ಮಡಿಕೇರಿ, ಆ.3 : ಅರಣ್ಯ ಇಲಾಖೆ ಹಮ್ಮಿಕೊಂಡಿರುವ ‘ನೀರಿಗಾಗಿ ಅರಣ್ಯ’ ಎನ್ನುವ ಕಾರ್ಯಕ್ರಮಕ್ಕೆ ಪÀÇರಕವಾಗಿ ಡೆಲ್ಲಿ ಮೂಲದ ಟಫ್ ಮ್ಯಾನ್ ಇಂಡಿಯಾ ಸಂಸ್ಥೆ ಆ.5 ರಂದು ಕೊಡಗು ಜಿಲ್ಲೆಯಲ್ಲಿ ವಿಶಿಷ್ಟವಾದ ‘ಟಫ್‍ಮ್ಯಾನ್ ಮಾನ್ಸೂನ್ ಅಲ್ಟ್ರಾ-ಕೂರ್ಗ್ ಮೆರಥಾನ್” ಓಟ ಆಯೋಜಿಸಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಟಫ್‍ಮ್ಯಾನ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಸಂಜಯ್ ಮಂಗಲ್, ಹಾರಂಗಿ ಹಿನ್ನೀರು ಪ್ರದೇಶದಿಂದ ಏಳನೇ ಹೊಸಕೋಟೆ ಸಮೀಪದ ಎಲ್‍ವಿಟಿ ಎಸ್ಟೇಟ್ ವರೆಗೆ 10 ಮಾರ್ಗಗಳ ಮೂಲಕ 80 ಕಿ.ಮೀ. ದೂರದ ಓಟದ ಸ್ಪರ್ಧೆ ನಡೆಯಲಿದೆ ಎಂದರು. 50 ಕಿ.ಮೀ. ದೂರದ 5, 30 ಕಿ.ಮೀ. ದೂರದ 3 ಹಾಗೂ 20 ಕಿ.ಮೀ ದೂರದ 2 ಮಾರ್ಗಗ ಳನ್ನು ಗುರುತಿಸಲಾಗಿದೆ ಎಂದು ತಿಳಿಸಿದರು.

ಟಫ್‍ಮ್ಯಾನ್ ಸಂಸ್ಥೆ ಯುವ ಸಮೂಹದಲ್ಲಿ ಓಟ, ಸೈಕ್ಲಿಂಗ್ ಮತ್ತು ಈಜುಗಾರಿಕೆಯ ಬಗ್ಗೆ ಆಸಕ್ತಿಯನ್ನು ಮೂಡಿಸುವ ನಿಟ್ಟಿನಲ್ಲಿ ಶ್ರಮಿಸುತ್ತಿರುವ ಕ್ರೀಡಾ ಸಂಸ್ಥೆಯಾಗಿದೆ. ಕೊಡಗಿನ ಹಸಿರ ಪರಿಸರದ ಮೂಲಕ ಜಲಮೂಲಗಳನ್ನು ಸಂರಕ್ಷಿಸುವ ನಿಟ್ಟಿನಲ್ಲಿ ಜನಜಾಗೃತಿ ಮೂಡಿಸುತ್ತಿರುವ ಅರಣ್ಯ ಇಲಾಖೆಯ ಸಹಕಾರದೊಂದಿಗೆ ಮೆರಥಾನ್ ನಡೆಸುತ್ತಿರುವದಾಗಿ ತಿಳಿಸಿದರು.

ಟಫ್‍ಮ್ಯಾನ್ ಎನ್ನುವದು ಒಂದು ಕ್ರೀಡಾ ಸಮುದಾಯವಾಗಿದ್ದು, ಇದರಲ್ಲಿ ಕ್ರೀಡೆಯ ಬಗ್ಗೆ ಆಸಕ್ತರಾದ ಪ್ರತಿಯೊಬ್ಬರು ಪಾಲ್ಗೊಳ್ಳಬಹುದಾಗಿದೆ. ಸಂಸ್ಥೆಯ ಮೂಲಕ ಆಯೋಜಿಸುವ ಕ್ರೀಡಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅತ್ಯುತ್ತಮ ಪ್ರದರ್ಶನ ತೋರುವವರಿಗೆ ಟಫ್‍ಮ್ಯಾನ್ ಕಪ್‍ನ್ನು ಪ್ರದಾನ ಮಾಡಲಾಗುತ್ತದೆ ಎಂದರು.

ಟಫ್‍ಮ್ಯಾನ್ ಸಂಸ್ಥೆ ಪ್ರಮುಖವಾಗಿ ಅಲ್ಟ್ರಾ ಟಫ್‍ಮ್ಯಾನ್, ಟಫ್‍ಮ್ಯಾನ್, ಹಾಫ್ ಟಫ್‍ಮ್ಯಾನ್, ಇನ್‍ಸ್ಪಾಯರಿಂಗ್ ಟಫ್‍ಮ್ಯಾನ್ ಎನ್ನುವ ಕ್ರೀಡಾ ಕಾರ್ಯಕ್ರಮಗಳನ್ನು ರಾಷ್ಟ್ರದ ವಿವಿಧೆಡೆಗಳಲ್ಲಿನ ಸುಂದರ ಪರಿಸರದಲ್ಲಿ ಆಯೋಜಿಸುತ್ತ್ತಿದೆ. ಇಲ್ಲಿಯವರೆಗೆ ಸಂಸ್ಥೆ 6 ಅಲ್ಟ್ರಾ ಮೆರಥಾನ್‍ಗಳನ್ನು ಶಿಮ್ಲಾ, ಲಡಾಕ್, ಕೊಡಗು, ಗೋವಾ, ಜೈಸಲ್ಮೇರ್, ಮನಾಲಿ ಮೊದಲಾದೆಡೆಗಳಲ್ಲಿ ಆಯೋಜಿಸಿದೆ. ಸಂಸ್ಥೆಯ ಮೂಲಕ ಓಟ, ಸೈಕ್ಲಿಂಗ್‍ಗಳನ್ನು ಮುಂಗಾರಿನ ಅವಧಿಯಲ್ಲಿ, ಸಮುದ್ರ ಕಿನಾರೆಗಳಲ್ಲಿ, ಮರಳುಗಾಡುಗಳಲ್ಲಿ ನಡೆಸುವ ಮೂಲಕ ಕ್ರೀಡಾಪಟುಗಳ ಸಾಮಥ್ರ್ಯ ಬೆಳಕಿಗೆ ತಂದಿದೆ ಎಂದರು.

ಗೋಷ್ಠಿಯಲ್ಲಿ ಸಂಸ್ಥೆಯ ಪ್ರಮುಖರಾದ ಜೈಮಂಗಲ್, ಸಂಜೀವ್ ಹಾಗೂ ಇಂದ್ರಪಾಲ್ ಉಪಸ್ಥಿತರಿದ್ದರು.