ಗೋಣಿಕೊಪ್ಪಲು, ಆ. 2: ಜಿಲ್ಲೆಯಲ್ಲಿ ಪಕ್ಷವನ್ನು ಬಲವರ್ಧಿಸಿ ಮುಂದಿನ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸುವತ್ತ ಪ್ರತಿಯೊಬ್ಬ ಕಾರ್ಯಕರ್ತರು ಒಂದಾಗಿ ಕೆಲಸ ಮಾಡಬೇಕೆಂದು ಕರ್ನಾಟಕ ರಾಜ್ಯ ಅರಣ್ಯ ಅಭಿವೃದ್ಧಿ ನಿಗಮದ ಉಪಾಧ್ಯಕ್ಷೆ ಮಾಂಗೇರ ಪದ್ಮಿನಿ ಪೊನ್ನಪ್ಪ ಕರೆ ನೀಡಿದರು.

ಹುದಿಕೇರಿ ವಲಯ ಕಾಂಗ್ರೆಸ್ ವತಿಯಿಂದ ಕೊಡವ ಸಮಾಜದಲ್ಲಿ ಆಯೋಜಿಸಿದ್ದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು. ಕಾಂಗ್ರೆಸ್ ಪಕ್ಷ ದೇಶ ಕಟ್ಟುವಲ್ಲಿ ಪ್ರಮುಖ ಪಾತ್ರ ವಹಿಸಿದೆ. ಸ್ವಾತಂತ್ರ್ಯ ಬಂದ ನಂತರ ದೇಶದ ಅರ್ಥಿಕ ಸ್ಥಿತಿಯನ್ನು ಸಮತೋಲನಕ್ಕೆ ತಂದು ದೇಶದ ಪ್ರತಿ ಪ್ರಜೆಗೂ ಸರ್ಕಾರದ ಯೋಜನೆ ಮುಟ್ಟಿಸುವಲ್ಲಿ ಯಶಸ್ವಿಯಾಗಿದೆ. ಇಂದು ಬಂದಿರುವ ಬಿಜೆಪಿ ಸರ್ಕಾರ ನಮ್ಮ ಪಕ್ಷದ ಸಾಧನೆಯನ್ನು ಬಳಸಿಕೊಂಡು ಲಾಭ ಪಡೆಯುತ್ತಿದೆ ಹೊರತು ಹೊಸದಾದ ಯಾವದೇ ಜನಪರ ಯೋಜನೆಯನ್ನು ಜಾರಿಗೊಳಿಸಿಲ್ಲ. ಬರೀ ಪ್ರಚಾರದ ಮೂಲಕ ಬೊಗಳೆ ಬಿಡುವ ಮೋದಿ ಸರ್ಕಾರ ಜನಹಿತ ಕಾಪಡುವಲ್ಲಿ ಎಡವಿದೆ. ನಿರಂತರವಾಗಿ ಪೆಟ್ರೋಲ್, ಡಿಸೇಲ್ ದರವನ್ನು ಹೆಚ್ಚಿಸಿ ಜನಸಾಮಾನ್ಯರಿಗೆ ಬರೆ ಎಳೆಯುತ್ತಿದೆ. ಇದನೆಲ್ಲಾ ಮತದಾರರು ಮನಗಂಡು ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದತ್ತ ಒಲವು ತೋರಿಸುವದು ಖಂಡಿತ ಎಂದರು.

ರಾಜ್ಯ ಸರ್ಕಾರ ವಿವಿಧ ಭಾಗ್ಯಗಳನ್ನು ಜಾರಿಗೊಳಿಸಿ ಜನರ ಮನೆ ಬಾಗಿಲಿಗೆ ತಲುಪಿಸುವಲ್ಲಿ ಯಶಸ್ವಿಯಾಗಿದೆ. ರೈತಾಪಿ ವರ್ಗದ 50 ಸಾವಿರ ರೂಪಾಯಿ ಸಾಲ ಮನ್ನಾ ಮಾಡಿ ರೈತ ಪರ ಕಾಳಜಿ ವ್ಯಕ್ತಪಡಿಸಿದೆ. ವಿದ್ಯಾಸಿರಿ ಯೋಜನೆಯ ಮೂಲಕ ಬಡವರ್ಗದ ವಿದ್ಯಾರ್ಥಿಗಳ ಆಶಾಕಿರಣವಾಗಿ ಕೆಲಸ ಮಾಡಿದೆ. ಹಲವು ಕಾರ್ಯಕ್ರಮಗಳನ್ನು ರಾಜ್ಯ ಸರ್ಕಾರ ಮಾಡಿದೆ. ಈ ಬಗ್ಗೆ ಕಾರ್ಯಕರ್ತರು ಒಂದಾಗಿ ಸರ್ಕಾರದ ಸಾಧನೆಗಳನ್ನು ಮನೆ ಮನೆಗೆ ತಿಳಿಸಿ ಮತದಾರರ ಗಮನ ಸೆಳೆದು ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಜಿಲ್ಲೆಯ 2 ಸ್ಥಾನವನ್ನು ಗೆಲ್ಲುವಂತಾಗಬೇಕೆಂದರು.

ಕಾಂಗ್ರೆಸ್ ಜಿಲ್ಲಾಧ್ಯಕ್ಷ ಮುಕ್ಕಾಟೀರ ಶಿವು ಮಾದಪ್ಪ ಮಾತನಾಡಿ, 94ಸಿ ಯೋಜನೆಯನ್ನು ರಾಜ್ಯದಲ್ಲಿ ಉತ್ತಮಗೊಳಿಸಿ ಬಡವರ್ಗದವರನ್ನು ಮುಖ್ಯವಾಹಿನಿಗೆ ತರುವ ಕೆಲಸವಾಗುತ್ತಿದೆ. ಈ ಮೂಲಕ ಜಿಲ್ಲೆಯ ಹಲವರಿಗೆ ಹಕ್ಕುಪತ್ರ ವಿತರಿಸಲಾಗಿದೆ. ಜಿಲ್ಲೆಯಲ್ಲಿ ವಿಸ್ತಾರಕ್ ಕಾರ್ಯಕ್ರಮದ ಮೂಲಕ ಬಿಜೆಪಿ ಕೇಂದ್ರ ಸರ್ಕಾರದ ಸಾಧನೆ ಮನೆಮನೆಗೆ ತೆರಳಿ ತಿಳಿಸಿ ಜನರನ್ನು ಹಾದಿ ತಪ್ಪಿಸುತ್ತಿದೆ. ನಮ್ಮ ಸಾಧನೆಯನ್ನು ಬಳಸಿಕೊಳ್ಳುತ್ತಿರುವ ಬಿಜೆಪಿ ಪಕ್ಷದ ನಡತೆ ಇದರಿಂದ ತಿಳಿಯುತ್ತಿದೆ. ಕಾಂಗ್ರೆಸ್ ಪಕ್ಷವನ್ನು ಬೂತ್ ಮಟ್ಟದಲ್ಲಿ ಕಟ್ಟಿ ಮುಂದಿನ ಚುನಾವಣೆಗೆ ಸಿದ್ದರಾಗಬೇಕೆಂದು ಕಾರ್ಯಕರ್ತರಿಗೆ ಕರೆ ನೀಡಿದರು.

ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ತೀತಿರ ಧರ್ಮಜ ಮಾತನಾಡಿ, ಮುಂದಿನ ಚುನಾವಣೆ ಎದುರಿಸಲು ವಿರೋಧ ಪಕ್ಷವನ್ನು ಸೋಲಿಸುವ ಪ್ರತಿತಂತ್ರವನ್ನು ರಚಿಸಬೇಕು. ಸರ್ಕಾರದ ಸಾಧನೆ ಮನೆಮನೆಗೆ ತಿಳಿಸಿ ಪ್ರಚಾರ ನಡೆಸಬೇಕು. ಜಿಲ್ಲೆಯು ಅಭಿವೃದ್ದಿ ಕಾಣಬೇಕಾದರೆ ಅದು ಕಾಂಗ್ರೆಸ್ ಪಕ್ಷದಿಂದ ಮಾತ್ರ ಸಾಧ್ಯ. ಈ ನಿಟ್ಟಿನಲ್ಲಿ ಪ್ರತಿಯೊಬ್ಬ ಕಾರ್ಯಕರ್ತರು ತಮ್ಮ ಭಿನ್ನಾಭಿಪ್ರಾಯ ಬದಿಗೊತ್ತಿ ಗೆಲುವಿಗೆ ಸಹಕರಿಸಬೇಕೆಂದರು.

ವಲಯಾಧ್ಯಕ್ಷ ಮಿದೇರಿರ ನವೀನ್, ಜಿ.ಪಂ. ಸದಸ್ಯೆ ಶ್ರೀಜಾ ಶಾಜಿ ಅಚ್ಚುತ್ತನ್, ಗ್ರಾ.ಪಂ. ಅಧ್ಯಕ್ಷೆ ರೇಖಾ ಪೊನ್ನಪ್ಪ, ಕೈಗಾರಿಕೆ ಅರಣ್ಯ ನಿಗಮದ ನಿರ್ದೇಶಕ ಚೆಕ್ಕೇರ ವಾಸು ಕುಟ್ಟಪ್ಪ, ತಾ.ಪಂ. ಸದಸ್ಯರಾದ ಪಲ್ವಿನ್ ಪೂಣಚ್ಚ, ಆಶಾ ಜೇಮ್ಸ್, ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಅಹಮ್ಮದ್, ಆರ್‍ಎಂಸಿ ಸದಸ್ಯ ಕಾರ್ಯಪ್ಪ ವಲಯ ಕಾರ್ಯದರ್ಶಿ ಆಲೀರ ಸಾದಲಿ ಹಾಜರಿದ್ದರು.