ಸುಂಟಿಕೊಪ್ಪ, ಆ. 2: ರಾಜ್ಯ ಕಾಂಗ್ರೆಸ್ ಸರಕಾರ ಕಳೆದ 4 ವರ್ಷದಲ್ಲಿ ಕೊಡಗು ಜಿಲ್ಲೆಗೆ 200 ಕೋಟಿ ರೂ. ಪ್ಯಾಕೇಜ್ ಬಿಡುಗಡೆ ಮಾಡಿದೆ ಎಂಬದು ಶುದ್ಧ ಸುಳ್ಳು ಕೇವಲ 41 ಕೋಟಿ ಮಾತ್ರ ಜಿಲ್ಲೆಗೆ ಬಿಡುಗಡೆಯಾಗಿದೆ ಎಂದು ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಹೇಳಿದರು.ಇಲ್ಲಿನ ಮಂಜನಾಥಯ್ಯ ಮೀನಾಕ್ಷಮ್ಮ ಕಲ್ಯಾಣ ಮಂಟಪದಲ್ಲಿ ಸುಂಟಿಕೊಪ್ಪ ನಗರ ಬಿಜೆಪಿ ವಿಸ್ತಾರಕ್ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸಿದ್ದರಾಮಯ್ಯ ಅವರ ಸರಕಾರ ಅಸ್ತಿತ್ವಕ್ಕೆ ಬಂದ ನಂತರ ಬರಗಾಲ ಪ್ರಾಪ್ತಿಯಾಗಿದ್ದು, ಈ ಸರಕಾರದ ವೈಫಲ್ಯವನ್ನು ಜನತೆಗೆ ತಲುಪಿಸುವ ಕೆಲಸವನ್ನು ಬಿಜೆಪಿ ಕಾರ್ಯಕರ್ತರು ಮಾಡಬೇಕು ಎಂದರು. ವೀರಾಜಪೇಟೆ ಕ್ಷೇತ್ರದ ಶಾಸಕ ಕೆ.ಜಿ. ಬೋಪಯ್ಯ ಮಾತನಾಡಿ, ಮೊದಲು ದೇಶ ನಂತರ ಪಕ್ಷ ಆನಂತರ ನಾನು ಎಂಬುದನ್ನು ಪ್ರತಿಯೊಬ್ಬರು ಮನದಟ್ಟು ಮಾಡಿಕೊಳ್ಳಬೇಕೆಂದು ಹೇಳಿದರು.

ಜಿಲ್ಲಾ ಬಿಜೆಪಿ ಅಧ್ಯಕ್ಷ ಬಿ.ಬಿ.ಭಾರತೀಶ್ ಮಾತನಾಡಿ ವಿಸ್ತಾರಕ್ ಕೆಲಸವನ್ನು ಪ್ರತಿಯೊಬ್ಬ ವಿಸ್ತಾರಕರೂ ಪ್ರಾಮಾಣಿಕವಾಗಿ ನಿರ್ವಹಿಸಿ ಮಾಹಿತಿ ನೀಡಬೇಕು ಕೇಂದ್ರ ಸರಕಾರದ ಯೋಜನೆಗಳನ್ನು ಮನೆ ಮನೆಗೆ ತೆರಳಿ ಮಾಹಿತಿ ನೀಡಬೇಕು ಎಂದರು.

ಕೊಡಗು ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್ ಮಾತನಾಡಿದರು.

ಅಧ್ಯಕ್ಷತೆಯನ್ನು ನಗರ ಬಿಜೆಪಿ ಅಧ್ಯಕ್ಷ ಪಿ.ಆರ್. ಸುನಿಲ್‍ಕುಮಾರ್ ವಹಿಸಿದ್ದರು.

ಮಡಿಕೇರಿ ಕ್ಷೇತ್ರ ಬಿಜೆಪಿ ಅಧ್ಯಕ್ಷ ಎಂ.ಎನ್. ಕೊಮಾರಪ್ಪ, ತಾಲೂಕು ಪಂಚಾಯಿತಿ ಸದಸ್ಯೆ ವಿಮಲಾವತಿ, ಹೆಚ್.ಡಿ. ಮಣಿ, ಹೋಬಳಿ ಅಧ್ಯಕ್ಷ ದಾಸಂಡ ರಮೇಶ್ ಚಂಗಪ್ಪ, ನಾಗೇಶ್, ರಮೇಶ್ ರೈ, ಶಂಕರನಾರಾಯಣ, ಕುಶಾಲನಗರ ಬಿಜೆಪಿ ಅಧ್ಯಕ್ಷ ಶಿವಾಜಿ ರಾವ್ ಹಾಗೂ ಎಂ.ಡಿ. ಕೃಷ್ಣಪ್ಪ ಉಪಸ್ಥಿತರಿದ್ದರು.