ಮಡಿಕೇರಿ, ಆ. 3: ಕೊಡಗಿನ ಸೂರ್ಲಬ್ಬಿ, ತಿತಿಮತಿ, ಶ್ರೀಮಂಗಲ ಮುಂತಾದೆಡೆಗಳಲ್ಲಿ ಖಾಸಗಿ ಸಂಸ್ಥೆಗಳಿಂದ ಗ್ರಾಮೀಣ ಜನತೆಗೆ ಸಮರ್ಪಕವಾಗಿ ಆರೋಗ್ಯ ಸೇವೆ ಕಲ್ಪಿಸುವಲ್ಲಿ ನಿರ್ಲಕ್ಷ್ಯದ ಆರೋಪ ಕೇಳಿ ಬರುತ್ತಿರುವ ಬೆನ್ನಲ್ಲೇ, ಜಿಲ್ಲೆಯಾದ್ಯಂತ ಇರುವ ಸರಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಸಿಬ್ಬಂದಿಗಳಿಗೆ ಸರಿಯಾಗಿ ವೇತನ ನೀಡದೆ ಕಿರುಕುಳ ನೀಡುತ್ತಿರುವ ಸಂಗತಿ ಬಹಿರಂಗಗೊಂಡಿದೆ.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧೀನದಲ್ಲಿ ಕೊಡಗಿನ 38ಕ್ಕೂ ಅಧಿಕ ಪ್ರಾಥಮಿಕ ಆರೋಗ್ಯ
(ಮೊದಲ ಪುಟದಿಂದ) ಕೇಂದ್ರಗಳಿದ್ದು, ಒಂದುನೂರ ತೊಂಬತ್ತಾರು ಉಪಕೇಂದ್ರಗಳ ಸಹಿತ ಪ್ರತಿ ಗ್ರಾಮಗಳನ್ನು ನೋಡಿಕೊಳ್ಳಲು ಕಿರಿಯ ಆರೋಗ್ಯ ಸಹಾಯಕರು ಕಾರ್ಯನಿರ್ವಹಿಸಬೇಕಿದೆ.
ಗುಡ್ಡ ಬೆಟ್ಟಗಳಿಂದ ಕೂಡಿರುವ ಇಂತಹ ಹಳ್ಳಿಗಳಲ್ಲಿ ಕೊಡಗಿನಾದ್ಯಂತ ಮಹಿಳೆಯರು, ವಯಸ್ಕರು, ಬಾಣಂತಿಯರು, ಗರ್ಭಿಣಿಯರು, ಶಿಶುಗಳ ಸಹಿತ ಪ್ರಾಣ ರಕ್ಷಣೆಯೊಂದಿಗೆ ಆರೋಗ್ಯದ ಬಗ್ಗೆ ಕಿರಿಯ ಆರೋಗ್ಯ ಸಹಾಯಕರು, ಪುರುಷರು ಮತ್ತು ಮಹಿಳಾ ಸಿಬ್ಬಂದಿ ಶ್ರಮಿಸುತ್ತಿದ್ದಾರೆ.
ಇಂತಹ ಸಿಬ್ಬಂದಿ ಪ್ರತಿ ಗ್ರಾಮಗಳಲ್ಲಿರುವ ಅಂಗನವಾಡಿ ಕೇಂದ್ರಗಳು, ಶಾಲಾ ಪರಿಸರ, ಮನೆ ಮನೆಗಳಲ್ಲಿ ಆರೋಗ್ಯ ಸಂಬಂಧ ದೂರುಗಳು ಬಾರದಂತೆ ನಿತ್ಯ ಕರ್ತವ್ಯ ನಿರ್ವಹಿಸುವಂತೆ ಸರಕಾರದ ಕಟ್ಟಪ್ಪಣೆಯೊಂದಿಗೆ ಅನೇಕ ರೀತಿಯ ಯೋಜನೆಗಳ ಅನುಷ್ಠಾನಕ್ಕೆ ಸೂಚಿಸಲಾಗಿದೆ.
ಅಧಿಕಾರಿಗಳ ನಿರ್ಲಕ್ಷ್ಯ: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿಗಳ ತಂಡ, ತಾಲೂಕು ಹಂತದಲ್ಲಿ ಆರೋಗ್ಯ ಅಧಿಕಾರಿಗಳು ಮತ್ತು ತಂಡ ಸೇರಿದಂತೆ ಪ್ರತಿ ಹಂತದಲ್ಲಿ ಸಂಪರ್ಕ ಸೇತುವಿನಂತೆ ಸರಕಾರದಿಂದ ವ್ಯವಸ್ಥೆ ಕಲ್ಪಿಸಲಾಗಿದೆಯಾದರೂ ಜವಾಬ್ದಾರಿಯುತರ ನಿರ್ಲಕ್ಷ್ಯ ಎಲ್ಲೆಡೆ ಗೋಚರಿಸತೊಡಗಿದೆ.
ಔಷಧೋಪಚಾರ ಕೊರತೆ: ಬಹುತೇಕ ಆರೋಗ್ಯ ಕೇಂದ್ರಗಳಲ್ಲಿ ಜನಸಾಮಾನ್ಯರಿಗೆ ತುರ್ತು ಚಿಕಿತ್ಸೆಗೆ ಔಷಧಿಗಳ ಕೊರತೆಯಾದರೆ, ಸಕಾಲದಲ್ಲಿ ಸಿಬ್ಬಂದಿಗಳ ಕೊರತೆಯಿಂದ ರೋಗಿಗಳು ಸೂಕ್ತ ಚಿಕಿತ್ಸೆ ಲಭಿಸದೆ ಬಳಲುತ್ತಿರುವ ಆರೋಪವಿದೆ. ಇನ್ನು ನಿರ್ದಿಷ್ಟವಾಗಿ ಒಂದು ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಯಲ್ಲಿ ಕೆಲಸ ನಿರ್ವಹಿಸಲು ಇಂತಹವರಿಗೆ ತೊಂದರೆಯಾಗಿದೆ.
ಆರೆಂಟು ಗ್ರಾಮಗಳಿಗೆ ಒಬ್ಬರು: ಈ ರೀತಿ ಪ್ರತಿ ಗ್ರಾಮಗಳನ್ನು ಒಬ್ಬರು ಕಿರಿಯ ಆರೋಗ್ಯ ಸಹಾಯಕರು ಗಮನಿಸಬೇಕಿದ್ದರೂ, ಅನೇಕ ಕಡೆಗಳಲ್ಲಿ ಸಿಬ್ಬಂದಿಗಳನ್ನು ನೇಮಿಸದೆ, ಆರೆಂಟು ಗ್ರಾಮಗಳನ್ನು ಒಬ್ಬರು ಸಿಬ್ಬಂದಿ ನೋಡಿಕೊಳ್ಳುವಂತೆ ತಾಲೂಕು ಆರೋಗ್ಯ ಅಧಿಕಾರಿಗಳು ಒತ್ತಡ ಹೇರುತ್ತಿರುವ ಅಂಶ ಬೆಳಕಿಗೆ ಬಂದಿದೆ. ಹೀಗಾಗಿ ಸುತ್ತಮುತ್ತಲಿನ ಹಳ್ಳಿಗಳಿಗೆ ಇರುವ ಓರ್ವ ಸಿಬ್ಬಂದಿಗೆ ಕನಿಷ್ಟ ವಾರಕ್ಕೊಮ್ಮೆಯೂ ತಲಪಲು ಸಮಸ್ಯೆ ಎದುರಾಗಿದೆ.
ಸಂಬಳವಿಲ್ಲ...!: ಈ ರೀತಿ ಗ್ರಾಮೀಣ ಭಾಗಗಳಲ್ಲಿ ದುಡಿಯುತ್ತಿರುವ ಸಿಬ್ಬಂದಿಗಳಿಗೆ ಮಾಸಿಕ ವೇತನ ದೊರಕುತ್ತಿಲ್ಲವೆಂಬ ಸಾರ್ವತ್ರಿಕ ಆರೋಪ ಕೇಳಿಬರತೊಡಗಿದೆ. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿಗಳು, ಸಿಬ್ಬಂದಿಯ ಕೂಗಿಗೆ ಸ್ಪಂದಿಸುತ್ತಿಲ್ಲವಂತೆ. ಸರಕಾರ ಹಣ ಬಿಡುಗಡೆ ಮಾಡದಿದ್ದರೆ ನಾವೇನು ಮಾಡಲು ಆಗುವದಿಲ್ಲವೆಂದು ಕೈಚೆಲ್ಲುತ್ತಿದ್ದಾರಂತೆ.
ಇನ್ನು ಮೂರು ತಿಂಗಳಿಗೊಮ್ಮೆ ಅಥವಾ ನಾಲ್ಕಾರು ತಿಂಗಳಿಗೆ ಒಮ್ಮೊಮ್ಮೆ ಒಂದೆರಡು ತಿಂಗಳ ವೇತನ ನೀಡಿ, ‘ನೀವು ಸಂಬಳಕ್ಕೆ ಇರುವದೆ? ಎಂದು ಆರೋಗ್ಯ ಇಲಾಖೆ ಕಚೇರಿ ಮಂದಿ ಹಂಗಿಸುತ್ತಾರೆಂದು ಕೆಲವರು ‘ಶಕ್ತಿ’ಯೊಂದಿಗೆ ನೋವು ಹೊರಗೆಡವಿದ್ದಾರೆ.
ಒಟ್ಟಿನಲ್ಲಿ ಆರೋಗ್ಯ ಇಲಾಖೆಯಲ್ಲಿ ಎರಡು ದಶಕಗಳಿಗೂ ಅಧಿಕ ವರ್ಷಗಳಿಂದ ದುಡಿಯುತ್ತಿರುವ ಗ್ರಾಮೀಣ ಸಿಬ್ಬಂದಿಗೆ ಮಾಸಿಕ ವೇತನ ನೀಡದೆ ಕಿರುಕುಳ ನೀಡುತ್ತಿರುವ ಇಲಾಖಾ ಕಚೇರಿ ಅಧಿಕಾರಿಗಳು, ಖಾಸಗಿ ಸಂಸ್ಥೆಗಳ ಮಂದಿಗೆ ಲಕ್ಷಗಟ್ಟಲೆ ಮಾಸಿಕ ಹಣ ಕಲ್ಪಿಸಿ ಕೈಬಿಸಿ ಮಾಡಿಕೊಳ್ಳುತ್ತಿದ್ದಾರೆ ಎಂಬ ಅಸಮಾಧಾನ ಪ್ರಾಮಾಣಿಕ ನೆಲೆಯಲ್ಲಿ ಶ್ರಮಿಸುತ್ತಿರುವ ಮಂದಿಯಲ್ಲಿದೆ.
ಅಲ್ಲದೆ, ಪ್ರತಿ ತಿಂಗಳು ವೇತನ ನೀಡದೆ, ಆರು- ಮೂರು ತಿಂಗಳಿಗೊಮ್ಮೆ ನೀಡುವದರಿಂದ ತಮ್ಮ ಮಕ್ಕಳ ವಿದ್ಯಾಭ್ಯಾಸ, ಕುಟುಂಬ ನಿರ್ವಹಣೆ, ಬ್ಯಾಂಕ್ ಸಾಲ ಇತ್ಯಾದಿಗೆ ತೊಂದರೆಯಾಗಿ ಆರೋಗ್ಯ ಸಹಾಯಕರ ಸಹಿತ ಇಲಾಖೆಯ ನೌಕರರು ನೆಮ್ಮದಿ ಕಳೆದುಕೊಂಡಿರುವದು ಸತ್ಯ. ಇತ್ತ ಜಿ.ಪಂ., ತಾ.ಪಂ. ಸೇರಿದಂತೆ ಜನಪ್ರತಿನಿಧಿಗಳು ಎಚ್ಚೆತ್ತುಕೊಳ್ಳಬೇಕಿದೆ. -ಶ್ರೀಸುತ.