ ಮಾನಸ ಹಾಲ್‍ನಲ್ಲಿ ತಾ. 8.9.2011ರ ರಾತ್ರಿ 10 ಗಂಟೆ ಸುಮಾರಿಗೆ ಗೌರಿ ಗಣೇಶ ಮೂರ್ತಿಯ ವಿಸರ್ಜನ ಮೇರವಣಿಗೆ ಸಂದರ್ಭ ಆರೋಪಿಗಳಾದ ಹಾನಗಲ್ಲು ಗ್ರಾಮದ ಹೆಚ್.ಎಂ. ಜಗದೀಶ, ವಿಲ್ಸನ್ ಸಿಕ್ವೇರ, ಎನ್.ಡಿ. ಸಂಪತ್, ರಾಮಕೃಷ್ಣ, ನಂದಕುಮಾರ್ ಹಾಗೂ ಅಪ್ಪುಣಿ ಇವರುಗಳು ಅಕ್ರಮ ಕೂಟ ಕಟ್ಟಿಕೊಂಡು ಆಲೆಕಟ್ಟೆ ನಿವಾಸಿ ಕೀರ್ತಿ ಎಂಬಾತನ ಮೇಲೆ ಹಲ್ಲೆ ನಡೆಸಿ ಜಾತಿ ನಿಂದನೆ ಮಾಡಿದ್ದ ಹಿನ್ನೆಲೆಯಲ್ಲಿ ಸೋಮವಾರಪೇಟೆ ಪೊಲೀಸರು ಆರೋಪಿಗಳ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಹಣ ಪಟ್ಟಿ ಸಲ್ಲಿಸಿದ್ದರು.
ವಿಚಾರಣೆ ನಡೆಸಿದ ಪ್ರಧಾನ ಜಿಲ್ಲಾ ಮತ್ತು ಸೆಷೆನ್ಸ್ ನ್ಯಾಯಾ ಧೀಶರಾದ ಆರ್.ಕೆ.ಜಿ. ಎಂ.ಎಂ. ಮಹಾಸ್ವಾಮೀಜಿಯವರು ತೀರ್ಪು ಪ್ರಕಟಿಸಿದ್ದು, ಆರೋಪಿಗಳಿಗೆ ಜಾತಿ ನಿಂದನೆ ಅಪರಾಧಕ್ಕಾಗಿ ನಾಲ್ಕು ವರ್ಷಗಳ ಸಜೆ, ತಲಾ 10 ಸಾವಿರ ರೂಪಾಯಿ ದಂಡ, ಅಕ್ರಮ ಕೂಟ ಕಟ್ಟಿಕೊಂಡ ಅಪರಾಧಕ್ಕಾಗಿ 6 ತಿಂಗಳ ಸಜೆ, ತಲಾ 1 ಸಾವಿರ ದಂಡ, ಮಾರಾಕಾಯುಧಗಳಿಂದ ಹಲ್ಲೆ ನಡೆಸಿದ ಅಪರಾಧಕ್ಕಾಗಿ ಮೂರು ವರ್ಷ ಸಜೆ, ತಲಾ 5 ಸಾವಿರ ದಂಡ, ಗಾಯಾಳುವಿಗೆ ತೀವ್ರ ಹಲ್ಲೆ ನಡೆಸಿ ಗಾಯಗೊಳಿಸಿದ ಅಪರಾಧಕ್ಕಾಗಿ ಒಂದು ವರ್ಷ ಸಜೆ, ತಲಾ 3 ಸಾವಿರ ದಂಡ ವಿಧಿಸಿದ್ದು, ಈ ಎಲ್ಲಾ ಶಿಕ್ಷೆಯನ್ನು ಏಕಕಾಲಕ್ಕೆ ಅನುಭವಿಸು ವಂತೆ ಸೂಚಿಸಿದ್ದಾರೆ.
ವಸೂಲಾಗುವ 1,14,000 ರೂ. ದಂಡದಲ್ಲಿ ರೂ. 1 ಲಕ್ಷವನ್ನು ಗಾಯಾಳು ಕೀರ್ತಿಗೆ ಪರಿಹಾರವಾಗಿ ನೀಡುವಂತೆ ಆದೇಶಿಸಿದ್ದಾರೆ.
(ಮೊದಲ ಪುಟದಿಂದ) *ನಾಪೋಕ್ಲುವಿನ ಕುಂಬಳದಾಳು ಗ್ರಾಮದಲ್ಲಿ ತಾ. 27.9.2011 ರಂದು ಡಿ.ಎಸ್. ಮಧುರಾಜ್ ಇವರ ಮೇಲೆ ಹಲ್ಲೆ ನಡೆಸಿ ಕೊಲೆ ಯತ್ನ ನಡೆಸಿದ್ದ ಆರೋಪದ ಹಿನ್ನೆಲೆ ಆರೋಪಿಗಳಾದ ಡಿ. ಗಣಪತಿ, ಕೊಲೆ ಯತ್ನಕ್ಕೆ ಪ್ರಚೋದನೆ ನೀಡಿದ್ದ ಆತನ ಪತ್ನಿ ಡಿ.ಜಿ. ಕಲಾವತಿ ಇವರುಗಳಿಗೂ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಶಿಕ್ಷೆ ವಿಧಿಸಿದ್ದು, ಕೊಲೆ ಯತ್ನದ ಅಪರಾಧಕ್ಕಾಗಿ ಗಣಪತಿಗೆ 6 ವರ್ಷ ಸಜೆ, 10 ಸಾವಿರ ರೂ. ದಂಡ ಹಾಗೂ ಕೊಲೆಯತ್ನಕ್ಕೆ ಕುಮ್ಮಕ್ಕು ನೀಡಿದ ಅಪರಾಧಕ್ಕಾಗಿ ಕಲಾವತಿಗೆ 6 ತಿಂಗಳ ಸಜೆ ಮತ್ತು 1 ಸಾವಿರ ದಂಡ ವಿಧಿಸಿ, ವಸೂಲಾಗುವ ದಂಡದಲ್ಲಿ 10 ಸಾವಿರವನ್ನು ಮಧುರಾಜ್ ಅವರಿಗೆ ನೀಡುವಂತೆ ಆದೇಶಿಸಿ ನ್ಯಾಯಾಧೀಶರಾದ ಆರ್.ಕೆ.ಜಿ.ಎಂ.ಎಂ. ಮಹಾಸ್ವಾಮೀಜಿಯವರು ತೀರ್ಪು ನೀಡಿದ್ದಾರೆ.
ಮೇಲಿನ ಎರಡು ಪ್ರಕರಣಗಳಲ್ಲೂ ಸರಕಾರದ ಪರ ಸರಕಾರಿ ಅಭಿಯೋಜಕರಾದ ಎ.ಪಿ. ಫಿರೋಜ್ ಖಾನ್ ವಾದ ಮಂಡಿಸಿದರು.
*ಹೊಸ್ಕೇರಿ ಗ್ರಾಮದ ಲಿಂಗರಾಜು ಎಂಬವರ ಪುತ್ರಿ ಸುಜ್ಯೋತಿ ಎಂಬಾಕೆಗೆ ವರದಕ್ಷಿಣೆ ಕಿರುಕುಳ ನೀಡಿ ವಿಷವುಣಿಸಿ ಕೊಲೆ ಮಾಡಿದ್ದ ಆರೋಪದಡಿ ಬಂಧಿಸಲ್ಪಟ್ಟಿದ್ದ ಭಾಗಮಂಡಲದ ಶರತ್ ಕುಮಾರ್ ಎಂಬಾತನಿಗೆ ಒಂದನೇ ಅಧಿಕ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಶಿಕ್ಷೆ ವಿಧಿಸಿದೆ.
ಕಿರುಕುಳ ಹಾಗೂ ದೌರ್ಜನ್ಯ ಎಸಗಿದ ಅಪರಾಧಕ್ಕಾಗಿ ಮೂರು ವರ್ಷಗಳ ಕಠಿಣ ಸಜೆ ಮತ್ತು 10 ಸಾವಿರ ದಂಡ, ಆಕೆಯನ್ನು ವಿಷವುಣಿಸಿ ಹತ್ಯೆ ಮಾಡಿದ ಅಪರಾಧಕ್ಕಾಗಿ 6 ವರ್ಷಗಳ ಕಠಿಣ ಸಜೆ ಮತ್ತು 15 ಸಾವಿರ ದಂಡ ವಿಧಿಸಿದ್ದು, ವಸೂಲಿಯಾಗುವ ದಂಡದ ಹಣದಲ್ಲಿ 20 ಸಾವಿರ ರೂ.ಗಳನ್ನು ಮೃತಳ ತಂದೆ ಲಿಂಗರಾಜು ಅವರಿಗೆ ಪರಿಹಾರವಾಗಿ ನೀಡಲು ಸೂಚಿಸಿ ಒಂದನೇ ಅಧಿಕ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶರಾದ ಪವನೇಶ್ ಅವರು ತೀರ್ಪು ನೀಡಿದ್ದಾರೆ.
ಸರಕಾರದ ಪರ ಸರಕಾರಿ ಅಭಿಯೋಜಕರಾದ ಎಂ. ಕೃಷ್ಣವೇಣಿ ವಾದ ಮಂಡಿಸಿದರು.