ವೀರಾಜಪೇಟೆ, ಆ. 2: ದೆಹಲಿಯಲ್ಲಿ ಇತ್ತೀಚೆಗೆ ನಡೆದ ಕಾಮನ್‍ವೆಲ್ತ್ ಚೆಸ್ ಚಾಂಪಿಯನ್ ಶಿಪ್‍ನಲ್ಲಿ ವೀರಾಜಪೇಟೆಯ ಅನನ್ಯ ಸುರೇಶ್ ಬೆಳ್ಳಿ ಪದಕವನ್ನು ಪಡೆದಿದ್ದಾರೆ.18ರ ವಯೋಮಿತಿಯೊಳಗಿನ ಬಾಲಕಿಯರ ವಿಭಾಗದಲ್ಲಿ ಸ್ಪರ್ಧಿಸಿದ ಅನನ್ಯ ಸುರೇಶ್ ಒಟ್ಟು 7 ಅಂಕಗಳಿಗೆ 5.5 ಅಂಕ ಪಡೆಯುವ ಮೂಲಕ ಎರಡನೇ ಸ್ಥಾನ ಪಡೆದರು. ಮುಕ್ತ ವಿಭಾಗ ಸೇರಿದಂತೆ ಒಟ್ಟು 13 ವಿಭಾಗಗಳಲ್ಲಿ ನಡೆದ ಸ್ಪರ್ಧೆಯಲ್ಲಿ ದಕ್ಷಿಣ ಆಫ್ರಿಕ, ಶ್ರೀಲಂಕಾ, ಇರಾನ್, ಇಂಗ್ಲೆಂಡ್, ಬಾಂಗ್ಲಾದೇಶ ಸೇರಿದಂತೆ ಒಟ್ಟು 12 ರಾಷ್ಟ್ರಗಳ ಸ್ಪರ್ಧಿಗಳು ಚಾಂಪಿಯನ್ ಶಿಪ್‍ನಲ್ಲಿ ಸ್ಪರ್ಧಿಸಿದ್ದರು.

ಕಳೆದ ಬಾರಿ ಶ್ರೀಲಂಕಾದಲ್ಲಿ ನಡೆದಿದ್ದ ಚಾಂಪಿಯನ್‍ಶಿಪ್‍ನಲ್ಲಿ 16 ರ ವಯೋಮಿತಿ ಒಳಗಿನ ವಿಭಾಗದಲ್ಲಿ ಸ್ಪರ್ಧಿಸಿ 4 ನೇ ಸ್ಥಾನ ಪಡೆದು ಸ್ವಲ್ಪದರಲ್ಲಿ ಪದಕ ವಂಚಿತರಾಗಿದ್ದ ಅನನ್ಯ ಸುರೇಶ್ ಈ ಬಾರಿ ಬೆಳ್ಳಿ ಪದಕದೊಂದಿದೆ ಕ್ರೀಡಾ ಜಿಲ್ಲೆಯಾದ ಕೊಡಗಿಗೆ ಮತ್ತೊಂದು ಹಿರಿಮೆಯನ್ನು ಮೂಡಿಸಿದ್ದಾರೆ. ಇವರು ಪಟ್ಟಣದ ಟಿ.ಇ. ಸುರೇಶ್ ಹಾಗೂ ಕೆ.ಕೆ. ಶೀಲಾ ದಂಪತಿಗಳ ಪುತ್ರಿ.

ಅನನ್ಯ ಸುರೇಶ್ ಮಹಿಳಾ ವಿಭಾಗದಲ್ಲಿ ಕರ್ನಾಟಕದ ಅಗ್ರ ಶ್ರೇಯಾಂಕಿತ ಆಟಗಾರ್ತಿಯಾಗಿದ್ದರೆ. 18 ರ ವಯೋಮಿತಿಯಲ್ಲಿ ರಾಷ್ಟ್ರ ಮಟ್ಟದಲ್ಲಿ 7 ನೇ ರ್ಯಾಂಕ್ ಹಾಗೂ ಏಷ್ಯದಲ್ಲಿ 32ನೇ ರ್ಯಾಂಕ್ ಪಡೆದಿದ್ದಾರೆ.

ಪಟ್ಟಣದ ಸಂತ ಅನ್ನಮ್ಮ ಪದವಿಪೂರ್ವ ಕಾಲೇಜಿನ ವಿಜ್ಞಾನ ವಿಭಾಗದಲ್ಲಿ ದ್ವಿತೀಯ ಪಿ.ಯು. ವಿದ್ಯಾರ್ಥಿಯಾಗಿದ್ದಾರೆ. 2018 ರಲ್ಲಿ ಗ್ರೀಸ್‍ನಲ್ಲಿ ನಡೆಯುವ ವಿಶ್ವ ಚೆಸ್ ಚಾಂಪಿಯನ್ ಶಿಪ್ ಹಾಗೂ ಥೈಲ್ಯಾಂಡ್‍ನಲ್ಲಿ ನಡೆಯುವ ಏಷ್ಯನ್ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡುವ ಭರವಸೆಯನ್ನು ಅನನ್ಯ ಸುರೇಶ್ ಹೊಂದಿದ್ದಾರೆ.