ಮಡಿಕೇರಿ, ಆ. 3: ಸೂರ್ಲಬ್ಬಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯ - ಸಿಬ್ಬಂದಿ ಕೊರತೆಯೊಂದಿಗೆ ಗ್ರಾಮೀಣ ಜನತೆಗೆ ಯಾವದೇ ಆರೋಗ್ಯ ಸೇವೆ ಲಭಿಸುತ್ತಿಲ್ಲವೆಂದು, ಆ ಭಾಗದ ಗ್ರಾಮಸ್ಥರು ಜಿ.ಪಂ. ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ಮೂಕೋಂಡ ಶಶಿ ಸುಬ್ರಮಣಿ ಅವರ ಗಮನ ಸೆಳೆದಿದ್ದಾರೆ. ಈ ಬಗ್ಗೆ ಸ್ಪಂದಿಸಿ ಮಾತನಾಡಿದ ಅವರು, ಸೂರ್ಲಬ್ಬಿ ನಾಡಿನ ಜನತೆಯ ಸಮಸ್ಯೆ ಈಡೇರಿಸಲು ಪ್ರಾಮಾಣಿಕ ಪ್ರಯತ್ನ ಮಾಡುವದಾಗಿ ಭರವಸೆ ನೀಡಿದ್ದಾರೆ.
ಸೂರ್ಲಬ್ಬಿ ಪ್ರಾಥಮಿಕ ಆರೋಗ್ಯ ಕೇಂದ್ರದ ಅವ್ಯವಸ್ಥೆ ಬಗ್ಗೆ ‘ಶಕ್ತಿ’ ವರದಿಗೆ ಸ್ಪಂದಿಸಿ, ಆಸ್ಪತ್ರೆಗೆ ದಿಢೀರ್ ಭೇಟಿ ನೀಡಿದ ಶಶಿ ಸುಬ್ರಮಣಿ, ಅಲ್ಲಿನ ಅವ್ಯವಸ್ಥೆಯನ್ನು ಖುದ್ದು ನೋಡಿದರಲ್ಲದೆ, ಆರೋಗ್ಯ ಇಲಾಖೆ ಅಧಿಕಾರಿಗಳಿಗೂ ಬಿಸಿ ಮುಟ್ಟಿಸಿದ್ದಾರೆ. ತಾ. 2 ರಂದು ಈ ಸಂಬಂಧ ಸೂರ್ಲಬ್ಬಿ ನಾಡಿನ ಪ್ರಮುಖರೊಂದಿಗೆ ಅವರು ಸಮಾಲೋಚನೆ ನಡೆಸಿದ್ದಾರೆ.
ಹಲವು ಸಮಸ್ಯೆ: ಎರಡು ವರ್ಷಗಳ ಹಿಂದೆ ಸೂರ್ಲಬ್ಬಿ ಆಸ್ಪತ್ರೆಯನ್ನು ಉದ್ಭವ ಸಂಸ್ಥೆ ನಿರ್ವಹಣೆಗೆ ಪಡೆದಿದ್ದ ಮಳೆ, ಮೈಸೂರಿನಿಂದ ಡಾ. ಕುಮಾರ್ ಎಂಬವರು ತಿಂಗಳಿಗೆ ಎರಡು ಬಾರಿ ಆಸ್ಪತ್ರೆಗೆ ಭೇಟಿ ನೀಡಿ ಹಾಜರಾತಿಯಲ್ಲಿ ಸಹಿ ಮಾಡಿ, ಬಂದ ಬಸ್‍ನಲ್ಲೇ ಕೇವಲ 20 ನಿಮಿಷ ಅಂತರದಲ್ಲಿ ಹಿಂತೆರಳುತ್ತಿದ್ದುದಾಗಿ ಸೂರ್ಲಬ್ಬಿ ನಾಡಿನ ಅಧ್ಯಕ್ಷ ಎಂ.ಎಸ್. ತಿಮ್ಮಯ್ಯ ಬಹಿರಂಗಗೊಳಿಸಿದರು. ಅಲ್ಲದೆ, ಆರೋಗ್ಯ ಕೇಂದ್ರದಲ್ಲಿ ಸಕ್ಕರೆ ಕಾಯಿಲೆ, ರಕ್ತದೊತ್ತಡ ಪರೀಕ್ಷೆಗೂ ಯಂತ್ರೋಪಕರಣಗಳು ಇಲ್ಲವೆಂದು ಬಹಿರಂಗಗೊಳಿಸಿದರು.
ಗ್ರಾಮದ ಹಿರಿಯರಾದ ಜಿ. ತಮ್ಮಯ್ಯ, ಕುಟ್ಟಪ್ಪ, ನಾಪಂಡ ಅರುಣ, ಗೌಡಂಡ ಸುಬ್ಬಯ್ಯ ಮೊದಲಾದ ವರಿಂದ ಮಾಹಿತಿ ಪಡೆದ ಸ್ಥಾಯಿ ಸಮಿತಿ ಅಧ್ಯಕ್ಷರು, ಮುಂದೆ ಸಮಸ್ಯೆ ನಿವಾರಣೆಗೆ ಕ್ರಮ ಕೈಗೊಳ್ಳಲಾಗುವದು ಎಂದರು.
ಪಾಠವಿಲ್ಲ : ಆಸ್ಪತ್ರೆ ಅವ್ಯವಸ್ಥೆಯಿಂದ ಮರುಗಿದ ಶಶಿ ಸುಬ್ರಮಣಿ ಸೂರ್ಲಬ್ಬಿ ಪ್ರೌಢಶಾಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದಾಗ ಮತ್ತಷ್ಟು ಅಚ್ಚರಿ ಕಾದಿತ್ತು. ಶಾಲೆ ಪ್ರಾರಂಭಗೊಂಡು 2 ತಿಂಗಳು ಕಳೆದಿದ್ದರೂ ಯಾರೊಬ್ಬರು ಅಧಿಕಾರಿ ಇತ್ತ ಸುಳಿದಿರಲಿಲ್ಲ. ಅಲ್ಲದೆ, ಎಸ್‍ಎಸ್‍ಎಲ್‍ಸಿ ಹಾಗೂ ಇತರ ಮಕ್ಕಳಿಗೆ ಈ ಎರಡು ತಿಂಗಳಿನಿಂದ ಇಂಗ್ಲೀಷ್ ಹಾಗೂ ಗಣಿತ ಪಠ್ಯಗಳನ್ನು ಹೇಳಿಕೊಟ್ಟಿರಲಿಲ್ಲ ಎಂಬ ವಿಷಯ ಬಹಿರಂಗಗೊಂಡಾಗ, ಅವರು, ಶಿಕ್ಷಕರನ್ನು ತರಾಟೆಗೆ ತೆಗೆದುಕೊಂಡರು.
ಪಠ್ಯ ಬೋಧನೆಯಲ್ಲಿ ಸಮಸ್ಯೆಯಾಗದಂತೆ ಮಕ್ಕಳಿಗೆ ಸೂಕ್ತ ವ್ಯವಸ್ಥೆ ಕೈಗೊಳ್ಳುವಂತೆ ತಾಕೀತು ಮಾಡಿದರು. ಈ ಬಗ್ಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳು ಮತ್ತು ಸಂಬಂಧಪಟ್ಟವರ ಗಮನ ಸೆಳೆಯುವದಾಗಿ ಅವರು ಭರವಸೆ ನೀಡಿದರು. ಒಟ್ಟಿನಲ್ಲಿ ಆರೋಗ್ಯ ಕೇಂದ್ರದ ಸಮಸ್ಯೆ ಪರಿಶೀಲನೆಗೆ ತೆರಳಿದ ಸ್ಥಾಯಿ ಸಮಿತಿ ಅಧ್ಯಕ್ಷರ ಎದುರು, ಸೂರ್ಲಬ್ಬಿ ನಾಡಿನ ಪ್ರಮುಖರು ಹತ್ತಾರು ಸಮಸ್ಯೆಗಳ ಕುರಿತು ಬೇಡಿಕೆ ಮುಂದಿಟ್ಟರು. ಈ ಬಗ್ಗೆ ಶಾಂತ ರೀತಿ ಸ್ಪಂದಿಸಿದ ಶಶಿ ಸುಬ್ರಮಣಿ ಶುಕ್ರವಾರ ಜಿಲ್ಲೆಯ ವಿವಿಧ ಇಲಾಖೆ ಅಧಿಕಾರಿಗಳನ್ನು ಭೇಟಿ ಮಾಡಿ ಗ್ರಾಮೀಣ ಸಮಸ್ಯೆಗಳ ಇತ್ಯರ್ಥಕ್ಕೆ ಗಮನ ಹರಿಸುವ ಇಂಗಿತ ವ್ಯಕ್ತಪಡಿಸಿದರು.