ಶ್ರೀಮಂಗಲ, ಆ. 2: ಗ್ರಾಮಸಭೆಗೆ ಹಾಜರಾಗದ ಅಧಿಕಾರಿಗಳ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲು ಜಿ.ಪಂ.ನಲ್ಲಿ ಪ್ರಸ್ತಾಪಿಸಲಾಗುವದು. ಸಭೆಗೆ ಗೈರು ಹಾಜರಾದ ಅಧಿಕಾರಿಗಳು ಹಾಗೂ ಅವರ ಇಲಾಖೆಯ ಬಗ್ಗೆ ಜನರ ಬೇಡಿಕೆಗಳ ಪ್ರತ್ಯೇಕ ವಿವರ ನೀಡಲು ಪಂಚಾಯಿತಿ ಅಭಿವೃದ್ದಿ ಅಧಿಕಾರಿಗೆ ಜಿ.ಪಂ. ಸದಸ್ಯ ಮುಕ್ಕಾಟಿರ ಶಿವು ಮಾದಪ್ಪ ನಿರ್ದೇಶನ ನೀಡಿದರು.ಟಿ.ಶೆಟ್ಟಿಗೇರಿ ಗ್ರಾಮಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಗ್ರಾಮಸಭೆ ಏಕೆ
(ಮೊದಲ ಪುಟದಿಂದ) ಮಾಡಲಾಗುತ್ತದೆ ಎಂಬ ಕನಿಷ್ಟ ಜ್ಞಾನವೂ ಅಧಿಕಾರಿಗಳಿಗೆ ಇಲ್ಲ. ನೂರಾರು ಜನರು ವಿವಿಧ ಇಲಾಖೆಗಳಿಂದ ಸಿಗುವ ಪ್ರಯೋಜನಗಳ ಬಗ್ಗೆ ತಿಳಿದುಕೊಳ್ಳಲು ಹಾಗೂ ಇಲಾಖೆಯಿಂದ ಸಿಗಬೇಕಾದ ಸೌಲಭ್ಯಗಳ ಬೇಡಿಕೆ ಇಡಲು ಗ್ರಾಮ ಸಭೆಗೆ ಬಂದಿರುತ್ತಾರೆ. ಆದರೆ ಸಂಬಂಧಿಸಿದ ಅಧಿಕಾರಿಗಳೇ ಗೈರು ಹಾಜರಾದರೆ ಜನರ ಸಮಸ್ಯೆ ಪರಿಹಾರವಾಗುವದಿಲ್ಲ. ಜನಪ್ರತಿನಿಧಿಗಳು ಯೋಜನೆ ರೂಪಿಸಬಹುದು. ಆದರೆ ಅದನ್ನು ಕಾರ್ಯಗತಗೊಳಿಸಬೇಕಾದ ಅಧಿಕಾರಿಗಳೇ ಬೇಜವ್ದಾರಿ ತೋರಿದರೆ ಅಭಿವೃದ್ದಿ ಸಾಧ್ಯವಿಲ್ಲ. ಅವರ ಅನುಪಸ್ಥಿತಿಯಲ್ಲಿ ನಾವೇನು ಚರ್ಚೆ ಮಾಡಿದರೂ ಪ್ರಯೋಜನವಿಲ್ಲ. ಗೈರು ಹಾಜರಾದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲು ನಿರ್ಣಯ ಮಾಡಿ, ಜಿ.ಪಂ. ವ್ಯಾಪ್ತಿಯ 32 ಇಲಾಖೆಗೆ ಸಂಬಂಧಿಸಿದಂತೆ ಜನರ ಬೇಡಿಕೆಗಳನ್ನು ಪ್ರತ್ಯೇಕವಾಗಿ ತಮಗೆ ಕಳುಹಿಸಿಕೊಡಲು ಪಿ.ಡಿ.ಒ.ಗೆ ನಿರ್ದೇಶನ ನೀಡಿದರು.
ಚಂಗುಲಂಡ ಪ್ರಭು ಹಾಗೂ ಮಾಣೀರ ಕಾವೇರಮ್ಮ ಅವರ ಹಸುಗಳನ್ನು ಹುಲಿ ಕೊಂದು ಹಾಕಿದ್ದು, ಒಂದು ವರ್ಷ ಕಳೆದರೂ ಅರಣ್ಯ ಇಲಾಖೆಯಿಂದ ಪರಿಹಾರ ನೀಡದಿರುವದು, ಅಪ್ಪಚಂಗಂಡ ಮೋಟಯ್ಯ ಅವರೊಂದಿಗೆ ಶ್ರೀಮಂಗಲ ಪೊಲೀಸ್ ಠಾಣಾ ಸಿಬ್ಬಂದಿ ವಿಶ್ವನಾಥ್ ಹಾಗೂ ಸಿಬ್ಬಂದಿಗಳು ದುರ್ವತನೆ ತೋರಿರುವದು, ಟಿ.ಶೆಟ್ಟಿಗೇರಿ ಅಯ್ಯಪ್ಪ ದೇವಸ್ಥಾನ ರಸ್ತೆಯಲ್ಲಿ ಕುಡುಕರ ಕಾಟ ತಡೆಯಲು ಪೊಲೀಸ್ ಇಲಾಖೆ ಸ್ಪಂದಿಸದಿರುವದು, ಅಂಗಡಿಗಳಲ್ಲಿ ಹಾಗೂ ಹಾದಿ-ಬೀದಿಗಳಲ್ಲಿ ಪೊಲೀಸ್ ಇಲಾಖೆಯವರೆ ಶಾಮೀಲಾಗಿ ಮದ್ಯ ಮಾರಾಟ ಮಾಡುತ್ತಿರುವದು, ತೋಟಗಾರಿಕೆ ಇಲಾಖೆಯಿಂದ ಬೆಳೆಗಾರರಿಗೆ ಸೌಲಭ್ಯಗಳು ಸಮರ್ಪಕವಾಗಿ ಸಿಗದಿರುವದು. ಟಿ.ಶೆಟ್ಟಿಗೇರಿ ಗ್ರಾಮಕ್ಕೆ ಕಿರಿಯ ಆರೋಗ್ಯ ಮಹಿಳಾ ಕಾರ್ಯಕರ್ತೆ ಇಲ್ಲದಿರುವದು. ಶ್ರಿಮಂಗಲ ನಾಡು ಕಛೇರಿಯಲ್ಲಿ ಸಕಾಲಕ್ಕೆ ಸರಿಯಾಗಿ ದೃಡೀಕರಣ ಪತ್ರ ಸಿಗದಿರುವದು. ಪಹಣಿ ಪತ್ರದಲ್ಲಿ ಬೆಳೆ ನಮೂದಿಸದಿರುವದು ಸೇರಿದಂತೆ ಹಲವು ವಿಷಯಗಳ ಬಗ್ಗೆ ಗಂಭೀರ ಚರ್ಚೆ ನಡೆದು ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲು ಸಂಬಂಧಿಸಿದ ಇಲಾಖೆಗೆ ಕಳುಹಿಸುವಂತೆ ನಿರ್ಣಯ ಕೈಗೊಳ್ಳಲಾಯಿತು.
ಈ ಸಂದರ್ಭ ಹಾಜರಿದ್ದ ವಿದ್ಯುತ್ ಇಲಾಖೆ, ಶಿಕ್ಷಣ, ಕೃಷಿ, ತೋಟಗಾರಿಕೆ, ಆರೋಗ್ಯ, ಕಂದಾಯ, ನೀರಾವರಿ, ಪಶು ಸಂಗೋಪನೆ, ಇಲಾಖೆಯ ಅಧಿಕಾರಿಗಳು ತಮ್ಮ ಇಲಾಖೆಯ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು. ಕಂದಾಯ ಅಧಿಕಾರಿಗಳು 5 ಎಕರೆ ಪಿತ್ರಾಜಿತ ಆಸ್ತಿ ಇರುವವರಿಗೆ ಪೈಸಾರಿ ಜಾಗದ ದಾಖಲೆ ಆಗುವದಿಲ್ಲ. 5 ಎಕರೆಗಿಂತ ಕಡಿಮೆ ಇರುವವರಿಗೆ 4.95 ಎಕರೆಯಾಗುವಂತೆ ಉಳಿಕೆ ಸರಕಾರಿ ಜಾಗಕ್ಕೆ ದಾಖಲೆ ನೀಡಲಾಗುವದು ಎಂದು ಮಾಹಿತಿ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಗ್ರಾ.ಪಂ. ಅಧ್ಯಕ್ಷ ಮಚ್ಚಮಾಡ ಸುಮಂತ್ ಮಾತನಾಡಿ, ನಾಡಿನ ಅಭಿವೃದ್ದಿಯಲ್ಲಿ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳಿಗೆ ಸಮಾನ ಜವಾಬ್ದಾರಿ ಇರುತ್ತದೆ. ಗ್ರಾಮ ಸಭೆಗೆ ಅಧಿಕಾರಿಗಳು ಬಾರದಿರುವದು ದುರಂತ. ನಾಡ ಕಛೇರಿಯಲ್ಲಿ ದುರ್ಬಲರಿಂದ ಲಂಚ ಪಡೆಯಲಾಗುತ್ತಿದೆ ಎಂಬ ಆರೋಪ ಹೆಚ್ಚುತ್ತಿದೆ. ಮುಂದಿನ ದಿನಗಳಲ್ಲಿ ಇದಕ್ಕೆ ಕಡಿವಾಣ ಹಾಕಲಾಗುವದು. ಸಾರ್ವಜನಿಕ ಆಸ್ತಿಗಳನ್ನು ರಕ್ಷಿಸುವದರೊಂದಿಗೆ ಶುಚಿತ್ವ ಕಾಪಾಡುತ್ತಿರುವ ಸಾರ್ವಜನಿಕರಿಗೆ ಧನ್ಯವಾದ ಅರ್ಪಿಸಿದರು.
ತಾ.ಪಂ. ಸದಸ್ಯೆ ಸರೋಜ ಪಿ.ಕೆ, ನೊಡೆಲ್ ಅಧಿಕಾರಿ ಡಾ. ಬಿ.ಜಿ. ಗಿರೀಶ್ ಮಾತನಾಡಿದರು. ಸಾರ್ವಜನಿಕ ಪ್ರಮುಖರಾದ ಅಪ್ಪಚಂಗಡ ಮೋಟಯ್ಯ, ಪೆಮ್ಮಂಡ ರಾಜಾ ಕುಶಾಲಪ್ಪ, ಚೆಟ್ಟಂಗಡ ಅಚ್ಚಪ್ಪ, ಉಳುವಂಗಡ ದತ್ತ, ಚಂಗುಲಂಡ ಪ್ರಭು, ಚೊಟ್ಟೆಯಂಡಮಾಡ ಸುಬ್ರಮಣಿ, ವೀಣಾ ಮತ್ತಿತರರು ಚರ್ಚೆಯಲ್ಲಿ ಭಾಗವಹಿಸಿದ್ದರು.
ಗ್ರಾ.ಪಂ. ಸದಸ್ಯರಾದ ಚೆಟ್ಟಂಗಡ ರಂಜು ಕರುಂಬಯ್ಯ, ಚೊಟ್ಟೆಯಂಡಮಾಡ ಉದಯ, ಮುಕ್ಕಾಟಿರ ಸಂದೀಪ್, ಅಯ್ಯಪ್ಪ, ಚಂದಾ, ಕೆಚ್ಚಿ, ಗೌರಿ, ಹರೀಶ್, ಸಿದ್ದ, ಸಬಿತಾ, ಜಾನ್ಸಿ, ದಮಯಂತಿ, ಎ.ಪಿ.ಎಂ.ಸಿ. ಸದಸ್ಯೆ ಬೊಳ್ಳಂಜಿರ ಸುಶೀಲ, ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ಕವಿತಾ ಹಾಗೂ ಪಂಚಾಯಿತಿ ಸಿಬ್ಬಂದಿ ಉಪಸ್ಥಿತರಿದ್ದರು.