ಶ್ರೀಮಂಗಲ, ಆ. 2: ದ.ಕೊಡಗಿನ ಶ್ರೀಮಂಗಲ ವ್ಯಾಪ್ತಿಯಲ್ಲಿ ಕಾಣಿಸಿಕೊಂಡಿರುವ ಹುಲಿ ಹಾವಳಿ ಹಿನ್ನೆಲೆಯಲ್ಲಿ ಬೀರುಗ ಗ್ರಾಮದಲ್ಲಿ ಹಸುಗಳ ಮೇಲೆ ಧಾಳಿ ನಡೆಸಿ ಕೊಂದು ಹಾಕಿರುವ ಸ್ಥಳದಲ್ಲಿ, ಹುಲಿಯನ್ನು ಸೆರೆ ಹಿಡಿಯಲು ಅರಣ್ಯ ಇಲಾಖೆ ಬುಧವಾರ ಬೋನನ್ನು ತಂದಿರಿಸಿದೆ. ಆದರೆ ಹುಲಿ ಸೆರೆಗೆ ಅದನ್ನು ಅಳವಡಿಸಲು ಅರಣ್ಯ ಇಲಾಖೆ ಮುಂದಾಗಿಲ್ಲ. ಹುಲಿಯ ಚಲನವಲನದ ಬಗ್ಗೆ ಮತ್ತಷ್ಟು ಅಧ್ಯಯನ ನಡೆಸಿ ಸೂಕ್ತ ಜಾಗದಲ್ಲಿ ಬೋನು ಇರಿಸಲು ಉದ್ದೇಶಿಸಲಾಗಿದೆ ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ.
ಸೋಮವಾರ ಮುಂಜಾನೆ ಶ್ರೀಮಂಗಲ ಸಮೀಪ ಬೀರುಗ ಗ್ರಾಮದ ರೈತ ಉಪ್ಪಾರರ ಶಶಿಧರ್ ಅವರ ಮನೆಯ ಸಮೀಪ ಮೇಯಲು ಹಸುಗಳನ್ನು ಕಟ್ಟುತ್ತಿದ್ದ ಸಂದರ್ಭವೇ ಅವರ ಎದುರಿನಲ್ಲಿಯೇ ಕ್ಷಣಾರ್ಧದಲ್ಲಿ ಹುಲಿ ಧಾಳಿ ನಡೆಸಿ ಎರಡು ಹಸುಗಳನ್ನು ಸ್ಥಳದಲ್ಲಿಯೇ ಕೊಂದು ಹಾಕಿ ಒಂದು ಹಸುವನ್ನು ಗಂಭೀರ ಸ್ವರೂಪದಲ್ಲಿ ಗಾಯಗೊಳಿಸಿರುವ ಸ್ಥಳಕ್ಕೆ ಬುಧವಾರ ವೀರಾಜಪೇಟೆ ಡಿ.ಸಿ.ಎಫ್. ಮರಿಯಾ ಕ್ರಿಷ್ಟುರಾಜ್ ಹಾಗೂ ಎ.ಸ್.ಸಿ.ಎಫ್. ಸೀಮಾ ಅವರು ಭೇಟಿ ನೀಡಿ ಬೋನು ಇರಿಸಲು ಸೂಕ್ತ ಸ್ಥಳ ಪರಿಶೀಲಿಸಿದರು. ಕಳೆದ ಎರಡು ದಿನದಿಂದ ಸ್ಥಳದಲ್ಲಿ ಹುಲಿಯ ಚಲನವಲನ ಅಧ್ಯಯನ ಮಾಡಲು ಇರಿಸಿದ್ದ ಕ್ಯಾಮರಾ ಟ್ರಾಪ್ಅನ್ನು ಅವರು ಪರಿಶೀಲಿಸಿದರು.
ಹುಲಿ ಧಾಳಿ ನಡೆಸಿದ ನಂತರ ಮಂಗಳವಾರ ಹಾಗೂ ಬುಧವಾರ ರಾತ್ರಿ ಹಸುವಿನ ಕಳೇಬರವನ್ನು ತಿನ್ನಲು ಆಗಮಿಸಿರುವದು ಕ್ಯಾಮರಾದಲ್ಲಿ ಸೆರೆಯಾಗಿದೆ. ಹುಲಿ ಹಾವಳಿ ಪರಿಹಾರ ಸಮಿತಿಯ ವೀರಾಜಪೇಟೆ ತಾಲೂಕು ಅಧ್ಯಕ್ಷರು ಇಲ್ಲಿನ ಡಿ.ಸಿ.ಎಫ್. ಮರಿಯಾ ಕ್ರಿಷ್ಟುರಾಜ್ ಅವರು ಹುಲಿ ಧಾಳಿ ನಡೆಸಿದ ಸ್ಥಳಕ್ಕೆ ಮತ್ತೆ ಬರುವದನ್ನು ಖಚಿತಪಡಿಸಿಕೊಳ್ಳಲು ಬುಧವಾರ ರಾತ್ರಿಯೂ ಸಹ ಕ್ಯಾಮರಾ ಅಳವಡಿಸಲಾಗುವದೆಂದು ತಿಳಿಸಿದ್ದಾರೆ.
ಎ.ಸಿ.ಎಫ್. ಸೀಮಾ ಅವರು ಈ ಬಗ್ಗೆ ಮಾಹಿತಿ ನೀಡಿ, ಹುಲಿ ಧಾಳಿ ನಡೆಸಿದ ಹಾಗೂ ಹಸುವಿನ ಕಳೇಬರ ಇರುವ ಸುಮಾರು 300 ಮೀಟರ್ ವ್ಯಾಪ್ತಿಯಲ್ಲಿ ಸುಮಾರು 12 ರಿಂದ 13 ಟ್ರಾಪ್ ಕ್ಯಾಮರಾಗಳನ್ನು ಅಳವಡಿಸಿ ಹುಲಿಯ ಚಲನವಲನ ಹಾಗೂ ಅದರ ಸಂಚಾರವನ್ನು ಸೂಕ್ಷ್ಮವಾಗಿ ಅಧ್ಯಾಯನ ನಡೆಸಿದ ನಂತರವೆ ಬೋನು ಅಳವಡಿಸಿ ಹುಲಿ ಸೆರೆಗೆ ಕ್ರಮ ಕೈಗೊಳ್ಳಲಾಗುವದು. ಈಗಾಗಲೇ ಸ್ಥಳಕ್ಕೆ ಬೋನು ತಂದು ಇಡಲಾಗಿದೆ ಎಂದು ಮಾಹಿತಿ ನೀಡಿದರು.
ಗಾಯಗೊಂಡ ಹಸು ಗಂಭೀರ : ಸೋಮವಾರ ಮುಂಜಾನೆ ಹುಲಿ ಧಾಳಿಗೆ ತುತ್ತಾಗಿ ಗಂಭೀರವಾಗಿ ಗಾಯಗೊಂಡಿರುವ ಮಿಶ್ರ ತಳಿಯ ಗಬ್ಬದ ಹಸುವಿನ ಸ್ಥಿತಿ ಗಂಭೀರವಾಗಿದೆ. ಹಸುವಿನ ಕೆಚ್ಚಲು ಹಾಗೂ ಕಾಲಿನ ಭಾಗ ಮತ್ತು ಕತ್ತಿನ ಭಾಗಕ್ಕೆ ಹುಲಿಯ ಹಲ್ಲಿನಿಂದ ಕಚ್ಚಿದ ಹಾಗೂ ಕೈಯ ಉಗುರಿನಿಂದ ಪರಚಿದ ಆಳವಾದ ಗಾಯವಾಗಿದ್ದು, ರಕ್ತ ವಸರುತ್ತಿದೆ. ಸ್ಥಳಕ್ಕೆ ಶ್ರೀಮಂಗಲ ಪಶುವೈದ್ಯಾಧಿಕಾರಿ ಡಾ. ಬಿ.ಜಿ. ಗಿರೀಶ್ ಅವರು ಚಿಕಿತ್ಸೆ ನೀಡುತ್ತಿದ್ದಾರೆ.
ಸ್ಥಳೀಯರ ಅಸಮಧಾನ : ಹುಲಿ ಸೆರೆಗೆ ಕಳೆದ ಮೂರು ದಿನದಿಂದ ಮೀನಾಮೇಷ ಎಣಿಸುತ್ತಿರುವ ಅರಣ್ಯ ಇಲಾಖೆ ವಿರುದ್ಧ ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಹುಲಿ ಕಳೆದ ಎರಡು ದಿನ ರಾತ್ರಿಯೂ ಬಂದು ಹಸುವಿನ ಕಳೇಬರವನ್ನು ತಿಂದಿದೆ. ಆದರೆ ಬುಧವಾರವಷ್ಟೆ ಹುಲಿ ಸೆರೆಗೆ ಬೋನನ್ನು ಇಲಾಖೆ ತಂದು ರಸ್ತೆ ಬದಿಯಲ್ಲಿ ಇಟ್ಟಿದೆ. ಆದರೆ ಹುಲಿ ಸೆರೆಗೆ ಅದನ್ನು ಅಳವಡಿಸಲು ಹಿಂದೇಟು ಹಾಕುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅರಣ್ಯ ಇಲಾಖೆಯ ನಿರ್ಲಕ್ಷ್ಯದಿಂದ ಈಗಾಗಲೇ ಕಳೆದ 20 ದಿನದಿಂದ 4 ಹುಲಿ ಧಾಳಿ ಪ್ರಕರಣ ನಡೆದಿದೆ. 4 ಪ್ರಕರಣದಿಂದಲೂ ಎಚ್ಚೆತ್ತುಕೊಳ್ಳದೆ ಹುಲಿ ಸೆರೆಗೆ ಮುಂದಾಗದಿದ್ದರೆ ಸರಣಿ ಹುಲಿ ಧಾಳಿ ಪ್ರಕರಣ ಸಂಭವಿಸುವ ಅಪಾಯವಿದೆ ಎಂದು ಎಚ್ಚರಿಸಿದ್ದಾರೆ.
ಕೂಡಲೆ ಹುಲಿಯನ್ನು ಸೆರೆ ಹಿಡಿಯಲು ಬೋನು ಅಳವಡಿಸಬೇಕು. ಸ್ಥಳದಲ್ಲಿಯೇ ಅರಣ್ಯಾಧಿಕಾರಿಗಳು ಬೀಡುಬಿಟ್ಟು ಕಾರ್ಯಾಚರಣೆಯ ಉಸ್ತುವಾರಿ ವಹಿಸಿಕೊಳ್ಳಬೇಕೆಂದು ಜಿಲ್ಲಾ ರೈತ ಸಂಘದ ಪ್ರಮುಖ ಅಯ್ಯಮಾಡ ಸೋಮೇಶ್, ಹುಲಿ ಧಾಳಿಯಿಂದ ಹಸು ಕಳೆದುಕೊಂಡಿರುವ ಸಂತ್ರಸ್ತ ರೈತ ಉಪ್ಪಾರರ ಶಶಿಧರ್ ಆಗ್ರಹಿಸಿದ್ದಾರೆ.
ಆತಂಕದಲ್ಲಿ ಜನರು : ಹುಲಿ ಧಾಳಿಯ ಸರಣಿ ಪ್ರಕರಣ ನಡೆದಿರುವ ಬೆನ್ನಲ್ಲೆ ಈ ವ್ಯಾಪ್ತಿಯ ಜನರು ತಮ್ಮ ಜಾನುವಾರುಗಳನ್ನು ಹೊರಗೆ ಬಿಡಲು ಆತಂಕಗೊಂಡಿದ್ದಾರೆ. ಹುಲಿ ಧಾಳಿ ನಡೆಸಿದ ಬೀರುಗ ಗ್ರಾಮಕ್ಕೆ ಹಸುವಿನ ಕಳೇಬರ ತಿನ್ನಲು ಪ್ರತಿ ರಾತ್ರಿ ಹುಲಿ ಆಗಮಿಸುತ್ತಿದ್ದು, ಸುತ್ತಮುತ್ತಲಿನಲ್ಲ್ಲಿ ಹುಲಿ ಬೀಡು ಬಿಟ್ಟಿರುವ ಆತಂಕ ಜನರಲ್ಲಿ ಮನೆ ಮಾಡಿದೆ. ಇದರೊಂದಿಗೆ ಸುತ್ತಲೂ ಕಾಫಿ ತೋಟವಿರುವದರಿಂದ ತೋಟಗಳಿಗೂ ತೆರಳಲು ಕಾರ್ಮಿಕರು ಕೆಲಸ ಮಾಡಲು ಭಯಪಡುವ ಸ್ಥಿತಿ ಎದುರಾಗಿದೆ