ಮಡಿಕೇರಿ, ಆ.3 : ಕಕ್ಕಬ್ಬೆಯ ಪಾಡಿ ಶ್ರೀ ಇಗ್ಗುತ್ತಪ್ಪ ದೇವರಕಾಡಿನ ಸುಮಾರು 121 ಎಕರೆಯಷ್ಟು ಪ್ರದೇಶ ಅತಿಕ್ರಮಣವಾಗಿದ್ದು, ಇದನ್ನು ತೆರವುಗೊಳಿಸಬೇಕೆಂದು ಒತ್ತಾಯಿಸಿ ಪಾಡಿ ಶ್ರೀ ಇಗ್ಗುತ್ತಪ್ಪ ಭಕ್ತ ಜನ ಸಂಘ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದೆ. ಮುಂದಿನ ಒಂದು ತಿಂಗಳ ಒಳಗೆ ಒತ್ತುವರಿಯನ್ನು ತೆರವುಗೊಳಿಸದಿದ್ದಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸುವದಾಗಿ ಸಂಘ ಎಚ್ಚರಿಕೆ ನೀಡಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ಕೆ. ಜೋಯಪ್ಪ, ಅತಿಕ್ರಮಣ ಪ್ರಕರಣದಲ್ಲಿ ಕಂದಾಯ ಇಲಾಖೆ ಶಾಮೀಲಾಗಿದೆಯೆಂದು ಆರೋಪಿಸಿದರು. 2007 ರಲ್ಲಿ ಸರ್ವೇ ಕಾರ್ಯ ನಡೆಸಿ ಒತ್ತುವರಿ ತೆರವಿಗೆ ಆದೇಶ ಹೊರಡಿಸಲಾಗಿತ್ತು. ಆದರೆ, ಇಲ್ಲಿಯವರೆಗೆ ಅತಿಕ್ರಮಣ ತೆರವಾಗಿಲ್ಲ. ಮುಜರಾಯಿ ಇಲಾಖೆಗೆ ಸೇರಿದ ಪಾಡಿ ಶ್ರೀ ಇಗ್ಗುತ್ತಪ್ಪ ದೇಗುಲದಲ್ಲಿ ಸಾಕಷ್ಟು ಆದಾಯ ಇದ್ದರು ದೇವಸ್ಥಾನದ ಜಾಗವನ್ನು ಸಂರಕ್ಷಿಸಲು ತಂತಿ ಬೇಲಿಯನ್ನು ಸಹ ಅಳವಡಿಸಿಲ್ಲ. ದೇವಸ್ಥಾನಕ್ಕೆ ಸೇರಿದ ಸರ್ವೇ ಸಂಖ್ಯೆ 217/2, 217/3, 175, 188, 30/1 ಹಾಗೂ 30/2 ರಲ್ಲಿ

(ಮೊದಲ ಪುಟದಿಂದ) ಸುಮಾರು 176 ಏಕರೆ ಪ್ರದೇಶ ದೇವಾಲಯಕ್ಕೆ ಸೇರಿದ್ದಾಗಿದೆ. ಈ ಭೂಮಿಯನ್ನು ಅತಿಕ್ರಮಣ ಮಾಡಿ, ಕಾಫಿ ಹಾಗೂ ಇತರ ಕೃಷಿಯನ್ನು ಮಾಡಿದ್ದಾರೆ. ದೇವರ ಕಾಡನ್ನು ಉಳಿಸಿ ಬೆಳೆಸಬೇಕಾದರೆ ಒತ್ತುವರಿ ತೆರವು ಕಾರ್ಯ ನಡೆಯಲೇಬೇಕು. ಇದಕ್ಕೆ ಜಿಲ್ಲಾಡಳಿತ ಮುಂದಾಗದಿದ್ದಲ್ಲಿ ಗ್ರಾಮಸ್ಥರೇ ತೆರವು ಕಾರ್ಯಾಚರಣೆ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಕೆಲವರಿಗೆ ಕಂದಾಯ ಇಲಾಖೆ ಆರ್‍ಟಿಸಿ ನೀಡಿದ್ದು, ಇದಕ್ಕೆ ತಕರಾರು ಅರ್ಜಿ ಸಲ್ಲಿಸಿದ್ದರು ಯಾವದೇ ಕ್ರಮ ಕೈಗೊಂಡಿಲ್ಲ. ದೇವಾಲಯಕ್ಕೆ ಸೇರಿದ ಇಷ್ಟೊಂದು ಜಾಗ ಒತ್ತುವರಿಯಾಗಿದ್ದರೂ ಅಧಿಕಾರಿಗಳು ಮೌನ ವಹಿಸಿರುವದನ್ನು ಗಮನಿಸಿದರೆ ಕಂದಾಯ ಇಲಾಖೆ ಶಾಮೀಲಾಗಿರುವ ಸಂಶಯವಿದೆ ಎಂದು ಜೋಯಪ್ಪ ಆರೋಪಿಸಿದರು.

ಅರ್ಹ ಫಲಾನುಭವಿಗಳಿಗೆ ಭೂಮಿ ನೀಡುವದಕ್ಕೆ ತಮ್ಮ ಅಭ್ಯಂತರವಿಲ್ಲ. ಆದರೆ, ನೂರಾರು ಏಕರೆ ಜಾಗವನ್ನು ಹಂಚಿಕೆ ಮಾಡುವದು ಸರಿಯಲ್ಲ. ತಲಾ 3 ರಿಂದ 5 ಏಕರೆಯವರೆಗೆ ಸರ್ಕಾರ ಪರ್ಯಾಯ ಜಾಗವನ್ನು ಮಂಜೂರು ಮಾಡಲಿ ಎಂದ ಅವರು, ತುರ್ತಾಗಿ ಅಧಿಕಾರಿಗಳು ಎಚ್ಚೆತ್ತುಕೊಂಡು ಅತಿಕ್ರಮಣವನ್ನು ತೆರವುಗೊಳಿಸಿ ದೇವಾಲಯದ ಜಾಗವನ್ನು ವಶಕ್ಕೆ ನೀಡಬೇಕೆಂದು ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ಉಪಾಧ್ಯಕ್ಷ ಪಿ.ಕೆ.ಡಾಲಿ, ಕಾರ್ಯದರ್ಶಿ ಲಲಿತಾ ನಂದ ಕುಮಾರ್, ನಿರ್ದೇಶಕ ಕೋಡಿಮಣಿಯಂಡ ಸುರೇಶ್ ಉತ್ತಪ್ಪ, ಪ್ರಮುಖರಾದ ಬಾಚಮಂಡ ಯು. ಪೂವಣ್ಣ, ಅಂಜಪರವಂಡ ಚೋಮುಣಿ ಹಾಜರಿದ್ದರು.