ಸೋಮವಾರಪೇಟೆ,ಆ.3: ಕೊಡಗು ಜಿಲ್ಲಾ ವಾಣಿಜ್ಯೋದ್ಯಮಿಗಳ ಬ್ಯಾಂಕ್ ವತಿಯಿಂದ ಸದಸ್ಯರುಗಳಿಗೆ ವಾರಕ್ಕೊಮ್ಮೆ ಸೋಮವಾರಪೇಟೆಯಲ್ಲಿಯೇ ಸಾಲ ಸೌಲಭ್ಯ ವಿತರಿಸಲು ಕ್ರಮ ಕೈಗೊಳ್ಳಲಾಗುವದು ಎಂದು ಕೊಡಗು ಜಿಲ್ಲಾ ವಾಣಿಜ್ಯೋದ್ಯಮಿಗಳ ಬ್ಯಾಂಕ್ ಅಧ್ಯಕ್ಷ ಕೆ.ಎಂ.ಬಿ. ಗಣೇಶ್ ಹೇಳಿದರು.ಇಲ್ಲಿನ ಮಡಿಕೇರಿ ರಸ್ತೆಯಲ್ಲಿರುವ ಕಟ್ಟಡದಲ್ಲಿ ನೂತನವಾಗಿ ತೆರೆಯಲಾಗಿರುವ ಚೇಂಬರ್ ಆಫ್ ಕಾಮರ್ಸ್ ಸ್ಥಾನೀಯ ಸಮಿತಿಯ ಕಚೇರಿ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
(ಮೊದಲ ಪುಟದಿಂದ) ವರ್ತಕರು ಸಂಘಟಿತರಾದಲ್ಲಿ ಮಾತ್ರ ಸಂಘಟನೆಯನ್ನು ಬಲಿಷ್ಠಗೊಳಿಸಲು ಸಾಧ್ಯ. ಜಿಲ್ಲೆಯಲ್ಲಿ ವರ್ತಕರ ಸಂಘವು ಬಲಿಷ್ಠವಾಗಿದ್ದು, ಇನ್ನೂ ಹೆಚ್ಚಿನ ಸದಸ್ಯತ್ವವನ್ನು ಪಡೆದುಕೊಂಡು ಸಂಘದ ಬೆಳವಣಿಗೆಗೆ ಶ್ರಮಿಸಬೇಕೆಂದು ಕರೆನೀಡಿದ ಅವರು, ಈಗಾಗಲೇ ಕೊಡ್ಲಿಪೇಟೆ ಮತ್ತು ಶನಿವಾರಸಂತೆಗೆ ವಾರಕ್ಕೊಮ್ಮೆ ಬ್ಯಾಂಕ್ ಅಧಿಕಾರಿಗಳು ಆಗಮಿಸಿ ಸ್ಥಳೀಯವಾಗಿಯೇ ಸದಸ್ಯರುಗಳಿಗೆ ಸಾಲ ನೀಡುತ್ತಿದ್ದಾರೆ. ಇದೇ ಮಾದರಿಯಲ್ಲಿ ಸೋಮವಾರಪೇಟೆಯಲ್ಲೂ ವಾರಕ್ಕೊಮ್ಮೆ ಸಾಲ ವಿತರಿಸಲು ಕ್ರಮ ವಹಿಸುವದಾಗಿ ಭರವಸೆ ನೀಡಿದರು.
ನೂತನ ಕಚೇರಿಯನ್ನು ಉದ್ಘಾಟಿಸಿದ ಪಟ್ಟಣ ಪಂಚಾಯಿತಿ ಅಧ್ಯಕ್ಷೆ ವಿಜಯಲಕ್ಷ್ಮೀ ಸುರೇಶ್ ಮಾತನಾಡಿ, ಪಟ್ಟಣದಲ್ಲಿ ಪ್ಲಾಸ್ಟಿಕ್ ಬಳಕೆಯನ್ನು ಸಂಪೂರ್ಣ ನಿಷೇಧಿಸಲಾಗಿದ್ದು, ವರ್ತಕರು ಸಹಕರಿಸಬೇಕು. ತ್ಯಾಜ್ಯವನ್ನು ಎಲ್ಲೆಂದರಲ್ಲಿ ಸುರಿಯದಂತೆ ಎಚ್ಚರಿಕೆ ವಹಿಸಬೇಕು. ವರ್ತಕರು ತಮ್ಮ ಸಮಸ್ಯೆ ಅಥವಾ ಸೂಕ್ತ ಸಲಹೆ ಸೂಚನೆಗಳಿದ್ದಲ್ಲಿ ಪರಸ್ಪರ ಚರ್ಚಿಸಿ ಪರಿಹರಿಸಿಕೊಳ್ಳುವತ್ತ ಗಮನ ಹರಿಸಬೇಕೆಂದು ಮನವಿ ಮಾಡಿದರು.ಠಾಣಾಧಿಕಾರಿ ಎಂ. ಶಿವಣ್ಣ ಮಾತನಾಡಿ, ವರ್ತಕರು ತಮ್ಮ ಅಂಗಡಿಗಳಲ್ಲಿ ವ್ಯಾಪಾರ ಮಾಡುವ ಸಂದರ್ಭ ಲಾಕರ್ಗಳ ಬಗ್ಗೆ ಜಾಗ್ರತೆ ವಹಿಸಬೇಕು. ಅಂಗಡಿಗಳಿಗೆ ಸಿಸಿ ಕ್ಯಾಮೆರಾ ಅಳವಡಿಸಬೇಕು. ಅಂಗಡಿಗಳ ಮುಂಭಾಗ ಅಡ್ಡಾದಿಡ್ಡಿ ವಾಹನ ನಿಲುಗಡೆಗೆ ಅವಕಾಶ ನೀಡಬಾರದು ಎಂದು ಸಲಹೆ ನೀಡಿದರು. ಅಧ್ಯಕ್ಷತೆಯನ್ನು ವಹಿಸಿದ್ದ ಸ್ಥಾನೀಯ ಸಮಿತಿ ಅಧ್ಯಕ್ಷರಾದ ಮನುಕುಮಾರ್ ರೈ ಮಾತನಾಡಿ, ಚೇಂಬರ್ ಆಫ್ ಕಾಮರ್ಸ್ ಜನಸ್ನೇಹಿಯಾಗಿದ್ದು, ಸಮಾಜ ಮುಖಿ ಕಾರ್ಯಚಟುವಟಿಕೆಯಲ್ಲೂ ತೊಡಗಿಸಿಕೊಂಡಿದೆ. ಸೋಮವಾರಪೇಟೆ ಭಾಗದಲ್ಲಿ ಪ್ರವಾಸೋದ್ಯಮವನ್ನು ಇನ್ನಷ್ಟು ಅಭಿವೃದ್ಧಿಗೊಳಿಸಬೇಕಾಗಿದೆ ಎಂದರಲ್ಲದೆ, ಕಚೇರಿಗೆ ಸ್ವಂತ ನಿವೇಶನ ಖರೀದಿಸುವ ಚಿಂತನೆಯಿದೆ ಎಂದರು.
ವೇದಿಕೆಯಲ್ಲಿ ನಗರ ಪತ್ರಕರ್ತರ ಸಂಘದ ಅಧ್ಯಕ್ಷ ಡಿ.ಪಿ ಲೋಕೇಶ್, ಪಟ್ಟಣ ಪಂಚಾಯಿತಿ ಮಾಜಿ ಸದಸ್ಯ ಬಿ. ಸಂಜೀವ ಉಪಸ್ಥಿತರಿದ್ದರು. ಪ್ರಮುಖರಾದ ವೀರರಾಜು, ಸದಾನಂದ್, ತಿಮ್ಮಶೆಟ್ಟಿ, ಜಿ.ಜೆ. ಗ್ರಾಫಿಕ್ಸ್ ಜಯೇಶ್ ಸೇರಿದಂತೆ ವರ್ತಕರುಗಳು ಭಾಗವಹಿಸಿದ್ದರು.