ಮಡಿಕೇರಿ, ಆ. 2: ಮಡಿಕೇರಿ ನಗರಸಭೆ ವತಿಯಿಂದ ವ್ಯಾಪಾರ ವಹಿವಾಟಿಗೆ ನೀಡಲಾಗುತ್ತಿರುವ ತಾತ್ಕಾಲಿಕ ಪರವಾನಗಿಯಿಂದ ನಗರಸಭೆಗೆ ಆದಾಯ ನಷ್ಟವಾಗುತ್ತಿರುವ ಬಗ್ಗೆ ‘ಶಕ್ತಿ’ಯಲ್ಲಿ ಪ್ರಕಟಗೊಂಡ ವರದಿಗೆ ಜಿಲ್ಲಾಧಿಕಾರಿ ರಿಚರ್ಡ್ ವಿನ್ಸೆಂಟ್ ಡಿಸೋಜ ಅವರು ಪ್ರತಿಕ್ರಿಯೆ ನೀಡಿದ್ದಾರೆ.ಪತ್ರಿಕೆಯಲ್ಲಿ ಪ್ರಕಟಗೊಂಡ ವರದಿಗೆ ಸಂಬಂಧಿಸಿದಂತೆ ತಾನು ಈಗಾಗಲೇ ನಗರಸಭಾ ಆಯುಕ್ತರೊಂದಿಗೆ ಚರ್ಚಿಸಿದ್ದು, ಕೆಲ ವರ್ಷಗಳ ಹಿಂದಿನಿಂದಲೇ ತಾತ್ಕಾಲಿಕ ಪರವಾನಗಿಯನ್ನು ನಗರಸಭೆ ನೀಡುತ್ತಿರುವದಾಗಿ ಆಯುಕ್ತರು ಮಾಹಿತಿ ನೀಡಿದ್ದಾರೆ. ಈ ಹಿನ್ನೆಲೆ ಯಲ್ಲಿ ಈಗಾಗಲೇ ನೀಡಲಾಗಿರುವ ತಾತ್ಕಾಲಿಕ ಪರವಾನಗಿಗೆ ಸಂಬಂಧಿಸಿದಂತೆ ಕೂಲಂಕಷವಾಗಿ ಪರಿಶೀಲನೆ ನಡೆಸಬೇಕು. ಒಂದು ವೇಳೆ ತಾತ್ಕಾಲಿಕ ಪರವಾನಗಿ ನೀಡುವದರಿಂದ ನಗರಸಭೆಯ ಆದಾಯಕ್ಕೆ ಧಕ್ಕೆ ಉಂಟಾಗಿರುವದು ದೃಢಪಟ್ಟರೆ ಕಾನೂನಿನಡಿ ಕ್ರಮ ಕೈಗೊಳ್ಳುವಂತೆ ಆಯುಕ್ತರಿಗೆ ಸೂಚಿಸಿದ್ದೇನೆ ಎಂದು ಜಿಲ್ಲಾಧಿಕಾರಿ ಆರ್.ವಿ. ಡಿಸೋಜ ಅವರು ತಿಳಿಸಿದ್ದಾರೆ.